ಅಹಮದಾಬಾದ್ ಅಂತರರಾಷ್ಟ್ರೀಯ ಮಕ್ಕಳ ಚಿತ್ರೋತ್ಸವಕ್ಕೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ “ಚಿಣ್ಣರ ಚಂದ್ರ” ಚಿತ್ರ ಅಧಿಕೃತವಾಗಿ ಆಯ್ಕೆಯಾಗಿದ್ದು, ಸ್ಪರ್ಧಾ ವಿಭಾಗದಲ್ಲಿ ಪ್ರವೇಶ ಪಡೆದಿದೆ.
ಈ ಚಿತ್ರ ಈಗಾಗಲೇ ಮೆಲ್ಬರ್ನ್ ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿ ಸ್ಪರ್ಧೆಯ ಅಂತಿಮ ಹಂತ ತಲುಪಿದೆ.
“ಚಿಣ್ಣರ ಚಂದ್ರ” ಚಿತ್ರವು ಶಿಕ್ಷಣದ ಮಹತ್ವವನ್ನು ಸಾದರ ಪಡಿಸುತ್ತಲೇ ಸಮಾಜದಲ್ಲಿ ಸದಭಿರುಚಿ, ಸೌಹಾರ್ದತೆ ಮತ್ತು ಸಮಾನತೆ ಅಗತ್ಯ ಎಂಬುದನ್ನೂ ಮಕ್ಕಳ ಮೂಲಕ ಅಭಿವ್ಯಕ್ತ ಪಡಿಸುತ್ತದೆ. ಜೊತೆಗೆ ಜನಪದ ಕಥೆಗಳು ಮಕ್ಕಳ ಮನಸ್ಸಿನ ಭಾಗವಾಗುವುದನ್ನು ಚಿತ್ರಿಸುತ್ತದೆ.
ಬರಗೂರರ “ಅಡಗೂಲಜ್ಜಿ” ಎಂಬ ಕಾದಂಬರಿಯನ್ನು ಆಧರಿಸಿರುವ ಈ ಚಿತ್ರವನ್ನು ಜಿ.ಎಸ್ ಗೋವಿಂದರಾಜು (ರಾಜಶೇಖರ್) ನಿರ್ಮಿಸಿದ್ದಾರೆ.
ತಾರಾಗಣದಲ್ಲಿ ಆಕಾಂಕ್ಷ್ ಬರಗೂರ್, ನಿಕ್ಷೇಪ, ಷಡ್ಜ, ಈಶಾನ್, ಅಭಿನವ್ ನಾಗ್, ಸುಂದರರಾಜ್, ರೇಖಾ, ವತ್ಸಲ ಮೋಹನ್, ರಾಧ ರಾಮಚಂದ್ರ, ರಾಘವ, ರಾಜಪ್ಪ ದಳವಾಯಿ, ಸುಂದರರಾಜ್ ಅರಸು, ವೆಂಕಟರಾಜು, ಹಂಸ ಮುಂತಾದವರಿದ್ದಾರೆ.
ಸಂಕಲನಕಾರರಾಗಿ ಸುರೇಶ್ ಅರಸು, ಛಾಯಾಗ್ರಾಹಕರಾಗಿ ನಾಗರಾಜ್ ಆದವಾನಿ, ಸಂಗೀತ ನಿರ್ದೇಶಕರಾಗಿ ಶಮಿತ ಮಲ್ನಾಡ್ ಕೆಲಸ ಮಾಡಿದ್ದಾರೆ. ಸಹ ನಿರ್ದೇಶಕರು ನಟರಾಜ್ ಶಿವ ಮತ್ತು ಪ್ರವೀಣ್.
“ಚಿಣ್ಣರ ಚಂದ್ರ” ಚಿತ್ರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಲ್ಲದೇ ಶಾಲಾ ಮಕ್ಕಳಿಗೆ ರಾಜ್ಯದಾದ್ಯಂತ ಪ್ರದರ್ಶಿಸುವ ಉದ್ದೇಶ ಹೊಂದಲಾಗಿದೆ.