ಒಂದು ಸರಳ ಪ್ರೇಮಕಥೆಯ ರೂವಾರಿ ಸಿಂಪಲ್ ಸುನಿ ಹೊಸ ವರ್ಷಕ್ಕೆ ಸಂಗೀತ ಪ್ರಿಯರಿಗೆ ಚೆಂದದ ಹಾಡನ್ನು ಉಡುಗೊರೆಯಾಗಿ ನೀಡಿದ್ದಾರೆ. ನೀನ್ಯಾರೆಲೆ.. ನಿನಗಾಗಿಯೇ..ಈ ಜೀವ ಭಾವ ಸೋಜಿಗ ಎಂಬ ಕ್ಯಾಚಿ ಮ್ಯಾಚಿ ಸಾಹಿತ್ಯದ ಮೆಲೋಡಿ ಮಸ್ತಿಯನ್ನು ರಿಲೀಸ್ ಮಾಡಿದ್ದಾರೆ. ಸಿದ್ದು ಕೋಡಿಪುರ ಹಾಗೂ ಸುನಿ ಸಾಹಿತ್ಯದ ಈ ಹಾಡಿಗೆ ಅರ್ಮಾನ್ ಮಲಿಕ್ ಧ್ವನಿಯಾಗಿದ್ದಾರೆ.
ಇದೇ ಮೊದಲ ಬಾರಿಗೆ ದೊಡ್ಮನೆಯ ಹೀರೋ ವಿನಯ್ ರಾಜ್ ಕುಮಾರ್ ಗೆ ಸಿಂಪಲ್ ಸುನಿ ನಿರ್ದೇಶನ ಮಾಡಿದ್ದಾರೆ. ವಿನಯ್ ನಾಯಕನಾಗಿ ನಟಿಸಿರುವ ಚಿತ್ರಕ್ಕೆ ಸ್ವಾತಿಷ್ಠ ಕೃಷ್ಣನ್, ರಾಧಾ ಕೃಷ್ಣ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ಎಂಬ ಇಬ್ಬರು ಚೆಲುವೆಯರ ನಾಯಕಿಯಾರಾಗಿ ನಟಿಸಿದ್ದಾರೆ.. ರಾಘವೇಂದ್ರ ರಾಜ್ ಕುಮಾರ್ ಸ್ಪೆಷಲ್ ರೋಲ್ ನಲ್ಲಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದವರು ತಾರಾಬಳಗದಲ್ಲಿದ್ದಾರೆ. ಆದಿ ಸಂಕಲನವಿದ್ದು, ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ನೀಡಿದ್ದು, ಕಾರ್ತಿಕ್ ಕ್ಯಾಮೆರಾ ಹಿಡಿದಿದ್ದಾರೆ.
ತಮ್ಮ ವಿಭಿನ್ನ ಸಿನಿಮಾಗಳಿಂದ ನಿರ್ದೇಶಕ ಸಿಂಪಲ್ ಸುನಿ ಗಮನ ಸೆಳೆಯುತ್ತಾ ಬರ್ತಿದ್ದಾರೆ. ‘ಅವತಾರ್ ಪುರುಷ’ ಬಳಿಕ ಸುನಿ ‘ಗತವೈಭವ’ ಸಿನಿಮಾ ಕೈಗೆತ್ತಿಕೊಂಡಿದ್ದರು. ಬಳಿಕ ಸದ್ದಿಲ್ಲದೇ ‘ಒಂದು ಸರಳ ಪ್ರೇಮಕಥೆ’ ಶುರು ಮಾಡಿದ್ದಾರೆ. ಇದೀಗ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಬಿಡುಗಡೆಗೆ ಸಜ್ಜಾಗಿದೆ. ಅಂದಹಾಗೆ ಈ ಸಿನಿಮಾಗೆ ಮೈಸೂರು ರಮೇಶ್ ನಿರ್ಮಾಣ ಮಾಡಿದ್ದಾರೆ.