ಕನ್ನಡದಲ್ಲಿ ಶುರುವಾಗಲಿದೆ ಅಯೋಧ್ಯೆಯ ಶ್ರೀರಾಮಮಂದಿರ ಬಯೋಪಿಕ್

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆಯಾದ ಮಹಾಪರ್ವ ಕಾಲವಿದು. ಆದರೆ ಶ್ರೀರಾಮ ತನ್ನ ಜನ್ಮಭೂಮಿಯಲ್ಲಿ ಪ್ರತಿಷ್ಠಾಪನೆಯಾಗಲು 500 ವರ್ಷಗಳು ಕಾಯಬೇಕಾಯಿತು. 1528 ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನಿರ್ಮಾಣವಾಯಿತು. ಆನಂತರ ಆ ಜಾಗದಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾಗಬೇಕೆಂದು ಸಾಕಷ್ಟು ಹೋರಾಟಗಳು‌ ನಡೆದವು. ಈ ವಿವಾದ ಕೋರ್ಟ್ ಮೆಟ್ಟಿಲು ಏರಿತ್ತು. ನೂರಕ್ಕೂ ಹೆಚ್ಚು ವರ್ಷಗಳ ಕಾಲ ಯಾವುದಾದರೂ ಒಂದು ಕೇಸ್ ಕೋರ್ಟ್ ನಲ್ಲಿ ನಡೆದಿದ್ದರೆ ಅದು ಶ್ರೀರಾಮ ಜನ್ಮಭೂಮಿಯದೆ ಇರಬಹುದು. ಕೊನೆಗೂ 2019 ರಲ್ಲಿ ನ್ಯಾಯಾಲಯ ಅಯೋಧ್ಯೆಯಲ್ಲಿ ಶ್ರೀರಾಮನ ದೇವಾಲಯ ನಿರ್ಮಾಣಕ್ಕೆ ಅನುಮತಿ ನೀಡಿತ್ತು. 2024 ರ ಜನವರಿಯಲ್ಲಿ ಅದ್ದೂರಿಯಾಗಿ ಶ್ರೀರಾಮನ ಪ್ರತಿಷ್ಠಾಪನೆಯಾಯಿತು. ಕೋಟ್ಯಾಂತರ ಜನರ ಕನಸು ನನಸ್ಸಾಯಿತು.

ಈ ಅಯೋಧ್ಯೆಯ ಶ್ರೀರಾಮನ ಮಂದಿರದ ಬಯೋಪಿಕ್ ಅನ್ನು ಸಿನಿಮಾ ರೂಪದಲ್ಲಿ ತರಲು ನಿರ್ದೇಶಕ ಶ್ರೀನಿವಾಸರಾಜು ಮುಂದಾಗಿದ್ದಾರೆ. ಈ ಚಿತ್ರದ ಶೀರ್ಷಿಕೆ ಇನ್ನು ನಿಗದಿಯಾಗಿಲ್ಲ. ಆದರೆ “ಸತ್ಯಂ ಶಿವಂ ಸುಂದರಂ” ಎಂಬ ಟ್ಯಾಗ್ ಲೈನ್ ಇದೆ. “ಕೃಷ್ಣಂ ಪ್ರಣಯ ಸಖಿ” ಚಿತ್ರವನ್ನು ನಿರ್ಮಿಸಿರುವ ಪ್ರಶಾಂತ್ ಜಿ ರುದ್ರಪ್ಪ ತ್ರಿಶೂಲ್ ಎಂಟರ್ಟೈನ್ಮೆಂಟ್ ಸಂಸ್ಥೆ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ..

ಸಾಮಾನ್ಯವಾಗಿ ಮನುಷ್ಯರ ಬಯೋಪಿಕ್ ಇರುತ್ತದೆ. ಆದರೆ, ದೇವಸ್ಥಾನವೊಂದರ ಬಯೋಪಿಕ್ ಇರುವುದು ಅಯೋಧ್ಯೆಯ ಶ್ರೀರಾಮಮಂದಿರಕ್ಕೆ ಮಾತ್ರ ಎನ್ನುವುದು ನನ್ನ ಅಭಿಪ್ರಾಯ.‌ ಸುಮಾರು 500 ವರ್ಷಗಳ ಇತಿಹಾಸವನ್ನು ತೆರೆಯ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದೇನೆ. ಕನ್ನಡದಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. ಬಾಬರಿ ಮಸೀದಿ ಗೂ ಮೊದಲು ರಾಜಾ ವಿಕ್ರಮಾದಿತ್ಯ ಪ್ರತಿಷ್ಠಾಪಿಸಿದ ಶ್ರೀರಾಮ ಮಂದಿರದಿಂದ ಈ ಚಿತ್ರದ ಕಥೆ ತೆರೆದುಕೊಳ್ಳುತ್ತದೆ. ಇದರ ಜೊತೆಗೆ ರಾಮಾಯಣದ ಕೆಲವು ಅಂಶಗಳನ್ನು ತೆಗೆದುಕೊಳ್ಳುತ್ತಿದ್ದೇನೆ‌. ಹಾಗಂತ ಇದು ಸಂಪೂರ್ಣ ರಾಮಾಯಣದ ಕಥೆಯಲ್ಲ. ದಶರಥ, ರಾಮ, ಸೀತಾ, ಹನುಮಂತ, ವಾಲಿ ಹಾಗೂ ವಾಲ್ಮೀಕಿ ಈ ಆರು ಪಾತ್ರಗಳು ಮಾತ್ರ ಇರುತ್ತದೆ. ತುಳಿಸಿದಾಸರ ಪಾತ್ರ ಕೂಡ ಈ ಚಿತ್ರದಲ್ಲಿರಲಿದೆ.

ಶ್ರೀರಾಮನ ಆದರ್ಶದ ಗುಣಗಳನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತದೆ. “ಸತ್ಯಂ ಶಿವಂ ಸುಂದರಂ” ಎಂಬ ಟ್ಯಾಗ್ ಲೈನ್ ಈ ಚಿತ್ರಕ್ಕಿದ್ದು, ಮೂರು ಭಾಗಗಳಲ್ಲಿ ಚಿತ್ರ ಬರಲಿದೆ. ಶೀರ್ಷಿಕೆ ಇನ್ನು ನಿಗದಿಯಾಗಿಲ್ಲ. ಚಿತ್ರ ಬಹಳ ಅದ್ದೂರಿಯಾಗಿ ನಿರ್ಮಾಣವಾಗಲಿದ್ದು, ಭಾರತದ ಹೆಸರಾಂತ ಕಲಾವಿದರು ಹಾಗೂ ತಂತ್ರಜ್ಞರು ಈ ಚಿತ್ರದಲ್ಲಿ ಭಾಗಿಯಾಗಲಿದ್ದಾರೆ. ನಾನೇ ಕಥೆ, ಚಿತ್ರಕಥೆ ಬರೆದಿದ್ದೇನೆ. ಶ್ರೀರಾಮನವಮಿಯ ಪರ್ವಕಾಲದಲ್ಲಿ ಈ ನೂತನ ಚಿತ್ರದ ಕುರಿತು ಇಷ್ಟು ಹೇಳಲು ಬಯಸುತ್ತೇನೆ. ಮುಂದಿನ ದಿನಗಳಲ್ಲಿ ಚಿತ್ರದ ಶೀರ್ಷಿಕೆ ಸೇರಿದಂತೆ ಹೆಚ್ಚಿನ ಮಾಹಿತಿ ನೀಡುವುದಾಗಿ ನಿರ್ದೇಶಕ ಶ್ರೀನಿವಾಸರಾಜು ತಿಳಿಸಿದ್ದಾರೆ.

Related Posts

error: Content is protected !!