ಜವಾನ್ ಟ್ರೇಲರ್ ರಿಲೀಸ್; ಇನ್ಸ್ಟಾಗ್ರಾಮ್ ನಲ್ಲಿ ಬಿಡುಗಡೆ ಮಾಡುವ ಮೂಲಕ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟ ನಯನತಾರಾ

ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರದ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಬಿಡುಗಡೆಗೆ ಇನ್ನೊಂದೇ ವಾರವಿದ್ದರೂ, ಚಿತ್ರದ ಟ್ರೇಲರ್ ಬಿಡುಗಡೆಯಾಗಿಲ್ಲ ಎಂದು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗಾಗಿ ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡಿದೆ.


ವಿಶೇಷವೆಂದರೆ, ಈ ಟ್ರೇಲರ್ ಬಿಡುಗಡೆ ಮಾಡಿರುವುದು ಚಿತ್ರದ ನಾಯಕಿ ನಯನತಾರಾ. ಇನ್ಸ್ಟಾಗ್ರಾಮ್ ನಲ್ಲಿ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ನಯನತಾರಾ ಸೋಷಿಯಲ್ ಮೀಡಿಯಾಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ನೆಚ್ಚಿನ ನಟಿಯ ಚಿತ್ರವೊಂದರ ಟ್ರೇಲರ್ ಬಿಡುಗಡೆ ಆಗಿರುವುದು ಖುಷಿಯಾದರೆ, ನಯನತಾರಾ ಸೋಷಿಯಲ್ ಮೀಡಿಯಾಗೆ ಬಂದಿರುವುದು ಅವರ ಅಭಿಮಾನಿಗಳ ಖುಷಿಯನ್ನು ಇನ್ನಷ್ಟು ಹೆಚ್ಚಿಸಿದೆ.


ಈ ಟ್ರೇಲರ್ ನಲ್ಲಿ ರೋಚಕವೆನಿಸುವಂತಹ ಸಾಹಸಮಯ ದೃಶ್ಯಗಳು, ಎದೆ ಝಲ್ಲೆನಿಸುವ ಆಕ್ಷನ್ ದೃಶ್ಯಗಳು ಹೆಚ್ಚಿದ್ದು, ‘ಜವಾನ್’ ಪ್ರಪಂಚವನ್ನು ತೆರೆದಿಟ್ಟಿದೆ. ಕಣ್ಣು ಸೆಳೆಯುವ ದೃಶ್ಯಗಳಿರುವ ಈ ಟ್ರೇಲರ್ ಪ್ರೇಕ್ಷಕರ ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಾಗಿಸಿದ್ದು, ಚಿತ್ರ ಬಿಡುಗಡೆಗೆ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.


‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ನಡಿಯಲ್ಲಿ ಗೌರಿ ಖಾನ್ ನಿರ್ಮಿಸಿದರೆ, ಗೌರವ್ ವರ್ಮ ಸಹನಿರ್ಮಾಪಕರಾಗಿದ್ದಾರೆ. ಚಿತ್ರವು ಸೆ.07ರಂದು ಜಗತ್ತಿನಾದ್ಯಂತ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

Related Posts

error: Content is protected !!