ರಾಜ್ಯಪ್ರಶಸ್ತಿ ವಿಜೇತ ‘ಕಾಲ್ಗೆಜ್ಜೆ’ ಎಂಬ ಅದ್ಭುತ ಸಿನೆಮಾ ಮಾಡಿದ್ದ ಎ. ಬಂಗಾರು ಈಗ ಹೊಸದೊಂದು ಸಿನಿಮಾಗೆ ಅಣಿಯಾಗಿದ್ದಾರೆ. ಆ ಸಿನಿಮಾಗೆ ‘ಮಡಿಕೇರಿ’ ಎಂದು ನಾಮಕರಣ ಮಾಡಿದ್ದಾರೆ. ಚಿತ್ರದ ಶೀರ್ಷಿಕೆ ಅನಾವರಣಕ್ಕೆ ಹಲವು ಗಣ್ಯರು ಸಾಕ್ಷಿಯಾದರು. ಬಂಗಾರು ಅವರ ಸಿನೆಮಾ ಗುರು ಎಸ್. ಮಹೇಂದರ್ ಅವರು ಶೀರ್ಷಿಕೆ ಬಿಡುಗಡೆ ಮಾಡಿದ್ದು ವಿಶೇಷ. ಈ ವೇ ವೇಳೆ ಶ್ರೀ ರೇವಣ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನ್ನಿಧ್ಯ ವಿಶೇಷವಾಗಿತ್ತು.
ಕನ್ನಡದಲ್ಲಿ ಪ್ರೀತಿ ಪ್ರೇಮ ಕುರಿತ ಹಲವು ಸಿನಿಮಾಗಳು ಬಂದಿವೆ. ಆ ಸಾಲಿಗೆ ಈಗ ಹೊಸ ಬಗೆಯ ಕಥೆ ಹೆಣೆದು ನಿರ್ದೇಶನಕ್ಕೆಅಣಿಯಾಗಿರುವ ಬಂಗಾರು ಅವರ ‘ ಮಡಿಕೇರಿ’ ಸಿನಿಮಾ ಕೂಡ ಸೇರಿದೆ. ಅಂದಹಾಗೆ, ಪರಮಹಸ್ತ ಪ್ರೊಡಕ್ಷನ್ಸ್ ಮತ್ತು ಶ್ರೀ ಬಾಲಾಜಿ ಸಿನಿ ಕಂಬೈನ್ಸ್ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. ಈ ಚಿತ್ರಕ್ಕೆ ಎ. ಬಂಗಾರು ಅವರು ಕಥೆ, ಚಿತ್ರಕತೆ, ಸಂಭಾಷಣೆಯ ಜೊತೆಗೆ ಸಾಹಿತ್ಯವನ್ನೂ ರಚಿಸಿದ್ದಾರೆ.
ಹಿರಿಯ ನಿರ್ದೇಶಕ ಎಸ್.ಮಹೇಂದರ್ ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಸದಭಿರುಚಿಯ ಚಿತ್ರಗಳು ಕಡಿಮೆ ಆಗುತ್ತಿವೆ. ನನ್ನ ಶಿಷ್ಯ ಮಾಡಿದ್ದ ಕಾಲ್ಗೆಜ್ಜೆ ಚಿತ್ರವನ್ನ 2012ರಲ್ಲಿ ನೋಡಿ ತುಂಬಾ ಖುಷಿಪಟ್ಟಿದ್ದೆ. ಅಷ್ಟೊಂದು ಅದ್ಭುತ ಚಿತ್ರ ಅದಾಗಿತ್ತು. ಅದೇ ಬಂಗಾರು ಇದೀಗ ಇನ್ನೊಂದು ಹೊಸ ಯೋಚನೆ-ಯೋಜನೆಯೊಂದಿಗೆ ಮತ್ತೆ ಬಂದಿದ್ದಾರೆ. ನನ್ನ ಶಿಷ್ಯರಲ್ಲಿ ಅತ್ಯಂತ ಪ್ರಿಯವಾದವರು ಬಂಗಾರು. ಮಡಿಕೇರಿ ಸಿನೆಮಾ ಶೀರ್ಷಿಕೆಯೇ ಅದ್ಭುತವಾಗಿದೆ. ಖಂಡಿತ ಇದು ವಿಷಯಾಧಾರಿತ ಚಿತ್ರವಾಗಿ ಹೊರ ಹೊಮ್ಮಲಿದೆ ಎನ್ನುವ ಭರವಸೆ ಇದೆ. ಖಂಡಿತ ಬರಹಗಾರ ಮತ್ತು ಭಾವನಾಜೀವಿ ಬಂಗಾರು ಗೆಲುವು ಸಾಧಿಸಲಿ. ಎಲ್ಲರಿಗೂ ಒಳ್ಳೆಯದಾಗಲಿ” ಎಂದು ಶುಭ ಹಾರೈಸಿದರು.
ನಿರ್ದೇಶಕ ಎ ಬಂಗಾರು ಮಾತನಾಡಿ, ‘ಇದೊಂದು ಸುಮಧುರ ದೃಶ್ಯಕಾವ್ಯ. ಸಂಗೀತವೇ ಚಿತ್ರದ ಜೀವಾಳ. ಮೂರು ಬೇರೆ ಬೇರೆ ಕುಟುಂಬದ ಟ್ರಾಕ್ ನಲ್ಲಿ ಕಥೆ ಸಾಗುತ್ತದೆ. ಸುಹಾಸಿನಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮನರಂಜನಾತ್ಮಕ ಕಥಾಹಂದರವುಳ್ಳ ಈ ಚಿತ್ರಕ್ಕೆ ಪೃಥ್ವಿ ಅಂಬರ್ ನಾಯಕರಾಗುವ ಸಾಧ್ಯತೆಯಿದೆ. ಶಾಲಿನಿ ಭಟ್ ಚಿತ್ರದ ನಾಯಕಿಯಾಗಿದ್ದಾರೆ. ಟೈಟಲ್ ಝಲಕ್ ಅನಾವರಣಕ್ಕೋಸ್ಕರವೇ ಹಾಡೊಂದರ ಚಿತ್ರೀಕರಣ ಮಾಡಿದ್ದು, ನವಂಬರ್ ಹೊತ್ತಿಗೆ ಚಿತ್ರದ ಮುಹೂರ್ತ ಮತ್ತು ಶೂಟಿಂಗ್ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.
ನಿರ್ಮಾಪಕ ರವಿ ಶಾಮನೂರು ಮಾತನಾಡಿ, “ಬಂಗಾರು ಅವರು ಹದಿನೈದು ವರ್ಷದ ಸ್ನೇಹಿತರು. ಅವರ ಸಿನೆಮಾ ಮೇಲಿನ ಪ್ರೀತಿ ನಿಜಕ್ಕೂ ಶ್ಲಾಘನೀಯ. ಈ ಹಿಂದೆ ಪದವಿಪೂರ್ವ ಸಿನೆಮಾ ನಿರ್ಮಾಣ ಮಾಡಿದ್ದೆ. ಇದೀಗ ಮಡಿಕೇರಿ (ಮಂಜು ಕರಗುವ ಮುನ್ನ) ಸಿನೆಮಾಗೆ ಕೈ ಜೋಡಿಸಿದ್ದೇನೆ” ಎಂದರು.
ಇನ್ನೊಬ್ಬ ನಿರ್ಮಾಪಕರಾದ ಶಿವಪ್ರಕಾಶ್ ಮಾತನಾಡಿ, “ಬಂಗಾರು ಅವರ ಕಾಲ್ಗೆಜ್ಜೆ ಸಿನೆಮಾ ನೋಡಿ ತುಂಬಾ ಸಂಭ್ರಮಪಟ್ಟಿದ್ದೆ. ಥಿಯೇಟರ್ ನಿಂದ ಹೊರಬಂದವನೇ ಮಡಿಕೇರಿ (ಮಂಜು ಕರಗುವ ಮುನ್ನ) ಸಿನೆಮಾಗೆ ಅಡ್ವಾನ್ಸ್ ಕೊಟ್ಟಿದ್ದೆ. ಅವರ ಸಿನೆಮಾ ಪ್ಯಾಷನ್ ನನಗೆ ತುಂಬಾ ಇಷ್ಟವಾಗಿ ನಾವೆಲ್ಲಾ ಸೇರಿ ಈ ಚಿತ್ರಕ್ಕೆ ಸಾಥ್ ನೀಡಿದ್ದೇವೆ” ಎಂದು ಸಂಭ್ರಮಪಟ್ಟರು.
ಬಳಿಗಾರ್, ಮಹೇಂದ್ರ ಬಡಳ್ಳಿ ಸೇರಿದಂತೇ ಬಂಗಾರು ಅವರ ಹಿತೈಷಿಗಳು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ವೇಳೆ ಮಾತಾಡಿದ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಿನೆಮಾ ತಂಡಕ್ಕೆ ಒಳ್ಳೆಯದಾಗಲಿ ಎಂದರು.
ಸಂಗೀತ ನಿರ್ದೇಶಕ ಗಂಧರ್ವ, ‘ಇದೊಂದು ಸಂಗೀತಮಯ ಚಿತ್ರವಾಗಿದ್ದು, ಚಿತ್ರದ ಟೈಟಲ್ ಗೆ ತಕ್ಕಂತೇ ಮ್ಯೂಸಿಕ್ ಮಾಡಿದ್ದೇನೆ’ ಎಂದು ವಿವರಿಸಿದರು. ನಾಯಕಿ ಶಾಲಿನಿ ಭಟ್, ನಟಿ ಭವಾನಿ ಪ್ರಕಾಶ್ ಅನುಭವ ಹಂಚಿಕೊಂಡರು.
ಚಿತ್ರದಲ್ಲಿ ಅಚ್ಯುತಕುಮಾರ್, ಸುಧಾರಾಣಿ, ಅನುಪ್ರಭಾಕರ್, ಶ್ರೀ ಶಂಭು ಸೇರಿದಂತೇ ಮಜಾಭಾರತ ಖ್ಯಾತಿಯ ಬಸು, ವಿನೋದ್ ಗೊಬ್ರಗಾಲ, ಸುಷ್ಮಿತಾ ಸೇರಿದಂತೆ ಸಾಕಷ್ಟು ಕಲಾವಿದರು ಇರಲಿದ್ದಾರೆ. ಚಿತ್ರದ ಇನ್ನೊಂದು ವಿಶೇಷತೆ ಎಂದರೆ, ಚಂದ್ರ-ಪ್ರಭ ಮತ್ತು ಯಾಸಿನ್ ಅವರ ಕ್ಯಾಮೆರಾ ಕೈ ಚಳಕವಿದೆ. ಅರ್ಜುನ್ ಕಿಟ್ಟಿ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ, ಗಂಗಮ್ ರಾಜು ಅವರ ನೃತ್ಯ ನಿರ್ದೇಶನವಿದೆ. ದಿವ್ಯಾ ಭಾರತಿ ಅವರು ಈ ಚಿತ್ರಕ್ಕೆ ಕಾಸ್ಟೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ.