ಕೋರ ಹಾಡು ಬಂತು: ಇದು ಸುನಾಮಿ ಕಿಟ್ಟಿ ಚಿತ್ರ

ರತ್ನಮ್ಮ‌ ಮೂವೀಸ್ ಲಾಂಛನದಲ್ಲಿ ಪಿ.ಮೂರ್ತಿ ನಿರ್ಮಿಸಿರುವ, ಒರಟ ಶ್ರೀ ನಿರ್ದೇಶನದ ಹಾಗೂ ರಿಯಾಲಿಟಿ ಶೋ ಮೂಲಕ ನಾಡಿನ ಜನರ ಗಮನ ಸೆಳೆದಿದ್ದ ಸುನಾಮಿ ಕಿಟ್ಟಿ ನಾಯಕನಾಗಿ ನಟಿಸಿರುವ “ಕೋರ” ಚಿತ್ರದ “ಬಾನಿನಿಂದ” ಹಾಡು ಇತ್ತೀಚಿಗೆ ಅದ್ದೂರಿಯಾಗಿ ಬಿಡುಗಡೆಯಾಯಿತು. ಮಹರ್ಷಿ ಆನಂದ ಗುರೂಜಿ ಅವರು ಗೊಲ್ಲಹಳ್ಳಿ ಶಿವಪ್ರಸಾದ್ ಬರೆದಿರುವ, ರವೀಂದ್ರ ಸೊರಗಾವಿ ಅವರು ಹಾಡಿರುವ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಬಿ.ಆರ್.ಹೇಮಂತ್ ಕುಮಾರ್ ಈ ಚಿತ್ರದ ಸಂಗೀತ ನಿರ್ದೇಶಕರು.

“ಕೋರ” ಎಂದರೆ ಬುಡಕಟ್ಟು ಜನಾಂಗದ ಹೆಸರು ಎಂದು ಮಾತನಾಡಿದ ನಿರ್ಮಾಪಕ ಪಿ.ಮೂರ್ತಿ, ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ ಬಿಡುಗಡೆ ಹಂತ ತಲುಪಿದೆ. ಏಪ್ರಿಲ್ ನಲ್ಲಿ ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ. ಒರಟ ಶ್ರೀ ಅವರ ನಿರ್ದೇಶನದಲ್ಲಿ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಸುನಾಮಿ ಕಿಟ್ಟಿ ಸೇರಿದಂತೆ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರು ನಮ್ಮ ಚಿತ್ರಕ್ಕಾಗಿ ಬಹಳ ಕಷ್ಟಪಟ್ಟಿದ್ದಾರೆ. ಏಕೆಂದರೆ ನಮ್ಮ ಚಿತ್ರದ ಚಿತ್ರೀಕರಣ ಬಹುತೇಕ ನಡೆದಿರುವುದು ಚಿಕ್ಕಮಗಳೂರು, ಹೊರನಾಡು, ಸಕಲೇಶಪುರದ ಸುತ್ತಲ್ಲಿನ ಅರಣ್ಯ ಪ್ರದೇಶದಲ್ಲಿ.

ಆ ಸ್ಥಳಗಳಲ್ಲಿ ಅನುಕೂಲತೆ ಕಡಿಮೆ. ಅಂತಹ ಸ್ಥಳಗಳಲ್ಲೂ ಯಾವುದೇ ಅಡೆತಡೆ ಇಲ್ಲದೆ ಚಿತ್ರೀಕರಣವಾಗಲು ತಂಡದ ಸಹಕಾರವೇ ಕಾರಣ. ಇನ್ನು ಹೇಮಂತ್ ಕುಮಾರ್ ಅವರು ಸಂಗೀತ ನೀಡಿರುವ ಎಲ್ಲಾ ಹಾಡುಗಳು ಚೆನ್ನಾಗಿದೆ. ವಿಶೇಷವಾಗಿ ಇಂದು ಬಿಡುಗಡೆಯಾಗಿರುವ “ಬಾನಿನಿಂದ” ಹಾಡು ಎಲ್ಲರ ಮನಸ್ಸಿಗೂ ಹತ್ತಿರವಾಗುತ್ತದೆ. ಹಾಡು ಬಿಡುಗಡೆ ಮಾಡಿಕೊಟ್ಟ ಆನಂದ್ ಗುರೂಜಿ ಅವರಿಗೆ ಮತ್ತು ಆಗಮಿಸಿರುವ ಗಣ್ಯರಿಗೆ ಧನ್ಯವಾದ ಎಂದರು.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ನಿರ್ದೇಶಿಸಲು ಅವಕಾಶ ಮಾಡಿಕೊಟ್ಟ ನಿರ್ಮಾಪಕರಿಗೆ ಧನ್ಯವಾದ. ನಮ್ಮ ಚಿತ್ರದಲ್ಲಿ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಇದೆ. ಅವರು ಕೊಟ್ಟ ದುಡ್ಡಿಗೆ ಮೋಸ ಮಾಡದ ಚಿತ್ರವಿದು. ಸುನಾಮಿ ಕಿಟ್ಟಿ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಚರಿಶ್ಮಾ “ಕೋರ” ಚಿತ್ರದ ನಾಯಕಿ. ನಿರ್ಮಾಪಕ‌ ಪಿ. ಮೂರ್ತಿ ಖಳನಾಯಕನಾಗಿ ಅಭಿನಯಿಸಿದ್ದಾರೆ. ಎಲ್ಲರೂ ಚಿತ್ರ ನೋಡಿ. ಪ್ರೋತ್ಸಾಹ ನೀಡಿ ಎಂದರು ನಿರ್ದೇಶಕ ಒರಟ ಶ್ರೀ.

ನನ್ನನ್ನು ನಾಯಕನನ್ನಾಗಿ ಮಾಡಿದ ಪಿ.ಮೂರ್ತಿ ಅವರಿಗೆ ಧನ್ಯವಾದ ತಿಳಿಸಿತ್ತಾ, ಹುಟ್ಟುಹಬ್ಬದ ಶುಭಾಶಯ ಕೂಡ ಹೇಳುತ್ತೇನೆ. ಅವರ ಹುಟ್ಟುಹಬ್ಬದ ದಿನ ಈ ಹಾಡು ಬಿಡುಗಡೆಯಾಗಿರುವುದು ವಿಶೇಷ. ರಿಯಾಲಿಟಿ ಶೋ ಮೂಲಕ ಪರಿಚಿತನಾದ ನನಗೆ ಕರುನಾಡ ಜನತೆ ನೀಡಿರುವ ಪ್ರೀತಿ ಅಪಾರ. ಅದೇ ಪ್ರೀತಿ ಈಗಲೂ ಮುಂದುವರೆಯಲಿ ಎಂದು ಸುನಾಮಿ ಕಿಟ್ಟಿ ತಿಳಿಸಿದರು.

ಸಹ ನಿರ್ಮಾಪಕ ಚೆಲುವರಾಜು, ನಾಯಕಿ ಚರಿಷ್ಮಾ, ನಟರಾದ ಎಂ.ಕೆ.ಮಠ, ಮುನಿ, ಸಂಗೀತ ನಿರ್ದೇಶಕ ಹೇಮಂತ್ ಕುಮಾರ್, ಛಾಯಾಗ್ರಾಹಕ ಸೆಲ್ವಂ, ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್, ಗಾಯಕ ರವೀಂದ್ರ ಸೊರಗಾವಿ ಮುಂತಾದ ಚಿತ್ರತಂಡದ ಸದಸ್ಯರು “ಕೋರ” ಚಿತ್ರದ ಕುರಿತು ಮಾತನಾಡಿದರು.

Related Posts

error: Content is protected !!