ಕರ್ಫ್ಯೂ ರಾತ್ರೀಲಿ, ಕೊಲೆಯ ಕಥೆಯಲ್ಲಿ: ಟ್ವಿಸ್ಟು ಟೆಸ್ಟು ಇತ್ಯಾದಿ

ಚಿತ್ರ ವಿಮರ್ಶೆ: ವಿಜಯ್ ಭರಮಸಾಗರ

ಚಿತ್ರ: ‘ನೈಟ್‍ ಕರ್ಫ್ಯೂ’

ನಿರ್ದೇಶನ: ರವೀಂದ್ರ ವೆಂಶಿ

ನಿರ್ಮಾಣ: ಬಿ.ಎಸ್‍. ಚಂದ್ರಶೇಖರ್

ತಾರಾಗಣ: ಮಾಲಾಶ್ರೀ, ರಜನಿ ರಾಘವನ್‍, ಪ್ರಮೋದ್‍ ಶೆಟ್ಟಿ, ರಂಗಾಯಣ ರಘು, ಸಾಧು ಕೋಕಿಲ, ಅಶ್ವಿನ್‍ ಹಾಸನ್, ಬಲ ರಾಜವಾಡಿ, ವರ್ಧನ್‍ ತೀರ್ಥಹಳ್ಳಿ ಇತರರು.

ಅದು ಕೊರೊನಾ ಸಮಯ. ಊರಾಚೆ ಇರುವ ಆಸ್ಪತ್ರೆಗೊಂದು ಕೇಸ್ ಬರುತ್ತೆ. ಅದು ಕೊರೊನಾ ಪಾಸಿಟಿವ್ ಹುಡುಗಿ. ಆದರೆ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲ. ಆ ಹುಡುಗಿ ಕಡೆಯವರು ವೈದ್ಯರ ಜೊತೆ ಚರ್ಚೆ ನಡೆಸುವಾಗಲೇ ಆ ಹುಡುಗಿಯ ಸಾವಾಗುತ್ತೆ. ಆದರೆ ಆ ಸಾವು ಕೊರೊನಾದಿಂದಲ್ಲ. ಹಾಗಾದರೆ ಏನದು? ಅಲ್ಲಿಂದ ಕುತೂಹಲ ಶುರು. ಅಲ್ಲಿ ಏನೆಲ್ಲಾ ಅವಘಡ ನಡೆಯುತ್ತೆ ಅನ್ನೋದೇ ಕಥೆ.

ಈ ಕಥೆ ನಡೆಯೋದು ಕೊರೊನಾ ಸಂದರ್ಭದಲ್ಲಿ. ಲಾಕ್ ಡೌನ್ ವೇಳೆ ನಡೆದ ಘಟನೆ ಎಷ್ಟೊಂದು ಭೀಕರವಾಗಿತ್ತು. ಯಾವ ಮಟ್ಟ ತಲುಪಿತ್ತು ಎಂಬುದು ಎಲ್ಲರಿಗೂ ಗೊತ್ತು. ಆದರೆ, ಅದನ್ನು ದುರ್ಬಳಕೆ ಮಾಡಿಕೊಡವರೆಷ್ಟು ಮಂದಿ ಅನ್ನೋದು ಕೂಡ ಆ ದೇವರಿಗೇ ಗೊತ್ತು.

ಇರಲಿ ಇದು ಸೂಕ್ಷ್ಮ ವಿಷಯ. ಅದನ್ನೇ ಇಟ್ಟುಕೊಂಡು ನೋಡಿಸಿಕೊಂಡು ಹೋಗುವಂತೆ ನಿರ್ದೇಶಕ ರವೀಂದ್ರ ವೆಂಶಿ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ.

ಇಡೀ ಚಿತ್ರ ಆಸ್ಪತ್ರೆಯಲ್ಲಿ ನಡೆಯುತ್ತೆ. ಲಾಕ್ ಡೌನ್ ವೇಳೆ ಅಂಥದ್ದೊಂದು ಘಟನೆ ನಡೆದು ಹೋಯ್ತು ಅನ್ನೋದು ಕೂಡ ಅಚ್ಚರಿ. ಆ ಅಚ್ಚರಿ ಏನೆಂಬುದನ್ನೊಮ್ಮೆ ಸಿನಿಮಾದಲ್ಲೇ ತಿಳಿಯಬೇಕು.

ನೋಡುಗರಿಗೆ ಇಲ್ಲಿ ಟ್ವಿಸ್ಟು ಇದೆ ಹಾಗೆಯೇ ಟೆಸ್ಟೂ ಇದೆ. ಅದೊಂದು ರೀತಿ ಟಾಸ್ಕ್ ಇದ್ದಂತೆ. ತಾಳ್ಮೆಯಿಂದ ನೋಡಿದರೆ ಮಾತ್ರ ಕೊರೊನಾ ವೇಳೆ ನಡೆದ ಕರಾಳ ಸತ್ಯದ ಅರಿವಾಗುತ್ತೆ. ಅಷ್ಟಕ್ಕೂ ಆ ಸತ್ಯವೇನು? ಈ ಪ್ರಶ್ನೆಗೆ ಉತ್ತರ ಒಂದು ಕೊಲೆ!

ಮೊದಲರ್ಧ ಸಿನಿಮಾ ಕೊಂಚ ನಿಧಾನ ಎನಿಸಿದರೂ, ದ್ವಿತಿಯಾರ್ಧ ತಕ್ಕಮಟ್ಟಿಗೆ ಇಂಟ್ರೆಸ್ಟ್ ಎನಿಸುತ್ತೆ ಅದಕ್ಕೆ ಕಾರಣ ಬರುವ ಕೆಲ ತಿರುವು. ಆ ತಿರುವು ಏನೆಂಬ ಕುತೂಹಲ ಇದ್ದರೆ ಸಿನಿಮಾ ನೋಡಿ.

ಕಥೆ ಏನು?

ಕೋವಿಡ್‍ ವೇಳೆ ನೈಟ್‍ ಕರ್ಫ್ಯೂ ಇರುತ್ತೆ. ಆ ಒಂದು ರಾತ್ರಿ ನಡೆಯುವ ಕಥೆ ಇದು. ಪ್ರಾಮಾಣಿಕವಾಗಿ ರೋಗಿಗಳ ಉಪಚರಿಸೋ ವೈದ್ಯೆ ದುರ್ಗಾ (ಮಾಲಾಶ್ರೀ) ಅವರ ಜೊತೆ ಕಿರಿಯ ವೈದ್ಯೆ ವೇದ (ರಂಜನಿ ರಾಘವನ್‍) ಕೆಲಸ ಮಾಡುವ ಆಸ್ಪತ್ರೆಗೆ ಒಂದು ಕೋವಿಡ್ ಕೇಸ್ ಬರುತ್ತೆ. ಅಲ್ಲೊಂದು ಘಟನೆ ನಡೆಯುತ್ತೆ. ಆ ಘಟನೆ ಇಡೀ ಕಥೆಯ ವೇಗ ಹೆಚ್ಚಿಸುತ್ತೆ. ಒಂದು ರೀತಿ ರಣರಂಗವೇ ನಡೆಯುತ್ತೆ. ಅದಕ್ಕೆ ಕಾರಣ ಕೊಲೆ!! ಅರೇ ಕೋವಿಡ್ ಆಸ್ಪತ್ರೆಯಲ್ಲಿ ಕೊಲೆಯೇ? ಈ ಪ್ರಶ್ನೆ ಸಹಜ. ಆದರೆ, ನಿರ್ದೇಶಕರು ಆ ಕೊಲೆ ಯಾಕಾಯಿತು, ಹೇಗಾಯಿತು ಎಂಬುದನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಅಷ್ಟಕ್ಕೂ ಕೊಲೆ ಮಾಡಿದ್ಯಾರು ಯಾಕೆ ಎಂಬುದೇ ಸಿನಿಮಾದ ಹೈಲೆಟ್.

ಮಾಲಾಶ್ರೀ ಇದ್ದ ಮೇಲೆ ಹೊಡೆದಾಟ ಇರದಿದ್ದರೆ ಹೇಗೆ? ಅವರಿಲ್ಲಿ ಡಾಕ್ಟರ್. ಆದರೂ ಎದುರಾಳಿಗಳನ್ನು ಹಿಗ್ಗಾಮುಗ್ಗ ಜಾಡಿಸುತ್ತಾರೆ. ಇಲ್ಲಿ ಮಾಲಾಶ್ರೀ ಫ್ಯಾನ್ಸ್ ಗೆ ಖಂಡಿತ ಫೈಟ್ ಇಷ್ಟವಾಗುತ್ತೆ. ಭರ್ಜರಿ ಫೈಟ್ಸ್ ಇಲ್ಲಿ ಕಾಣಬಹುದು.

ಸಿನಿಮಾ ಗಂಭೀರವಾಗಿ ಸಾಗುತ್ತಿರುವ ಮಧ್ಯೆ ಸಾಧುಕೋಕಿಲ ಅವರ ಹಾಸ್ಯ ಕಾಣಿಸಿಕೊಂಡು ಸ್ವಲ್ಪ ತಾಳ್ಮೆ ಕೆಡಿಸುತ್ತೆ. ಅದು ಬಿಟ್ಟರೆ ಉಳಿದಂತೆ ಯಾವ ಸಮಸ್ಯೆ ಇಲ್ಲ. ಒಂದೇ ಕಾಸ್ಟ್ಯೂಮ್ ಬಹುತೇಕ ಒಂದೇ ಲೊಕೇಷನ್ ಇಷ್ಟರಲ್ಲೇ ಕಥೆ ಕಟ್ಟಿಕೊಡುವ ಜಾಣತನದಲ್ಲಿ ನಿರ್ದೇಶಕರು ಸೈ ಎನಿಸಿಕೊಂಡಿದ್ದಾರೆ. ಸಣ್ಣಪುಟ್ಟ ಮಿಸ್ಟೇಕ್ ಇಲ್ಲೂ ಇದೆ. ಅದನ್ನು ಹೊರತು ಪಡಿಸಿದರೆ ಕೊರೊನಾ ‘ ‘ಭಯ’ ಕಾಡುವುದಿಲ್ಲ.

ಯಾರು ಹೇಗೆ ನಟಿಸಿದ್ದಾರೆ?

ಮಾಲಾಶ್ರೀ ಅವರಿಲ್ಲಿ ವೈದ್ಯರಾಗಿ ಇಷ್ಟವಾಗುವುದರ ಜೊತೆಗೆ ಮಾನವೀಯತೆಗಾಗಿ ಹೊಡೆದಾಡುವ ದುರ್ಗೆಯಾಗಿಯೂ ಗಮನ ಸೆಳೆಯುತ್ತಾರೆ. ಮೊದಲಾರ್ಧ ಅಸಹಾಯಕಿ ಎನಿಸುವ ಅವರು ದ್ವಿತಿಯಾರ್ಧ ಅಬ್ಬರಿಸಿ ಬೊಬ್ಬರಿಸುತ್ತಾರೆ.

ಪ್ರಮೋದ್ ಕೂಡ ಸಿಕ್ಕ ಪಾತ್ರಕ್ಕೆ ಮೋಸ ಮಾಡದೆ ಹೈಲೆಟ್ ಆಗಿದ್ದಾರೆ. ಮಾಲಾಶ್ರೀ ಎದುರು ಹೊಡೆದು ಹೊಡೆಸಿಕೊಳ್ಳುವ ನಟನಾಗಿ ಸೈ ಎನಿಸಿಕೊಂಡಿದ್ದಾರೆ. ಅಶ್ವಿನ್ ಹಾಸನ್, ವರ್ದನ್ ತೀರ್ಥಹಳ್ಳಿ ಬಲರಾಜವಾಡಿ ಇಲ್ಲಿ ವಿಲನ್ ಗಳಾಗಿ ಗಮನ ಸೆಳೆದಿದ್ದಾರೆ. ರಂಜನಿ ಅವರಿಲ್ಲಿ ನಿರ್ದೇಶಕರು ಹೇಳಿದ್ದನ್ನಷ್ಟೇ ಮಾಡಿದ್ದಾರೆ. ರಂಗಾಯಣ ರಘು ಇನ್ಸ್ ಪೆಕ್ಟರ್ ಆಗಿ ಖದರ್ ತೋರಿಲ್ಲ. ಸಾಧು ಕೋಕಿಲ, ಮಂಜು ಅವರು ಹೊರತಾಗಿಲ್ಲ.

ಪ್ರಮೋದ್‍ ಭಾರತೀಯ ಅವರು ತಮ್ಮ ಕ್ಯಾಮೆರಾ ಕೈ ಚಳಕದಲ್ಲಿ ಕತ್ತಲಾಟವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಹಿನ್ನೆಲೆ ಸಂಗೀತ ಅಷ್ಟಾಗಿ ರುಚಿಸಲ್ಲ.

Related Posts

error: Content is protected !!