ಭಾವೈಕ್ಯತೆಯ ಕಥೆಯ ಜೊತೆಗೆ 13 ಕೋಟಿ ಹಣದ ಸುತ್ತ ನಡೆಯುವ ಕುತೂಹಲಕರ ಕಥೆಯನ್ನು ಹೇಳುವ ಚಿತ್ರ 13 ಈ ವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಹಿರಿಯನಟ ರಾಘವೇದ್ರ ರಾಜ್ಕುಮಾರ್ ಅವರು ಗುಜರಿ ಅಂಗಡಿ ಮಾಲೀಕ ಮೋಹನ್ ಕುಮಾರ್ ಪಾತ್ರದಲ್ಲಿ ಹಾಗೂ ಹಿರಿಯ ಕಲಾವಿದೆ ಶೃತಿ ಅವರು ಸಾಯಿರಾಭಾನು ಎಂಬ ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮೋದ್ ಶೆಟ್ಟಿ ಇಲ್ಲಿ ಪೋಲೀಸ್ ಪಾತ್ರ ನಿರ್ವಹಿಸಿದ್ದಾರೆ.
ಪಲ್ಲಕ್ಕಿ ಖ್ಯಾತಿಯ ನರೇಂದ್ರಬಾಬು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನಾನು ಹಿಂದೂ ನೀನು ಮುಸ್ಲಿಂ ಎನ್ನುವ ಭೇದ ಭಾವ ಇಲ್ಲದೆ ನಾಯಕ, ನಾಯಕಿ ಇಬ್ಬರೂ ಸತಿ ಪತಿಗಳಾಗಿ ಅನ್ಯೋನ್ಯ ಜೀವನ ನಡೆಸುತ್ತಿರುವಾಗ ನಡೆಯುವ ಒಂದು ಘಟನೆ ಇವರಿಬ್ಬರ ಜೀವನದಲ್ಲಿ ಹಲವಾರು ತಿರುವುಗಳಿಗೆ ಕಾರಣವಾಗುತ್ತದೆ.
ಅದು ಕೊನೆಗೆ ಅವರನ್ನು ಯಾವ ಹಂತಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳುವುದೇ ಚಿತ್ರದ ಕಥೆ. ಹಾಡುಗಳು, ಟ್ರೈಲರ್ ಈಗಾಗಲೇ ವೈರಲ್ ಅಗಿದ್ದು ನೋಡಿದವರೆಲ್ಲ ಇಷ್ಟಪಟ್ಟಿದ್ದಾರೆ.
ಐಟಂ ಸಾಂಗ್, ಡ್ರಿಂಕ್ಸ್ ಸೀನ್ ಇರೋದ್ರಿಂದ ಯಾವುದೇ ಕಟ್ ಇಲ್ಲದೆ ಚಿತ್ರಕ್ಕೆ ಯು/ಎ ಸಿಕ್ಕಿದೆ.
ಸಂಗೀತ ನಿರ್ದೇಶಕ ಶೋಗನ್ ಬಾಬು ಅವರು ಮೂರು ಸುಂದರವಾದ ಹಾಡುಗಳನ್ನು ಮಾಡಿ ಕೊಟ್ಟಿದ್ದಾರೆ. ಅಜಯ್ ಮಂಜು ಅವರ ಕ್ಯಾಮೆರಾ ವರ್ಕ್, ಗಿರೀಶ್ ಕುಮಾರ್ ಅವರ ಸಂಕಲನ, ಮದನ್ ಹರಿಣಿ, ಸಶಿಕುಮಾರ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದ್ದು, ಜಯಸಿಂಹ ಸಂಭಾಷಣೆ ಇದೆ.
ಅನಿಲ್ ಕುಮಾರ್ ಅರ್ಪಿಸುವ ಈ ಚಿತ್ರವನ್ನು, ಯುವಿ ಪ್ರೊಡಕ್ಷನ್ಸ್ ಮೂಲಕ ಕೆ.ಸಂಪತ್ ಕುಮಾರ್, ಮಂಜುನಾಥ್ ಗೌಡ, ಹೆಚ್.ಎಸ್. ಮಂಜುನಾಥ್ ಹಾಗೂ ಸಿ.ಕೇಶವಮೂರ್ತಿ ಸೇರಿ ನಿರ್ಮಾಣ ಮಾಡಿದ್ದಾರೆ.
ಕಾಮಿಡಿ ಕಿಲಾಡಿಗಳು ಲೋಕೇಶ್, ದಿಲೀಪ್ ಪೈ, ವಿನಯ ಸೂರ್ಯ ಮುಂತಾದವರು ಚಿತ್ರದ ಉಳಿದ ಪಾತ್ರಗಳಲ್ಲಿ ನಟಿಸಿದ್ದಾರೆ. ಜಾಕ್ ಮಂಜು ಅವರ ಶಾಲಿನಿ ಎಂಟರ್ ಪ್ರೈಸಸ್ ಚಿತ್ರದ ವಿತರಣೆಯ ಜವಾಬ್ದಾರಿ ಹೊತ್ತಿದೆ.