ಚಿತ್ರ ವಿಮರ್ಶೆ: ವಿಜಯ್ ಭರಮಸಾಗರ
ರೇಟಿಂಗ್: 3/5
ನಿರ್ದೇಶಕ: ಸಂತೋಷ್ ಆನಂದ್ ರಾಮ್
ನಿರ್ಮಾಣ : ಹೊಂಬಾಳೆ ಫಿಲಂಸ್
ತಾರಾಗಣ: ಯುವರಾಜಕುಮಾರ್, ಸಪ್ತಮಿ ಗೌಡ, ಸುಧಾರಾಣಿ, ಅಚ್ಯುತಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಕಿಶೋರ್, ಹಿತ ಮತ್ತು ಇತರರು.
‘ಒಬ್ಬನಿಗೋಸ್ಕರ ಒಂದು ಗುಂಪು.
ಒಂದು ಗುಂಪಿಗೋಸ್ಕರ ಒಬ್ಬ…’ ಇಷ್ಟು ಹೇಳಿದ ಮೇಲೆ ಯುವ ಒಂದು ಸ್ಟೂಡೆಂಟ್ ಗ್ಯಾಂಗ್ ವಾರ್ ಸಿನಿಮಾ ಅನ್ನೋದು ಗೊತ್ತಾಗದೇ ಇರದು.
ಹೌದು ಯುವ ಒಂದು ಕಾಲೇಜ್ ಬ್ಯಾಕ್ ಗ್ರೌಂಡ್ ನಲ್ಲಿ ಸಾಗುವ ಸಿನಿಮಾ. ಪಕ್ಕಾ ಯೂತ್ಸ್ ಟಾರ್ಗೆಟ್ ಮಾಡಿ ಮಾಡಿರುವ ಚಿತ್ರ. ಕಥೆಯಲ್ಲಿ ಹೇಳಿಕೊಳ್ಳದ ‘ಪವರ್ ‘ ಇರದಿದ್ದರೂ ಹೀರೋ ಮಾಡುವ ಫೈಟು ಮತ್ತು ಡ್ಯಾನ್ಸ್ ನಲ್ಲಿ ಆ ‘ಪವರ್’ ಕಾಣಬಹುದು.
ನಿರೀಕ್ಷೆ ಇಟ್ಟುಕೊಂಡು ಹೋದವರಿಗೆ ಸಿನಿಮಾ ನಿರಾಸೆ ಮಾಡಲ್ಲ. ನಿರ್ದೇಶಕರು ಇಲ್ಲಿ ಸೆಕೆಂಡ್ ಹಾಫ್ ನಲ್ಲಿರುವ ಹಿಡಿತವನ್ನು ಫಸ್ಟ್ ಹಾಫ್ ನಲ್ಲಿ ಇಟ್ಟುಕೊಂಡಿದ್ದರೆ ಯುವ ಇನ್ನಷ್ಟು ಇಷ್ಟವಾಗುತ್ತಿದ್ದ. ಆದರೂ ಮಾಸ್ ಮತ್ತು ಕ್ಲಾಸ್ ಗೇನೂ ಇಲ್ಲಿ ಕಮ್ಮಿ ಇಲ್ಲ. ಇಲ್ಲಿ ಹೀರೋ ಹೊಡೆದಾಡುವ ಎನರ್ಜಿ ಇದೆ. ಹೋರಾಡುವ ಫೋರ್ಸ್ ಇದೆ. ಸಣ್ಣ ದ್ವೇಷವಿದೆ, ಬದುಕಿನ ಪ್ರೀತಿ ತುಂಬಿದೆ, ಗುರಿ ಇದೆ, ಎಲ್ಲಕ್ಕಿಂತಲೂ ಹೆಚ್ಚಾಗಿ ಅಪ್ಪ ಮಗನ ಬಾಂಧವ್ಯ ಮೇಳೈಸಿದೆ. ಇವೆಲ್ಲವನ್ನೂ ಅಷ್ಟೇ ಚೆನ್ನಾಗಿ ಕಟ್ಟಿಕೊಡಲಾಗಿದೆ.
ಮೊದಲರ್ಧ ಕಾಲೇಜ್ ಸ್ಟೋರಿಯಲ್ಲೇ ಸಾಗುವ ಚಿತ್ರ, ದ್ವಿತೀಯಾರ್ಧದಲ್ಲಿ ಒಂದಷ್ಟು ತಿರುವುಗಳೊಂದಿಗೆ ನೋಡುವ ಕುತೂಹಲ ಹೆಚ್ಚಿಸುತ್ತೆ. ಆ ಕುತೂಹಲ ಏನು ಅನ್ನೋ ಪ್ರಶ್ನೆ ಇದ್ದರೆ ಒಮ್ಮೆ ಯುವ ಸಿನಿಮಾ ನೋಡಲ್ಲಡ್ಡಿಯಿಲ್ಲ.
ಕಥೆ ಹೇಗೇ ಇರಲಿ, ಭರ್ಜರಿ ಮೇಕಿಂಗ್ ಮುಖ್ಯ. ಆ ಮೇಕಿಂಗ್ ಇಲ್ಲಿ ಹೈಲೆಟ್. ಚಿತ್ರ ಸ್ವಲ್ಪ ಲ್ಯಾಗ್ ಎನಿಸುತ್ತೆ. ಕೆಲವು ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಕಥೆ ಎಲ್ಲೋ ಒಂದು ಕಡೆ ಟ್ರಾಕ್ ಬದಲಿಸಿತಾ ಅನ್ನುವಷ್ಟರಲ್ಲಿ ಬರುವ ಎರಡು ಹಾಡು ಮತಗತದೇ ಟ್ರಾಕ್ ಮೇಲೆ ಸಾಗುತ್ತದೆ. ಈಗಿನ ಟ್ರೆಂಡ್ ಇರೋದೇ ಮಾಸ್. ಆ ಮಾಸ್ ಫೀಲ್ ಕಟ್ಟಿಕೊಡಲು ನಿರ್ದೇಶಕರು ಹರಸಾಹಸ ಪಟ್ಟಿರೋದು ನಿಜ. ಸಿನಿಮಾದ ಹೈಲೆಟ್ ಅಂದರೆ ಫೈಟು. ಇನ್ನು ಇಲ್ಲೊಂದು ವಿಷಯ ಹೇಳಲೇಬೇಕು. ನಿರ್ದೇಶಕರು ಮೊದಲಾರ್ಧದ ಪ್ರತಿ ಫ್ರೇಮಲ್ಲೂ ಸಿಗರೇಟ್, ಡ್ರಿಂಕ್ಸ್ ಗೆ ಹೆಚ್ಚು ಜಾಗ ಕೊಟ್ಟಿದ್ದಾರೆ. ಅದು ಕೊಂಚ ಅತಿಯಾಯ್ತು ಅನಿಸೋದು ಬಿಟ್ಟರೆ ಹೀರೋಗೆ ಇನ್ನಷ್ಟು ಧಮ್ ಅನ್ನುವ ಕಥೆ ಕಟ್ಟಬಹುದಿತ್ತು. ಆ ಪ್ರಯತ್ನ ಇಲ್ಲಾಗಿಲ್ಲ.
ಏನದು ಕಥೆ?
ಮಂಗಳೂರು ಎಂಜಿನಿಯರಿಂಗ್ ಕಾಲೇಜ್ ನಲ್ಲಿ ಓದುವ ಯುವ ಹಾಸ್ಟೆಲ್ ಹುಡುಗರ ಫೇವರೇಟ್. ಕಾಂಪ್ರಮೈಸ್ ಅನ್ನೋದು ಅವನ ಲೈಫಲ್ಲೂ ಇಲ್ಲ, ಲವ್ವಲ್ಲು ಇಲ್ಲ. ಅವನನ್ನು ತಡೆಯೋಕು ಆಗಲ್ಲ, ತಡ್ಕೋಳೋಕೂ ಆಗಲ್ಲ. ಅಲ್ಲಿನ ಲೋಕಲ್ ಹುಡುಗರ ಮಧ್ಯೆ ಆಗಾಗ ಕಿರಿಕ್ ಶುರುವಾಗುತ್ತೆ. ಈಗೋ ಸಮಸ್ಯೆಯಿಂದ ದೊಡ್ಡ ಹೊಡೆದಾಟವಾಗಿ ಸ್ಟುಡೆಂಟ್ ಗ್ಯಾಂಗ್ ವಾರ್ ಆಗುವಷ್ಟರಮಟ್ಟಿಗೆ ಡ್ರಾಮ ನಡೆಯುತ್ತೆ. ಆ ಹೊಡೆದಾಟದಲ್ಲೇ ಮೊದಲರ್ಧ ಮುಗಿಯುತ್ತೆ.
ಇತ್ತ ಅಪ್ಪನಿಗೆ ಹೊಡೆದಾಡೋ ಮಗ ಅಂದರೆ ಅಲರ್ಜಿ. ಅತ್ತ ತನ್ನ ಮಗಳ ಮದ್ವೆ ಮಾಡಲು ಹರಸಾಹಸ ಮಾಡುವ ಅಪ್ಪ ಸಾಲದ ಸುಳಿಯಲ್ಲಿ ಒದ್ದಾಡುತ್ತಾನೆ. ಅಲ್ಲೊಂದು ಘಟನೆ ನಡೆಯುತ್ತೆ. ಆ ಘಟನೆಯೇ ಸಿನಿಮಾದ ಮತ್ತೊಂದು ತಿರುವು. ಇನ್ನು ಯುವ ಅಪ್ಪ ಮಾಡಿದ ಸಾಲ ತೀರಿಸಲು ಮುಂದಾಗುತ್ತಾನೋ, ತನಗಿರುವ ಗುರಿಯೊಂದನ್ನು ಮುಟ್ಟಿ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಾನೋ ಅನ್ನೋದು ಕಥೆ. ಅದನ್ನು ತಿಳಿಯುವ ಕುತೂಹಲ ಇದ್ದರೆ ಒಮ್ಮೆ ಸಿನಿಮಾ ನೋಡಿ.
ಯಾರ ನಟನೆ ಹೇಗೆ?
ಯುವರಾಜಕುಮಾರ್ ಅವರ ಮೊದಲ ಸಿನಿಮಾ ಇದು. ಆದರೆ, ಪಕ್ಕಾ ಹೀರೋ ಮೆಟೀರಿಯಲ್ ಆಗಿ ಕಾಣುತ್ತಾರೆ. ಫೈಟು, ಡ್ಯಾನ್ಸ್ ನಲ್ಲಿ ಇಷ್ಟವಾಗುತ್ತಾರೆ. ಕಣ್ಣಲ್ಲಿ ಫೋರ್ಸ್ ಇದೆ. ಡೈಲಾಗ್ ಹರಿ ಬಿಡುವಲ್ಲಿ ಇನ್ನಷ್ಟು ಫೋರ್ಸ್ ಬೇಕು. ಮಾಸ್ ಹೀರೋಗೆ ಬೇಕಾದ ಎಲ್ಲಾ ಕ್ವಾಲಿಟೀಸ್ ಕೂಡ ಇದೆ. ಕನ್ನಡದಲ್ಲಿ ಹೀರೊಲೋ ಆಗಿ ಗಟ್ಟಿಯಾಗಿ ನಿಲ್ಲುವ ಎಲ್ಲ ಗುಣ ಲಕ್ಷಣಗಳು ಇವೆ. ಮೊದಲ ಬಾಲ್ ನಲ್ಲಿ ಸಿಕ್ಸರ್ ಬಾರಿಸದಿದ್ದರೂ ಭರ್ಜರಿ ಬೌಂಡರಿ ದಾಟಿಸಿದ ತೃಪ್ತಭಾವ ಅವರದು. ಸಣ್ಣಪುಟ್ಟ ಮಿಸ್ಟೇಕ್ಸ್ ಎಲ್ಲವೂ ಅವರ ಸ್ಟಂಟ್ ನಲ್ಲಿ ಮರೆಯಾಗುತ್ತವೆ.
ಸಪ್ತಮಿ ಅವರ ಪಾತ್ರಕ್ಕೆ ಹೆಚ್ಚು ಸ್ಕೋಪ್ ಇಲ್ಲ.. ನಿರ್ದೇಶಕರು ಹೇಳಿದ್ದನ್ನಷ್ಟೇ ಮಾಡಿದ್ದಾರೆ.
ಅಚ್ಯುತ ಅವರಿಲ್ಲಿ ಅಪ್ಪನಾಗಿ ಆಪ್ತವಾಗುತ್ತಾರೆ. ಸುಧಾರಾಣಿ ಅಮ್ಮನಾಗಿ ಇಷ್ಟವಾಗುತ್ತಾರೆ. ಗೋಪಾಲಕೃಷ್ಣ ದೇಶಪಾಂಡೆ ಗಮನ ಸೆಳೆಯುತ್ತಾರೆ. ಹಾಗೆಯೆ ಕಿಶೋರ್ ಪಾತ್ರ ಕೂಡ ಯುವನ ಓಟಕ್ಕೆ ಸಾಥ್ ನೀಡಿದೆ.
ಸಂಗೀತ ನಿರ್ದೇಶಕ ಅಜನೀಶ್ ಅವರ ಎರಡು ಹಾಡು ಪರವಾಗಿಲ್ಲ. ಹಿನ್ನೆಲೆ ಸಂಗೀತಕ್ಕಿನ್ನೂ ಧಮ್ ಬೇಕಿತ್ತು. ಛಾಯಾಗ್ರಾಹಕ ಶ್ರೀಷ ಕೂದುವಳ್ಳಿ ಅವರ ಕ್ಯಾಮರಾ ಕೈಚಳಕ ಯುವ ಅಂದವನ್ನು ಹೆಚ್ಚಿಸಿದೆ.