ಹಿರಿಯ ನಟ ರಾಘವೇದ್ರ ರಾಜ್ಕುಮಾರ್, ಶೃತಿ ಹಾಗು ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಭಾವೈಕ್ಯತೆಯ ಸಂದೇಶ ಸಾರುವ, ಕುತೂಹಲಕಾರಿ ಕಥಾಹಂದರ ಹೊಂದಿರುವ ಚಿತ್ರ “13”. ಇದೇ ತಿಂಗಳ 15ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆ ಕಾಣುತ್ತಿರುವ ಈ ಚಿತ್ರದಲ್ಲಿ ರಾಘಣ್ಣ ಅವರು ಮೋಹನ್ ಕುಮಾರ್ ಎಂಬ ಹಿಂದೂ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರೆ, ನಟಿ ಶೃತಿ ಅವರು ಸಾಹಿರಾಭಾನು ಎಂಬ ಮುಸ್ಲಿಂ ಮಹಿಳೆಯ ಪಾತ್ರ ನಿರ್ವಹಿಸಿದ್ದಾರೆ.
ನಟ ರಾಗಣ್ಣ ಮಾತನಾಡಿ, ನಾನು ಈ ಕಥೆ ಕೇಳಬೇಕಾದರೆ ಅಲ್ಲಿ ನನಗೆ ನಾಯಕನ ಪಾತ್ರ ಕಾಣಲಿಲ್ಲ, ಒಂದು ಪಾತ್ರ ಕೊನೆ ವರೆಗೆ ಪ್ರೇಕ್ಷಕರನ್ನು ಕರೆದುಕೊಂಡು ಹೋಗುತ್ತೆ ಅದೇ ನನ್ನ ಪಾತ್ರ ಅನಿಸಿತು. ಈ ಚಿತ್ರದ ನಿಜವಾದ ಹೀರೋ ಅಂದರೆ ಕಂಟೆಂಟ್, ಈಗ ಜನರನ್ನು ಥೇಟರ್ ವರೆಗೂ ಕರೆದುಕೊಂಡು ಬರುವ ಜವಾಬ್ದಾರಿ ನಿಮ್ಮ ಮೇಲಿದೆ. ಈ ಚಿತ್ರದಲ್ಲಿ ನಾನೊಬ್ಬ ಹಿಂದೂ, ಶೃತಿ ಅವರು ಮುಸ್ಲಿಂ ಮಹಿಳೆ, ಈತ ಅಲ್ಲಾ ಕಾಪಾಡು ಅಂದರೆ, ಆಕೆ ಕೃಷ್ಣಾ ಕಾಪಾಡು ಅನ್ನುತ್ತಾಳೆ. ಚಿತ್ರದಲ್ಲಿ ಇಬ್ಬರೂ ತಮ್ಮ ಜಾತಿ, ಧರ್ಮವನ್ನು ಬಿಟ್ಟು ಒಂದಾಗಿಬಿಡ್ತಾರೆ. ಅದೇ ನನಗೆ ಇಷ್ಟವಾಗಿದ್ದು ಎಂದು ಹೇಳಿದರು.
ನಿರ್ದೇಶಕ ನರೇಂದ್ರಬಾಬು ಮಾತನಾಡಿ, ಚಿಕ್ಕವನಿದ್ದಾಗ ಅಣ್ಣಾವ್ರ ಸಿನಿಮಾ ನೋಡಲು ಕ್ಯೂನಲ್ಲಿ ನಿಲ್ತಿದ್ದ ನಾನು ಈಗ ಅವರ ಪಕ್ಕದಲ್ಕಿ ಕುಳಿತಿರುವುದು ನನ್ನ ಅದೃಷ್ಟ. ನಮ್ಮ ಚಿತ್ರ 6 ದಿನಗಳ ಹಬ್ಬ, ಇದು 5ನೇ ಹಬ್ಬ, ಸಿನಿಮಾ ನಾವಂದುಕೊಂಡಿದ್ದಕ್ಕಿಂತಲೂ ಅದ್ಭುತವಾಗಿ ಮೂಡಿ ಬಂದಿದೆ. 13 ಕೋಟಿ ಹಣದ ಸುತ್ತ ನಡೆಯುವ ಕಥೆಯಿದು. ನಿಜವಾಗಿಯೂ ಈ ಚಿತ್ರವನ್ನು ನಾನು ಮಾಡಿದ್ದಲ್ಲ. ಆ ದೇವರೇ ನನ್ನಿಂದ ಮಾಡಿಸಿದ್ದು, ಇವತ್ತಿನವರೆಗೂ ಚಿತ್ರದ ಕೊನೆಗೆ ಏನಾಗುತ್ತೆ ಅಂತ ಯಾರಿಗೂ ಗೊತ್ತಿಲ್ಲ, ಎಲ್ಲರಿಗೂ ಅವರವರ ಪಾತ್ರ ಮಾತ್ರವೇ ಗೊತ್ತು. ಪಾರ್ಟ್ 2ಗೆ ಕಥೆ ರೆಡಿ ಇದೆ. ಹಾಡು, ಟೀಸರನ್ನು ನೋಡಿದವರೆಲ್ಲರೂ ಇಷ್ಟಪಟ್ಟಿದ್ದಾರೆ. ಚಿತ್ರದ ಬಗ್ಗೆ ಈವರೆಗೂ ಯಾರಿಂದಲೂ ಒಂದಾದರೂ ನೆಗೆಟಿವ್ ಮೆಸೇಜ್ ಬಂದಿಲ್ಲ.
ಎಲ್ಲರೂ ಯಾವಾಗ ಸಿನಿಮಾ ಬರುತ್ತೆ ಅಂತಾನೇ ಕೇಳ್ತಿದಾರೆ. ಇದು ನನ್ನ ನಿರ್ದೇಶನದ ಎಂಟನೇ ಸಿನಿಮಾ, ಆದರೂ ಒಂದು ಕಡೆ ಭಯ ಅನ್ನೋದು ಇರುತ್ತೆ. ಐಟಂ ಸಾಂಗ್, ಡ್ರಿಂಕ್ಸ್ ಸೀನ್ ಇರೋದ್ರಿಂದ ಯಾವುದೇ ಕಟ್ ಹೇಳದೆ ಚಿತ್ರಕ್ಕೆ ಯು/ಎ ಕೊಟ್ಟಿದ್ದಾರೆ. ನಿರ್ಮಾಪಕರೂ ತುಂಬಾ ಸಪೋರ್ಟ್ ಮಾಡುತ್ತಿದ್ದಾರೆ. ಕೊನೆ ಹಂತಕ್ಕೆ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಾಗ ಪಾರ್ಟ್ -1, ಪಾರ್ಟ್- 2 ಆಯ್ತು. ಆ ಥಾಟ್ ಮಾತ್ರ ಕಂಟಿನ್ಯೂ ಆಗುತ್ತೆ. ಮುಖ್ಯ ಪಾತ್ರಗಳು ಹಾಗೇ ಇರುತ್ತೆ. ನಿರ್ಮಾಪಕರಿಗೆ ಹೇಳಿದ ಮೇಲೇನೇ ಪಾರ್ಟ್ -1 ಅಂತ ಪೋಸ್ಟರ್ನಲ್ಲಿ ಹಾಕ್ಕೊಂಡಿರುವುದು.
ಚಿತ್ರದಲ್ಲಿ ಆಕ್ಷನ್ ಇಲ್ಲ, 3 ಕಮರ್ಷಿಯಲ್ ಸಾಂಗ್ ಇದ್ದು, ಸಂಗೀತ ನಿರ್ದೇಶಕ ಶೋಗನ್ಬಾಬು 19 ವರ್ಷದ ಹುಡುಗ, ಅದ್ಭುತವಾದ ಮ್ಯೂಸಿಕ್ ಕೊಟ್ಟಿದ್ದಾರೆ. ಪ್ರಮೋದ್ ಶೆಟ್ಟಿ ಅವರು ಬ್ಯುಸಿ ಇದ್ದರೂ ನಮಗೋಸ್ಕರ ಬಂದಿದ್ದಾರೆ. ನಾನು ಮುಸ್ತಫಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಒಂದು ಡೈಲಾಗ್ನಿಂದಲೇ ಸಿನಿಮಾ ಎಂಡ್ ಆಗುತ್ತೆ. ಜಯಸಿಂಹ ಅದ್ಭುತವಾದ ಸಂಭಾಷಣೆ ಬರೆದಿದ್ದಾರೆ. ರಾಗಣ್ಣ ಅವರನ್ನು ರಾತ್ರಿ 12 ಗಂಟೆಗೆಲ್ಲಾ ಉಳಿಸಿಕೊಂಡು ಶೂಟಿಂಗ್ ಮಾಡಿದ್ದೇವೆ ಎಂದು ಹೇಳಿದರು. ನಿರ್ಮಾಪಕರಲ್ಲೊಬ್ಬರಾದ ಸಂಪತ್ ಮಾತನಾಡಿ, ಕಾತುರದಿಂದ ಕಾದಂಥ ಸಿನಿಮಾ. ಚೆನ್ನಾಗಿ ಬಂದಿದೆ. ದೊಡ್ಡಮಟ್ಟದಲ್ಲಿ ರಿಲೀಸ್ ಮಾಡುತ್ತಿದ್ದೇವೆ. ಜಾಕ್ ಮಂಜು ಅವರು ಡಿಸ್ಟ್ರಿಬ್ಯೂಷನ್ ಮಾಡುತ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬದಿಂದ ಟ್ಯಾಬುಲೋ ಎಲ್ಲಾ ಕಡೆ ಹೋಗ್ತಿದೆ ಎಂದರು. ಉಳಿದಂತೆ ಮಂಜುನಾಥ ಗೌಡ, ಮಂಜುನಾಥ್ ಹೆಚ್.ಎಸ್. ಕೇಶವಮೂರ್ತಿ ಸಿ. ಚಿತ್ರದ ಕುರಿತಂತೆ ಮಾತನಾಡಿದರು.
ನಂತರ ನಟ ಪ್ರಮೋದ್ ಶೆಟ್ಟಿ ಮಾತನಾಡಿ, ನಿರ್ಮಾಪಕರು ಚಿತ್ರದ ಜೊತೆಗೆ ಸೋಷಿಯಲ್ ವರ್ಕ್ ಮಾಡುತ್ತಿರುವುದು ಕೇಳಿ ತುಂಬಾ ಖುಷಿಯಾಯ್ತು. ರಾಗಣ್ಣ, ಶೃತಿ ಅವರ ಸಿನಿಮಾದಲ್ಲಿ ನಾನಿರುವುದೇ ಖುಷಿಯ ವಿಚಾರ, ನಾನು ನಿಮ್ಮ ಮುಖಕ್ಕೆ ಹೊಗೆ ಬಿಡುವ ಸೀನ್ ಮಾಡಲ್ಲ ಆಂದಾಗ ರಾಗಣ್ಣ ಅವರೇ ಯಾಕೆ ಮಾಡಲ್ಲ ಅಂತ ನನ್ನನ್ನು ಹುರಿದುಂಬಿಸಿದರು. ಅವರು ತಮ್ಮ ಜೊತೆಯಲ್ಲಿ ಆಕ್ಟ್ ಮಾಡುವವರನ್ನು ಮೋಟಿವೇಟ್ ಮಾಡುತ್ತಾರೆ ಎಂದು ಹೊಗಳಿದರು. ಉಳಿದಂತೆ ಲೋಕೇಶ್, ದಿಲೀಪ್ ಪೈ, ವಿನಯ ಸೂರ್ಯ ಮಾತನಾಡಿದರು.