ಕನ್ನಡಿಗನ ಹಿಂದಿ ಚಿತ್ರ; ರಾಮನಗರ ಟು ಮುಂಬೈ; ಉದ್ಯಮಿ ಮನೋಜ್ ಸಿನಿಮಾ ಪ್ರೀತಿ

ರಾಮನಗರ… ಸಿನಿಮಾ ಮಂದಿಗೆ ಈ ಹೆಸರು ಚಿರಪರಿಚಿತ. ಕಾರಣ, ಬಾಲಿವುಡ್ ಸೂಪರ್ ಹಿಟ್ ‘ಶೋಲೆ’ ಸಿನಿಮಾ. ಹೌದು, ಇದೇ ಊರ ಬೆಟ್ಟದಲ್ಲಿ ಶೋಲೆ ಶೂಟಿಂಗ್ ಆಗಿತ್ತು. ದೂರದ‌ ಮುಂಬೈನಿಂದ ಬಂದು ಬಾಲಿವುಡ್ ಸಿನಿಮಾ ಮಾಡಿದ್ದರು. ಅದು ಇತಿಹಾಸ. ಈಗ ಇದೇ ರಾಮನಗರ ಮೂಲದ ಉದ್ಯಮಿ ಮುಂಬೈಗೆ ಹೋಗಿ ಹಿಂದಿ ಸಿನಿಮಾ ಮಾಡೋಕೆ ಅಣಿಯಾಗಿದ್ದಾರೆ. ಇದು ಇನ್ನೊಂದು ವಿಶೇಷ. ಹೌದು, ಇದೇ ಈ ಹೊತ್ತಿನ ಸುದ್ದಿ.

ಯಾರು ಈ ಉದ್ಯಮಿ ಮನೋಜ್?

ಅದು ರಾಮನಗರ ಜಿಲ್ಲೆಯೊಂದರ ಸಣ್ಣ ಊರು. ಹೆಸರು ಅನುಮಾನಹಳ್ಳಿ. ಸುಮಾರು ಎರಡು ದಶಕದ ಹಿಂದೆ ಆ ಊರಿನ ಯುವಕನೊಬ್ಬ ಕೆಲಸ ಅರಸಿ ಬೆಂಗಳೂರಿಗೆ ಬಂದಿಳಿಯುತ್ತಾನೆ. ಮಾಸ್ಟರ್ ಡಿಗ್ರಿ ಓದುವುದರ ಜೊತೆಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಕ್ಯಾಂಟೀನ್ ಕೆಲಸ ಶುರು ಮಾಡ್ತಾರೆ. ಅಲ್ಲಿ ಕಲಿತ ಅನುಭವ ಅವರನ್ನು ಸ್ವಂಥದ್ದೊಂದು ಕಂಪೆನಿ ಕಟ್ಟುವಷ್ಟರ ಮಟ್ಟಿಗೆ ಬೆಳೆಸುತ್ತೆ. 2007 ರಲ್ಲಿ ಸಾಯಿ ಹಾಸ್ಪಿಟಾಲಿಟಿಸ್ ಸರ್ವೀಸಸ್ (ಎಸ್ ಎಚ್ ಎಸ್) ಕಂಪೆನಿ ಶುರು ಮಾಡ್ತಾರೆ.

ಅರಂಭದಲ್ಲಿ ಫೋರ್ಟಿಸ್ ಆಸ್ಪತ್ರೆಯಲ್ಲಿ ತಮ್ಮ ಕೆಲಸ ಶುರು ಮಾಡಿದ ಬಳಿಕ ಬೆಂಗಳೂರಿನಲ್ಲಿ ಸುಮಾರು 20 ಹಾಸ್ಪಿಟಲ್ ಗಳಲ್ಲಿ ಹೆಲ್ತಿ ಫುಡ್ ಕೇಟರಿಂಗ್ ಆರಂಭಿಸುತ್ತಾರೆ. ಯಶಸ್ವಿ ಉದ್ಯಮಿಯಾಗಿಯೂ ರೂಪುಗೊಳ್ಳುತ್ತಾರೆ. ಹಾಗೆ ಶುರುವಾದ ಅವರ ಸಂಸ್ಥೆಯಲ್ಲೀಗ 350 ಜನ ಕೆಲಸ ಮಾಡುತ್ತಿದ್ದಾರೆ. ಅಷ್ಟು ಜನರಿಗೆ ಕೆಲಸ ನೀಡಿದ ತೃಪ್ತಭಾವ ಅವರದು.

ಇವರಿಗೆ ಸಿನಿಮಾ ಅಂದರೆ ಎಲ್ಲಿಲ್ಲದ ಪ್ರೀತಿ. ಒಮ್ಮೆ ಗೆಳೆಯರೊಬ್ಬರ ಸಿನಿಮಾ ಶೂಟಿಂಗ್ ನಡೆಯುವಾಗ ಹೇಗೆ ನಡೆಯುತ್ತೆ ಎಂಬ ಕುತೂಹಲ ಹೆಚ್ಚಾಗಿ ನೋಡಲು ಬಂದವರು ಆಕಸ್ಮಿಕವಾಗಿ ನಿರ್ಮಾಪಕರಾಗಿಬಿಟ್ಟರು.

2021 ರಲ್ಲಿ ರಾಯಲ್ ಮೂವೀಸ್ ಬ್ಯಾನರ್ ಮೂಲಕ ‘ಎಂದು ನಿನ್ನ ನೋಡುವೆ’ ಎಂಬ ಕನ್ನಡ ಸಿನಿಮಾ ನಿರ್ಮಿಸಿದರು. ಅಷ್ಟೇ ಅಲ್ಲ, ಸ್ಕ್ರೀನ್ ಮುಂದೆಯೂ ಕಾಣಿಸಿಕೊಳ್ಳುವ ಧೈರ್ಯ ಮಾಡಿ ಎರಡು ಪ್ರಮುಖ ಪಾತ್ರಗಳ ಪೈಕಿ ಇವರೂ ಪ್ರಮುಖರಾಗಿ ಕಾಣಿಸಿಕೊಂಡರು. ಆ ಚಿತ್ರ ಇದೀಗ ರಿಲೀಸ್ ಗೆ ರೆಡಿಯಾಗಿದೆ. ಸಿನಿಮಾ ಪ್ರೀತಿ ಹೆಚ್ಚಾಗಿದ್ದೇ ತಡ, ಅಪ್ಪಿ ಒಪ್ಪಿಕೊಂಡು ಸಿನಿಮಾ ಕಡೆ ವಾಲಿದರು. ನಂತರ ವಿಜಯ ರಾಘವೇಂದ್ರ ನಟನೆಯ ಎಫ್ಐಆರ್ ಹಾಗು ವಿಚಾರಣೆ ಸಿನಿಮಾಗೂ ಹಣ ಹಾಕುವ ಮೂಲಕ ಸಹ ನಿರ್ಮಾಪಕರಾಗಿ, ಪಾತ್ರಗಳನ್ನೂ ನಿರ್ವಹಿಸಿದ್ದಾರೆ.

ಇಷ್ಟಕ್ಕೂ ಅವರು ಈ ಫೀಲ್ಡ್ ಗೆ ಎಂಟ್ರಿಯಾಗಲು ಕಾರಣ, ಸಿನಿಮಾ ಪ್ರೀತಿ ಜೊತೆಗೆ ಇಲ್ಲೂ ಒಂದಷ್ಟು ಜನರಿಗೆ ಕೆಲಸ ಕೊಡಬಹುದು ಎಂಬ ಉದ್ದೇಶದಿಂದ . ಹಣ ಮುಖ್ಯವಲ್ಲ ಒಂದಷ್ಟು ಒಳ್ಳೆಯ ಚಿತ್ರ ಕೊಡುವ ಕನಸಿದೆ.ಆ ಮೂಲಕ ಚಿತ್ರ ರಂಗದಲ್ಲಿ ಗಟ್ಟಿ ನೆಲೆಯೂರುವಾಸೆ ಎನ್ನುತ್ತಾರೆ ಮನೋಜ್ ಗೌಡ.

ಎಲ್ಲಾ ರಂಗ ಕೈ ಬೀಸಿ ಕರೆಯಲ್ಲ. ಸಿನಿಮಾ ರಂಗ ಕೈ ಬೀಸಿ ಕರೆಯಿತು. ಆಸಕ್ತಿ ಪ್ರೀತಿ ಇದ್ದುದರಿಂದಲೇ ಬಂದೆ. ಇಲ್ಲಿ ಒಂದಷ್ಟು ಸದಭಿರುಚಿಯ ಸಿನಿಮಾ ಮಾಡುವ ಆಸೆ ಎನ್ನುವ ಅವರು, ಜೀರೋದಿಂದ ಸಿನಿಮಾ ಲೋಕಕ್ಕೆ ಎಂಟ್ರಿಯಾಗಿದ್ದೇನೆ.

ಇಲ್ಲಿ ಕಲಿಯೋದು ಸಾಕಷ್ಟಿದೆ. ಪ್ರೊಡಕ್ಷನ್ಸ್ ಬಗ್ಗೆ ತಿಳಿದೆ. ರಾಯಲ್ ಮೂವೀಸ್ ಬ್ಯಾನರ್ ಕೇವಲ ಕನ್ನಡಕ್ಕೆ ಸೀಮಿತವಾಗಬಾರದು. ಬಾಲಿವುಡ್ ನಲ್ಲೂ ಸಿನಿಮಾ ಮಾಡಬೇಕು ಎಂಬ ನಿಟ್ಟಿನಲ್ಲಿ ಅಲ್ಲೂ ‘ರಾಯಲ್ ಮೂವೀಸ್ ಬೆಂಗಳೂರು’ ಹೆಸರಲ್ಲಿ ಬ್ಯಾನರ್ ಮಾಡಿದ್ದು, ಹಿಂದಿ ಸಿನಿಮಾ ಮಾಡುವ ತಯಾರಿ ನಡೆಯುತ್ತಿದೆ ಎನ್ನುತ್ತಾರೆ ಮನೋಜ್.

ಅದೇನೆ ಇರಲಿ, ಬಾಲಿವುಡ್ ಮಂದಿ ‘ಶೋಲೆ’ ಸಿನಿಮಾ ಮಾಡೋಕೆ ಮುಂಬೈನಿಂದ ರಾಮನಗರಕ್ಕೆ ಬಂದಿದ್ದು ಇತಿಹಾಸ. ಈಗ ರಾಮನಗರದಿಂದ ಮುಂಬೈ ಅಂಗಳಕ್ಕೆ ಜಿಗಿದು ಹಿಂದಿ ಸಿನಿಮಾ ಮಾಡಲು ಹೊರಟ ಮನೋಜ್ ಗೌಡ ಅವರ ಸಾಹಸ ದೊಡ್ಡದು.

ರಾಮನಗರದಿಂದ ಹೊರಟ ಮನೋಜ್ ಗೌಡ ಕಣ್ಣಲ್ಲಿ ನೂರಾರು ಕನಸು ಹೊತ್ತು ಬೆಂಗಳೂರಿಗೆ ಬಂದವರು, ಮತ್ತೆ ಊರಿಗೆ ವಾಪಾಸ್ ಹೋಗೋಕೆ ಹಣ, ಇಲ್ಲದ ಕಾರಣ, ಹೋಟೆಲ್ ಕೆಲಸ ಮಾಡಿ, ಅಲ್ಲೇ ದುಡಿದು, ಅದರಲ್ಲೇ ಓನರ್ ಆಗಿ, ಈಗ ಸಿನಿಮಾ ನಿರ್ಮಾಣ ಮಾಡಿರೋದು ಸಾಮಾನ್ಯ ಸಂಗತಿಯಲ್ಲ. ಈಗ ಅವರು ನಿರ್ಮಾಣ ಜೊತೆ ನಟನೆ ಕಡೆಯೂ ಗಮನಹರಿಸಿದ್ದಾರೆ.

ಸುಮ್ಮನೆ ಕ್ಯಾಮೆರಾ ಮುಂದೆ ನಿಲ್ಲಬಾರದು ಅಂದುಕೊಂಡು, ನಟನೆ ತರಬೇತಿ ಪಡೆದು ಕಲಾವಿದನಾಗಿ ಗಟ್ಟಿ ನೆಲೆ ಕಾಣೋ ಆಸೆಯಲ್ಲಿದ್ದಾರೆ.

Related Posts

error: Content is protected !!