ಇದು ಕೈ ಇರದ ಸಾಧಕನ ಚಿತ್ರ: ಅರಬ್ಬೀ ಟ್ರೇಲರ್ ಬಿಡುಗಡೆ

ಸಾಧಿಸುವ ಛಲವಿದ್ದರೆ ಯಾವುದೂ ಅಸಾಧ್ಯವಲ್ಲ, ಅಂಗವಿಕಲತೆಯೂ ಸಹ ಅಡ್ಡಿಯಾಗಲಾರದು ಎಂದು ವಿಶ್ವಾಸ್ ಎಂಬ ವಿಶೇಷಚೇತನ ಯುವಕನೊಬ್ಬ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಕಥೆಯನ್ನು ನಿರ್ದೇಶಕ ರಾಜ್‌ಕುಮಾರ್ ಅವರು ಅರಬ್ಬೀ ಎಂಬ ಚಿತ್ರದ ಮೂಲಕ ಹೇಳಹೊರಟಿದ್ದಾರೆ.

ಚಿಕ್ಕ ವಯಸ್ಸಿನಲ್ಲಿ ತಂದೆ-ತಾಯಿಯ ಜೊತೆಗೆ ತನ್ನ ಎರಡೂ ಕೈಗಳನ್ನು ಕಳೆದುಕೊಳ್ಳುವ ವಿಶ್ವಾಸ್, ತನ್ನ ಅಂಗವಿಕಲತೆಯ ಕಾರಣದಿಂದಲೇ ಸಮಾಜದಲ್ಲಿ ಸಾಕಷ್ಟು ಅವಮಾನ ಅನುಭವಿಸುತ್ತಾನೆ. ನಂತರ ತನ್ನನ್ನು ಅವಮಾನಿಸಿದವರೆದುರೇ ಸಾಧನೆಮಾಡಿ ತೋರಿಸಬೇಕೆಂದು ನಿರ್ಧರಿಸಿ, ಹಠ, ಆತ್ಮವಿಶ್ವಾಸದಿಂದಲೇ ಗೆಲುವು ಸಾಧಿಸುತ್ತಾನೆ. ಸ್ವಿಮ್ಮಿಂಗ್ ಕೋಚ್ ಆಗಿ ನಾಯಕನಿಗೆ ಸ್ಪೂರ್ತಿ ತುಂಬುವ ಪಾತ್ರವನ್ನು ಅಣ್ಣಾಮಲೈ ಅವರು ನಿರ್ವಹಿಸಿದ್ದಾರೆ. ನಾಯಕನ ಗೆಳತಿಯೂ ಬೆನ್ನೆಲುಬಾಗಿ ನಿಲ್ಲುತ್ತಾಳೆ. ವಿಶ್ವಾಸ್ ಕೊನೆಗೂ ಅಂದುಕೊಂಡದ್ದನ್ನು ಸಾಧಿಸಿ ತೋರಿಸಿದನೇ ಇಲ್ಲವೇ ಎನ್ನುವುದೇ ಅರಬ್ಬೀ ಚಿತ್ರದ ಕಾನ್ಸೆಪ್ಟ್. ಶ್ರೀ ವಿಜಯ ರಾಘವೇಂದ್ರ ಪ್ರೊಡಕ್ಷನ್ಸ್ ಮೂಲಕ ಚೇತನ್ ಸಿ.ಎಸ್. ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ, ಇತ್ತೀಚೆಗೆ ಈ ಚಿತ್ರದ ಟ್ರೈಲರ್‌ನ್ನು ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್ ಅವರು ಬಿಡುಗಡೆಗೊಳಿಸಿದರು. ಸರಿಗಮಪ ಖ್ಯಾತಿಯ ಕಂಬದ ರಂಗಯ್ಯ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಆನಂದ್ ದಿಂಡವಾರ ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ.

ವೇದಿಕೆಯಲ್ಲಿ ನಿರ್ಮಾಪಕ ಚೇತನ್ ಸಿ.ಎಸ್. ಮಾತನಾಡಿ ಈ ಹಿಂದೆ ಮಾಚಿದೇವ ಎಂಬ ಚಿತ್ರ ಮಾಡಿದ್ದೆ, ನಿರ್ದೇಶಕ ರಾಜ್‌ಕುಮಾರ್ ಬಂದು ಈ ಕಾನ್ಸೆಪ್ಟ್ ಹೇಳಿದಾಗ ಇಷ್ಟವಾಯಿತು. ಛಲವಿದ್ದರೆ ಏನನ್ನಾದರೂ ಮಾಡಿ ತೋರಿಸಬಹುದು ಎಂದು ಈ ಚಿತ್ರದಲ್ಲಿ ತೋರಿಸಿದ್ದೇವೆ, ಉಡುಪಿ, ಅರಬ್ಬೀ ಸಮುದ್ರದಲ್ಲಿ 32 ದಿನಗಳವರೆಗೆ ಚಿತ್ರೀಕರಿಸಿದ್ದೇವೆ, ಎಂದು ಹೇಳಿದರು.

ನಿರ್ದೇಶಕ ರಾಜಕುಮಾರ್ ಮಾತನಾಡಿ ಕಳೆದ 18 ವರ್ಷಗಳಿಂದ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಕಾರ್ಯಕ್ರಮವೊಂದರಲ್ಲಿ ವಿಶ್ವಾಸ್‌ರನ್ನು ನೋಡಿ, ಅವರ ಮೇಲೇ ಒಂದು ಸಿನಿಮಾ ಮಾಡಬಾರದೇಕೆ ಅನಿಸಿತು, ವಿಶ್ವಾಸ್ ರನ್ನು ಒಪ್ಪಿಸಿ, ನಂತರ ಕೋಚ್ ಪಾತ್ರಕ್ಕೆ ಅಣ್ಣಾ ಮಲೈ ಅವರನ್ನು ಕರೆತಂದೆವು, ಅವರು ಯಾವುದೇ ಸಂಭಾವನೆ ಪಡೆಯದೆ ಅಭಿನಯಿಸಿದರು. ಚಿತ್ರವೀಗ ಬಿಡುಗಡೆಗೆ ಸಿದ್ದವಿದೆ ಎಂದು ಹೇಳಿದರು.

ನಂತರ ನಾಯಕ ವಿಶ್ವಾಸ್ ಮಾತನಾಡಿ ಮೊದಲಬಾರಿಗೆ ಸಿನಿಮಾದಲ್ಲಿ ಆಕ್ಟ್ ಮಾಡಿದ್ದೇನೆ. ಅಣ್ಣಾಮಲೈ ಅವರೂ ನನ್ನ ಬಗ್ಗೆ ಕೇಳಿ ಒಪ್ಪಿದರು. ಚಿತ್ರದಲ್ಲಿ ನಾನೊಬ್ಬ ಈಜುಗಾರನಾಗಿ ಕಾಣಿಸಿಕೊಂಡಿದ್ದೇನೆ. ದೇವರ ಮೇಲಿನ ಕೋಪವನ್ನು ಹೇಗೆ ವ್ಯಕ್ತಪಡಿಸುವೆ, ದಿನನಿತ್ಯದ ಕೆಲಸಗಳನ್ನು ಹೇಗೆ ಮಾಡಿಕೊಳ್ಳುವೆ. ಸೊಸೈಟಿ ನನ್ನನ್ನು ಯಾವರೀತಿ ನೋಡುತ್ತದೆ ಎಂಬುದನ್ನೂ ಚಿತ್ರದಲ್ಲಿ ತೋರಿಸಿದ್ದಾರೆ. ಈವರೆಗೆ ನಾನು ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಗಳಿಸಿದ್ದೇನೆ ಎಂದು ಹೇಳಿದರು.

ಸಂಗೀತ ನಿರ್ದೇಶಕ ಕಂಬದ ರಂಗಯ್ಯ ಮಾತನಾಡಿ ಹಂಸಲೇಖ ಅವೇ ನನಗೆ ಸ್ಪೂರ್ತಿ. ವೇದಿಕೆಯಲ್ಲಿ ಹಾಡ್ತಿದ್ದ ನನ್ನನ್ನು ಕರೆದು ಈ ಅವಕಾಶ ನೀಡಿದರು. ಚಿತ್ರದಲ್ಲಿ 2 ಹಾಡುಗಳಿದ್ದು, ಚಂದನ್ ಶೆಟ್ಟಿ, ರಾಜೇಶ್ ಕೃಷ್ಣನ್ ಹಾಡಿದ್ದಾರೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿದ್ದು ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್, ಉಪಾಧ್ಯಕ್ಷ ವೆಂಕಟೇಶ್, ಯಶವಂತಪುರ ಸರ್ಕಲ್ ಇನ್ಸ್ಪೆಕ್ಟರ್ ಅಜಯ್ ಸಾರಥಿ, ನಾಗೇಂದ್ರ ಅರಸ್, ವಿಜಯ್ ಚೆಂಡೂರ್ ಮುಂತಾದವರು ಚಿತ್ರದ ಬಗ್ಗೆ ಮಾತನಾಡಿದರು. ವಿಶ್ವಾಸ್‌ರಂಥ ವಿಶೇಷಚೇತನರಿಗೆ ನಮ್ಮ ಸಮಾಜ ಬರೀ ಅನುಕಂಪ ತೋರಿಸದೆ, ಅವರ ಪ್ರತಿಭೆಗೆ ತಕ್ಕಂತೆ ಅವಕಾಶಗಳನ್ನು ಕೊಟ್ಟರೆ, ದೊಡ್ಡ ಸಾಧನೆ ಮಾಡುವರು ಎನ್ನುವುದೇ ಈ ಚಿತ್ರದ ಸಂದೇಶ.

Related Posts

error: Content is protected !!