ಕನ್ನಡಕ್ಕೆ ಈಗಾಗಲೇ ಬಾಲಿವುಡ್ ನಟಿಮಣಿಗಳ ಆಗಗಮನ ಹೊಸದೇನಲ್ಲ. ಆದರೆ, ಈಗ ಬಾಲಿವುಡ್ ಅಂಗಳದಲ್ಲಿ ಬೇಡಿಕೆ ನಟಿಯಾಗಿರುವ ದೀಪಿಕಾ ಪಡಿಕೋಣೆ ಅವರನ್ನು ಕನ್ನಡ ಚಿತ್ರರಂಗಕ್ಕೆ ಪುನಃ ಕರೆತರುವ ಪ್ರಯತ್ನವೊಂದು ನಡೆಯುತ್ತಿದೆ.
ಹೌದು, ಹೀಗಂತ ಹೇಳಿದ್ದು ಬೇರಾರು ಅಲ್ಲ, ನಿರ್ದೇಶಕ ನಾಗಶೇಖರ್. ಅವರು ತಮ್ಮ ಹೊಸ ಚಿತ್ರಕ್ಕೆ ದೀಪಿಕಾ ಪಡುಕೋಣೆ ಅವರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ. ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಅವರನ್ನು ಕರೆತರಬೇಕೆಂಬ ಆಸೆ ನನ್ನದು. ಆದರೆ, ಅದು ಎಷ್ಟರ ಮಟ್ಟಿಗೆ ನೆರವೇರುತ್ತೆ ಅನ್ನೋದು ಗೊತ್ತಿಲ್ಲ. ಒಟ್ಟಾರೆ ಅದೊಂದು ದಾಖಲಾಗುವ ಸಿನಿಮಾ ಎಂಬುದು ನಾಗಶೇಖರ್ ಮಾತು.
ಇಷ್ಟಕ್ಕೂ ನಾಗಶೇಖರ್ ಈ ಬಾರಿ ನಿರ್ದೇಶನಕ್ಕೆ ಕೈ ಹಾಕಿರೋದು ‘ಭೀಮಾ ಕೋರೆಗಾಂವ’ ಎಂಬ ಸಿನಿಮಾಗೆ. ಇದು ಕೋರೆಗಾಂವ ಘಟನೆ ಕುರಿತ ಚಿತ್ರ. ಈ ಸಿನಿಮಾದ ಶೀರ್ಷಿಕೆ ಅನಾವರಣಗೊಂಡಿದೆ. ಇಂಥದ್ದೊಂದು ಸಿನಿಮಾ ಮಾಡುವುದು ಸುಲಭವಲ್ಲ.
ಸಾಕಷ್ಟು ತಯಾರಿ ಬೇಕು. ಈ ಸಿನಿಮಾ ಶುರುವಿಗೆ ಮುನ್ನ ಹೇಗೆ ಮಾಡಬೇಕು, ಯಾರೆಲ್ಲಾ ಇರಬೇಕು, ಎಂಬಿತ್ಯಾದಿ ಚರ್ಚೆಗಳು ನಡೆಯಲಿವೆ. ಅಂದಹಾಗೆ, ಈ ಚಿತ್ರವನ್ನು ಛಲವಾದಿ ಕುಮಾರ್ ನಿರ್ಮಿಸುತ್ತಿದ್ದಾರೆ. ಸಿನಿಮಾದಲ್ಲಿ ಸ್ಟಾರ್ ನಟರೊಬ್ಬರು ಕಾಣಿಸಿಕೊಳ್ಳಲಿದ್ದಾರೆ. ಎಂಬುದು ವಿಶೇಷ. ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗದ ಮೇರು ನಟರುಗಳು ಕೂಡ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಶೀರ್ಷಿಕೆ ಅನಾವರಣಗೊಂಡಿದೆ.
ಈ ಚಿತ್ರಕ್ಕೆ ಈಗಷ್ಟೇ ಚಾಲನೆ ಸಿಕ್ಕಿದೆ. ಎಲ್ಲವೂ ಚರ್ಚೆಯಾದ ಬಳಿಕ ಮುಂದಿನ ವರ್ಷಕ್ಕೆ ಚಿತ್ರ ಶುರುವಾಗಲಿದೆ ಎಂಬುದು ಚಿತ್ರತಂಡದ ಮಾಹಿತಿ. ಯಾರೆಲ್ಲ ಇರುತ್ತಾರೆ, ತಾಂತ್ರಿಕ ವರ್ಗ ಯಾರು ಎಂಬಿತ್ಯಾದಿ ವಿಷಯಗಳು ಇನ್ನಷ್ಟೇ ಹೊರ ಬರಬೇಕಿದೆ. ಈ ಸಿನಿಮಾಗೆ ಹಲವಾರು ಚಿಂತಕರು ಜೊತೆಯಾಗಿದ್ದಾರೆ. ಸುಮಾರು ಐವತ್ತು ಮಂದಿ ಈ ಕುರಿತು ಚರ್ಚೆ ನಡೆಸಲಿದ್ದಾರೆ. ಇನ್ನು, ನಾಗಶೇಖರ್ ಜೊತೆ ಚಕ್ರವರ್ತಿ ಚಂದ್ರಚೂಡ್ ಕೂಡ ಕೈ ಜೋಡಿಸಿದ್ದಾರೆ. ಸ್ಕ್ರಿಪ್ಟ್ ಕೆಲಸದಲ್ಲಿ ಅವರೂ ಇಲ್ಲಿದ್ದಾರೆ.