ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾಗೌಡ ದಂಪತಿ ಇದೇ ಮೊದಲಬಾರಿಗೆ ಬೆಳ್ಳಿತೆರೆಯ ಮೇಲೂ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸೈಕೋಥ್ರಿಲ್ಲರ್ ಕಥಾಹಂದರ ಹೊಂದಿರುವ ಆ ಚಿತ್ರಕ್ಕೆ ಪುನೀತ್ ಶ್ರೀನಿವಾಸ್ ಅವರು ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಪುನೀತ್ ಶ್ರೀನಿವಾಸ್ ಕನ್ನಡ ಚಿತ್ರರಂಗಕ್ಕೆ ಹೊಸಬರೇನಲ್ಲ, ಶಿವಣ್ಣ, ಸುದೀಪ್ ರಂಥ ಸ್ಟಾರ್ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ ನಂದಕಿಶೋರ್ ಅವರ ಬಳಿ ಅಧ್ಯಕ್ಷದಿಂದ ಟಗರು ಚಿತ್ರದವರೆಗೆ (ತೆಲುಗು ಸಿನಿಮಾ ಸೇರಿ) ಸುಮಾರು 12 ವರ್ಷಗಳ ಕಾಲ ಕೆಲಸ ಮಾಡಿ ನಿರ್ದೇಶನದ ಪಾಠ ಕಲಿತು ಇದೀಗ ಮೊದಲಬಾರಿಗೆ ನಿರ್ದೇಶನಕ್ಕಿಳಿಯುತ್ತಿದ್ದಾರೆ.
ಅವರು ತಮ್ಮ ಪ್ರಥಮ ಪ್ರಯತ್ನದಲ್ಲೇ ವಿಭಿನ್ನ ಕಾನ್ಸೆಪ್ಟ್ ಮೂಲಕ ತಮ್ಮ ಹೊಸ ಜರ್ನಿಯನ್ನು ಆರಂಭಿಸುತ್ತಿದ್ದಾರೆ.
ಇನ್ನೂ ಹೆಸರಿಡದ ಈ ಚಿತ್ರಕ್ಕೆ ಶ್ರೀ ಚೌಡೇಶ್ಬರಿ ಸಿನಿ ಕ್ರಿಯೇಶನ್ಸ್ ಮೂಲಕ ಎಲ್.ಮೋಹನ್ ಕುಮಾರ್ ಅವರು ದೊಡ್ಡ ಮಟ್ಟದ ಬಂಡವಾಳ ಹೂಡುತ್ತಿದ್ದಾರೆ.
ಎಂ.ಎಸ್.ತ್ಯಾಗರಾಜ್ ಅವರ ಸಂಗೀತ ಸಂಯೋಜನೆ, ಕರುಣಾಕರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಮುಂದಿನ ತಿಂಗಳಿಂದ ಆರಂಭಿಸಿ ಬಹುತೇಕ ಬೆಂಗಳೂರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸುವ ಯೋಜನೆ ಚಿತ್ರತಂಡಕ್ಕಿದೆ. ಸದ್ಯದಲ್ಲೇ ಚಿತ್ರದ ಶೀರ್ಷಿಕೆ ಹಾಗೂ ಮಹೂರ್ತದ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ನಿರ್ದೇಶಕ ಪುನೀತ್ ತಿಳಿಸಿದ್ದಾರೆ.