ದಿಗಂತ್ ಮಂಚಾಲೆ ನಟನೆಯ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ವಿಭಿನ್ನವಾದ ಕಾನ್ಸೆಪ್ಟ್ ಮೂಲಕ ಈಗಾಗಲೇ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಇತ್ತೀಚಿಗಷ್ಟೆ ಆಗಸ್ಟ್ 13ರಂದು ‘ವಿಶ್ವ ಎಡಗೈ ದಿನ’ದ ದಿನ ಎಗಡೈ ಬಳಸುವವರಿಗೆ ಅನುಕೂಲ ಆಗುವ ರೀತಿಯಲ್ಲಿ ಹೊಸ ಬಗೆಯ ಹೆಲ್ಮೆಟ್ ಕೂಡ ಲಾಂಚ್ ಮಾಡಲಾಗಿದೆ. ವಿನೂತನ ಸಬ್ಜೆಕ್ಟ್ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿರುವ ‘ಎಡಗೈ’ ತಂಡಕ್ಕೆ ಮತ್ತೋರ್ವ ಖ್ಯಾತ ನಟ ಎಂಟ್ರಿ ಕೊಟ್ಟಿದ್ದಾರೆ. ಅದು ಮತ್ಯಾರು ಅಲ್ಲ ‘ರಂಗಿತರಂಗ’ ಖ್ಯಾತಿಯ ನಟ ನಿರೂಪ್ ಭಂಡಾರಿ. ಮೊದಲ ಬಾರಿಗೆ ನಿರೂಪ್ ಮತ್ತು ದಿಗಂತ್ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸ್ಟಾರ್ ಕಲಾವಿದರು ಒಟ್ಟಿಗೆ ಸಿನಿಮಾ ಮಾಡುವುದು ತೀರ ಅಪರೂಪವಾಗಿದೆ. ಮಲ್ಟಿಸ್ಟಾರರ್ ಸಿನಿಮಾಗಳಿಗೆ ಖ್ಯಾತ ಕಲಾವಿದರನ್ನು ಸೇರಿಸಿ ಸಿನಿಮಾ ಮಾಡುವುದು ನಿರ್ಮಾಪಕರಿಗೂ ಸಹ ದೊಡ್ಡ ಸವಾಲಾಗಿದೆ. ಹೀಗಿರುವಾಗ ದಿಗಂತ್ ಸಿನಿಮಾದಲ್ಲಿ ನಿರೂಪ್ ಭಂಡಾರಿ ಕಾಣಿಸಿಕೊಂಡಿರುವುದು ವಿಶೇಷ. ಈ ಸಿನಿಮಾದಲ್ಲಿ ನಿರೂಪ್ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. ಅಷ್ಟಕ್ಕೂ ಹೀರೋ ಆಗಿ ಅಬ್ಬರಿಸುತ್ತಿದ್ದ ನಿರೂಪ್ ಭಂಡಾರಿ, ದಿಗಂತ್ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಲು ಕಾರಣ ಸಿನಿಮಾ ಕಥೆ ಮತ್ತು ಕಾನ್ಸೆಪ್ಟ್.
ಕಮರ್ಷಿಯಲ್ ಸಿನಿಮಾಗಳ ಮಧ್ಯೆ ಇಂತದೊಂದು ವಿಭಿನ್ನ ರೀತಿಯ ಕಾನ್ಸೆಪ್ಟ್ ಇರುವ ಚಿತ್ರದ ಕಥೆ ಕೇಳಿ ನಿರೂಪ್ ಇಂಪ್ರೆಸ್ ಆಗಿದ್ದಾರೆ. ಇನ್ನು ಯಂಗ್ ಅಂಡ್ ಎನರ್ಜಿಟಿಕ್ ಆಗಿರುವ ತಂಡ ನೋಡಿ ಈ ಸಿನಿಮಾದಲ್ಲಿ ತಾವು ಕೂಡ ಭಾಗಿ ಆದರೆ ಚೆನ್ನಾಗಿರುತ್ತೆ ಎಂದು
‘ಎಡಗೈ ಅಪಘಾತಕ್ಕೆ ಕಾರಣ’ಸಿನಿಮಾತಂಡದ ಜೊತೆ ಕೈಜೋಡಿಸಿದ್ದಾರೆ ನಿರೂಪ್.
‘ಎಡಗೈ ಅಪಘಾತಕ್ಕೆ ಕಾರಣ’ ಚಿತ್ರಕ್ಕೆ ಸಮರ್ಥ್ ಬಿ. ಕಡಕೊಳ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಚಿತ್ರ. ಅಂದಹಾಗೆ ಶೀರ್ಷಿಕೆಯೇ ಹೇಳುವಂತೆ ಇದು ಎಡಗೈ ಬಳಸುವವರ ಸಮಸ್ಯೆಗಳ ಸುತ್ತ ಸುತ್ತುವ ಸಿನಿಮಾವಾಗಿದೆ.‘ಹೈಫನ್ ಪಿಕ್ಚರ್ಸ್ ಬ್ಯಾನರ್’ಅಡಿಯಲ್ಲಿ ‘ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುದತ್ ಗಾಣಿಗ ಮತ್ತು ನಿರ್ದೇಶಕ ಸಮರ್ಥ್ ಬಿ. ಕಡಕೊಳ್ ಜೊತೆಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ದಿಗಂತ್ ಮಂಚಾಲೆ ಅವರಿಗೆ ಜೋಡಿಯಾಗಿ ನಟಿ ಧನು ಹರ್ಷ ಅಭಿನಯಿಸಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಖ್ಯಾತ ನಟಿಯರಾದ ರಾಧಿಕಾ ನಾರಾಯಣ್ ಮತ್ತು ನಿಧಿ ಸುಬ್ಬಯ್ಯ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.