- ವಿಜಯ್ ಭರಮಸಾಗರ
ರೇಟಿಂಗ್: 2/5
ಚಿತ್ರ: ಬಾನದಾರಿಯಲ್ಲಿ
ನಿರ್ಮಾಣ: ಶ್ರೀ ವಾರಿ ಟಾಕೀಸ್
ನಿರ್ದೇಶನ: ಪ್ರೀತಂ ಗುಬ್ಬಿ
ತಾರಾಗಣ: ಗಣೇಶ್, ರುಕ್ಮಿಣಿ ವಸಂತ್, ರೀಷ್ಮಾ ನಾಣಯ್ಯ, ರಂಗಾಯಣ ರಘು ಇತರರು.
‘ ಮನಸು ಬದಲಾದರೆ ಮನುಷ್ಯನು ಬದಲಾಗ್ತಾನಂತೆ…’
ಈ ಡೈಲಾಗ್ ಬರುವ ಹೊತ್ತಿಗೆ ಅವರಿಬ್ಬರ ನಡುವೆ ಸಣ್ಣ ಮುನಿಸು, ಕೋಪ, ತಾಪ ಎಲ್ಲವೂ ಬಂದಿರುತ್ತೆ. ಹಾಗಂತ ಇದು ನಾಯಕ, ನಾಯಕಿ ನಡುವಿನ ಗುದ್ದಾಟವಲ್ಲ. ಬದಲಿಗೆ ನಾಯಕ ಹಾಗು ನಾಯಕಿ ತಂದೆ ಮಧ್ಯೆಯ ಕಿತ್ತಾಟ!
ಹೌದು, ಇದು ಪ್ರೇಮ ಕಥೆ ಅಲ್ಲ, ಇದೊಂಥರ ಪ್ರೀತಿಯ ಕಥೆ. ಹಾಗಂತ, ನೋಡುಗರಿಗೆ ಯಾವುದರ ಮೇಲೂ ಪ್ರೀತಿ ಹುಟ್ಟೋದಿಲ್ಲ ಬಿಡಿ. ‘ಬಾನ ದಾರಿಯಲ್ಲಿ’ ಶೀರ್ಷಿಕೆಯೇ ಇಲ್ಲಿ ಪಾಸಿಟಿವ್. ಆದರೆ, ಆ ದಾರಿಯುದ್ದಕ್ಕೂ ನೋಡುಗನಿಗೆ ಸಿಗೋದು ಕೇವಲ ನೀರಸ ಮತ್ತು ಆಯಾಸ. ಒಂದೊಳ್ಳೆಯ ಎಳೆ ಇದೆ. ಆದರೆ, ಮಜಬೂತಾಗಿ ತೋರಿಸುವ ಪ್ರಯತ್ನದಲ್ಲಿ ನಿರ್ದೇಶಕ ಪ್ರೀತಂ ಗುಬ್ಬಿ ಎಡವಿದ್ದಾರೆ. ಒಂದೇ ಮಾತಲ್ಲಿ ಹೇಳುವುದಾದರೆ, ನೋಡುಗರಿಗೆ ‘ಆ ದಾರಿಯಲಿ’ ನಿರಾಸೆ.
ಮೊದಲರ್ಧ ನಿಧಾನ. ದ್ವಿತಿಯಾರ್ಧ ಕೊಂಚ ಗೊಂದಲ. ಕ್ಲೈಮ್ಯಾಕ್ಸ್ ನಲ್ಲೇನಾದರೂ ಪವಾಡ ನಡೆಯುತ್ತಾ ಅದೂ ಇಲ್ಲ. ಒಂದೊಕ್ಕೊಂದು ಕನೆಕ್ಟಿವಿಟಿ ಇಲ್ಲ. ಸೂಕ್ಷ್ಮವಾಗಿ ಗಮನಿಸಿದರೆ, ಕೆಲವು ಕಡೆ ಕಂಟಿನ್ಯುಟಿಯೂ ಮಿಸ್. ಆರಂಭದಲ್ಲಿ ಸರಾಗವಾಗಿ ಸಾಗುವ ದಾರಿ, ಆ ಬಳಿಕ ಕಠಿಣ ಎನಿಸುವುದಕ್ಕೆ ಶುರುವಾಗುತ್ತೆ. ಕಥೆಗೆ ಇನ್ನಷ್ಟು ಒತ್ತು ನೀಡಬೇಕಿತ್ತು. ಚಿತ್ರಕಥೆಯಲ್ಲಿ ಬಿಗಿ ಹಿಡಿತ ಇರಬೇಕಿತ್ತು. ಇಲ್ಲಿ ಮಾತಷ್ಟೇ ಅಲ್ಲಲ್ಲಿ ನಗಿಸುತ್ತೆ. ಅದು ಬಿಟ್ಟರೆ, ಗಾಢ ಪ್ರಭಾವ ಏನಿಲ್ಲ.
ಏನದು ಕಥೆ?
ಅವನು ಕ್ರಿಕೆಟರ್. ಅವಳು ಈಜುಗಾರ್ತಿ ಜೊತೆಗೆ ಪರಿಸರ ಪ್ರೇಮಿ. ಮೊದಲ ನೋಟದಲ್ಲೇ ಅವನಿಗೆ ಅವಳ ಮೇಲೆ ಪ್ರೀತಿ ಅಂಕುರ. ಅವಳ ಹಿಂದಿಂದೆ ಸುತ್ತುತ್ತಾನೆ. ನೇರವಾಗಿ ಪ್ರೀತಿ ಬಗ್ಗೆ ಹೇಳುತ್ತಾನೆ. ಆದರೆ, ಅವಳಿಗೆ ಅಪ್ಪನೇ ಸರ್ವಸ್ವ. ಅಪ್ಪ ಒಪ್ಪಿದರೆ ಮದ್ವೆ ಅಂತಾಳೆ. ಅವನು ಅವಳ ಅಪ್ಪನನ್ನು ಒಪ್ಪಿಸಿ ಮದ್ವೆಗೆ ಅಣಿಯಾಗಬೇಕು ಅನ್ನುವಷ್ಟರಲ್ಲೇ ಘಟನೆಯೊಂದು ಸಂಭವಿಸುತ್ತೆ. ಆಮೇಲೆ ನಡೆಯೋದೆಲ್ಲ ಡ್ರಾಮ.
ಅವಳಿಗೆ ತಾನು ಇಷ್ಟಪಟ್ಟ ಹುಡುಗ, ಮತ್ತು ಬದುಕೇ ಆಗಿರುವ. ಅಪ್ಪ, ಇಬ್ಬರೂ ಒಂದಾಗಬೇಕು ಎಂಬ ಆಸೆ. ಅದು ನಿಜವಾಗುತ್ತೋ ಇಲ್ಲವೋ ಅನ್ನೋದು ಕಥೆ.
ಇಲ್ಲಿ ನಿಷ್ಕಲ್ಮಷ ಪ್ರೀತಿ. ಅಪ್ಪನ ಬಾಂಧವ್ಯ, ಪರಿಸರ ಪ್ರೀತಿ, ಬದುಕಿನ ಆಸೆ, ಕೋಪ, ತಾಪ ಮುನಿಸು, ಕನಸು ಎಲ್ಲವೂ ಇದೆ. ನಿರ್ದೇಶಕರು ಕಥೆಯಲ್ಲಿ ಕೊಂಚ ಹೊಸ ಆಲೋಚನೆ ಇಟ್ಟುಕೊಂಡಿದ್ದರೆ ತುಸು ನೋಡುಗರಿಗೆ ಇಷ್ಟವಾಗುತ್ತಿತ್ತೇನೋ?
ಆದರೂ ಒಂದಷ್ಟು ಎಮೋಷನ್ಸ್ ವಿಷಯದಲ್ಲಿ ಸೈ ಎನಿಸಿಕೊಂಡಿದ್ದಾರೆ ಎಂಬುದು ಸಮಾಧಾನ.
ಸ್ವಲ್ಪ ಮಟ್ಟಿಗೆ ಇಂದಿನ ಯೂತ್ಸ್ ಮನಸ್ಸಲ್ಲಿಟ್ಟುಕೊಂಡು ನಿರ್ದೇಶಕರು ಕಥೆ ಹೇಳಿದ್ದಾರಾದರೂ, ಚಿತ್ರಕಥೆ ಮತ್ತು ನಿರೂಪಣೆಯಲ್ಲಿ ಹೊಸತನಕ್ಕೆ ಒಗ್ಗಿಕೊಂಡಿಲ್ಲ.
ಸಾಕಷ್ಟು ಕಡೆ ಒಂದಷ್ಟು ಪ್ರಶ್ನೆಗಳೇ ಎದುರಾಗುತ್ತವೆ. ಅರ್ಥವಾಗದ ದೃಶ್ಯಗಳು ಎದುರಾಗಿ ಚಿತ್ರದ ವೇಗಕ್ಕೆ ಅಡ್ಡಿಯಾಗುತ್ತವೆ.
ಆ ದಾರಿಯಲ್ಲಿ ನೆನಪಲ್ಲುಳಿಯೋದು ಅಂದರೆ, ಭಾವುಕತೆಯಷ್ಟೆ. ಬಹುಶಃ ಅದೂ ಇಲ್ಲವಾಗಿದ್ದರೆ ಬಂದ ‘ದಾರಿ’ಗೆ ಸುಂಕವಿಲ್ಲ ಎಂದಾಗುತ್ತಿತ್ತು. ನೋಡುಗರಿಗೆ ತಕ್ಕಮಟ್ಟಿಗಾದರೂ ಮನರಂಜನೆ ಬೇಕಿತ್ತು. ಅಲ್ಲಿ ಬರುವ ಯಾವ ಹಾಡೂ ಕಾಡುವುದಿಲ್ಲ, ನೆನಪಲ್ಲಿ ಉಳಿಯುವುದೂ ಇಲ್ಲ. ಹಾಡೊಂದಕ್ಕೆ ಶಿಳ್ಳೆ, ಚಪ್ಪಾಳೆ ಸದ್ದು ಕೇಳುತ್ತಾದರೆ, ಅದು ಪುನೀತ್ ಹಾಡಿರುವ ‘ಬಾನ ದಾರಿಯಲ್ಲಿ ಸೂರ್ಯ ಜಾರಿ ಬಂದ’ ಹಾಡಿಗೆ ಮಾತ್ರ.
ಯಾರು ಹೇಗೆ?
ಗಣೇಶ್ ಎಂದಿನಂತೆ. ನಗಿಸುತ್ತ, ಅಳುತ್ತ, ಭಾವುಕತೆಗೆ ದೂಡುತ್ತಾರೆ. ಚಿತ್ರದುದ್ದಕ್ಕೂ ಲವಲವಿಕೆಯಲ್ಲೇ ಬ್ಯಾಟಿಂಗ್ ಮಾಡಿದ್ದಾರೆ. ರುಕ್ಮಿಣಿ ವಸಂತ್ ಸಿಕ್ಕ ಪಾತ್ರಕ್ಕೆ ಮೋಸ ಮಾಡಿಲ್ಲ, ರೀಷ್ಮಾ ಕೂಡ ನಟನೆಯಲ್ಲಿ ಹಿಂದೆ ಬಿದ್ದಿಲ್ಲ. ರಂಗಾಯಣ ರಘು ಒಳ್ಳೆಯ ಸ್ಕೋರ್ ಮಾಡಿದ್ದಾರೆ. ಗಣೇಶ್ ಜೊತೆಗಿನ ಕೆಮಿಸ್ಟ್ರಿ ಸಖತ್ ಆಗಿ ವರ್ಕೌಟ್ ಆಗಿದೆ.
ಅರ್ಜುನ್ ಜನ್ಯ ಸಂಗೀತದ ಯಾವ ಹಾಡೂ ಗುನುಗುವಂತಿಲ್ಲ. ಹಿನ್ನೆಲೆ ಸಂಗೀತದಲ್ಲೂ ಸ್ವಾದವಿಲ್ಲ. ಅಭಿಲಾಷ್ ಕಲ್ಲತ್ತಿ ಅವರ ಛಾಯಾಗ್ರಹಣ ಗಮನ ಸೆಳೆಯುತ್ತೆ.
ಕೊನೆಮಾತು: ಆಫ್ರಿಕಾ ಕಾಡು, ಅದರೊಳಗಿನ ಪ್ರಾಣಿಗಳನ್ನು ನೋಡದವರೊಮ್ಮೆ ಇಲ್ಲಿ ಅನಿಮಲ್ಸ್ ಡಾಕ್ಯುಮೆಂಟರಿ ಕಾಣಬಹುದು!!