ರೇಟಿಂಗ್ 3/5
- ವಿಜಯ್ ಭರಮಸಾಗರ
ನಿರ್ದೇಶನ: ಹೇಮಂತ್ ಎಂ.ರಾವ್
ನಿರ್ಮಾಣ: ಪರಂವಃ ಪಿಕ್ಚರ್ಸ್
ತಾರಾಗಣ: ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಶರತ್ ಲೋಹಿತಾಶ್ವ, ರಮೇಶ್ ಇಂದಿರಾ, ಅಚ್ಯುತ್ ಕುಮಾರ್, ಅವಿನಾಶ್, ಗೋಪಾಲಕೃಷ್ಣ ದೇಶಪಾಂಡೆ ಇತರರು.
‘ನಾವ್ ಮನುಷ್ಯರಾಗಿ ಹುಟ್ಟಿಲ್ಲ. ಮನುಷ್ಯರಾಗೋಕೆ ಹುಟ್ಟಿದ್ದೇವೆ…’ ಇದು ಯಶವಂತ ಚಿತ್ತಾಲರ ‘ಶಿಕಾರಿ’ ಕಾದಂಬರಿಯ ಅರ್ಥಪೂರ್ಣ ಸಂಭಾಷಣೆ...
ಈ ಸಂಭಾಷಣೆ ಈ ಚಿತ್ರದಲ್ಲೂ ಸಂಧರ್ಭಕ್ಕನುಸಾರ ಇಡಲಾಗಿದೆ. ಆದರೆ, ಈ ಡೈಲಾಗ್ ಬರುವ ಹೊತ್ತಿಗೆ ಆ ಹೀರೋ ಸ್ಥಿತಿ ಮರುಕ ಹುಟ್ಟಿಸುವಂತಿರುತ್ತೆ. ನಿರ್ದೇಶಕರ ಕಥೆ ಚೆನ್ನಾಗಿದೆ. ಅದನ್ನು ಅಷ್ಟೇ ಪರಿಣಾಮಕಾರಿಯಾಗಿಯೂ ನಿರೂಪಿಸಿದ್ದಾರೆ. ಆದರೆ, ಅವಧಿ ಕೊಂಚ ಹೆಚ್ಚಾಯ್ತು ಎಂಬ ಮಾತು ಬಿಟ್ಟರೆ ಚಿತ್ರದ ಬಗ್ಗೆ ಯಾವ ತಕರಾರಿಲ್ಲ. ಮೊದಲರ್ಧ ಲವಲವಿಕೆಯಲ್ಲೇ ಸಾಗುತ್ತೆ ಆಗಾಗ, ಒಂದೊಂದೇ ಟ್ವಿಸ್ಟುಗಳು ನೋಡುಗನ ಟೆಸ್ಟು ಮಾಡುತ್ತಾ ಹೋಗುತ್ತವೆ.
ಆರಂಭದಲ್ಲಿ ತುಸು ಏರುಪೇರು ಎನಿಸಿದರೂ, ಇಡೀ ಚಿತ್ರ ಮುಗಿಯುವ ಹೊತ್ತಿಗೆ ಎದೆಭಾರ ಎನಿಸುತ್ತೆ. ಒಂದೊಳ್ಳೆಯ ಪ್ರೇಮಕಥೆಯೊಳಗೆ ನೂರಾರು ಭಾವನೆಗಳು, ಹಲವಾರು ಕನಸುಗಳು, ಹತ್ತಾರು ಆಸೆ-ಆಕಾಂಕ್ಷೆಗಳು ತೆರೆದುಕೊಳ್ಳುತ್ತಲೇ ನೋಡುಗನನ್ನು ಭಾವುಕತೆಗೆ ದೂಡಿ ಹೊರಬಂದಾಗಲೂ ಕೊಂಚ ಕಾಡುತ್ತದೆ.
ಇದುವರೆಗೆ ಸಾಕಷ್ಟು ಲವ್ ಸ್ಟೋರಿಗಳು ಬಂದಿವೆ. ಇಲ್ಲೂ ಲವ್ ಸ್ಟೋರಿ ಇದೆಯಾದರೂ, ಅದು ವಿಭಿನ್ನ. ಯಾವ ಪ್ರೀತಿಯಲ್ಲಿ ನೋವಿರಲ್ಲ ಹೇಳಿ? ಇಲ್ಲೂ ಒಲವು ಚೆಲುವು ನೋವು ಮೇಳೈಸಿದೆ. ಸಿನಿಮಾ ಶುರುವಿಗೇ ನಾಯಕ ಮನು ಮತ್ತು ನಾಯಕಿ ಪ್ರಿಯಾ (ಪುಟ್ಟಿ) ಮದ್ವೆ ಹಂತಕ್ಕೆ ಬಂದಿರುತ್ತಾರೆ. ಹಾಗಾಗಿ ನಿರ್ದೇಶಕರು ಇಲ್ಲಿ ವಿನಾಕಾರಣ ಹಾಡು ಇಟ್ಟು ಇಬ್ಬರಿಗೂ ಮರಸುತ್ತಿಸಿಲ್ಲ.
ನಾಯಕಿಗಾಗಿ ಹೀರೋ ಭರ್ಜರಿಯಾಗಿ ಹೊಡೆದಾಡಿಯೂ ಇಲ್ಲ. ಸಿನಿಮಾ ಪ್ರೀತಿ ಮತ್ತು ಆಪ್ತತೆಯನ್ನು ಎತ್ತಿ ತೋರಿಸುತ್ತದೆ. ಒಂದೊಳ್ಳೆಯ ಹಿತಾನುಭವದ ಜೊತೆ ‘ಛೇ’ ಎಂಬ ಉದ್ಘಾರವೂ ಹಾಗೊಮ್ಮೆ ಬರುತ್ತೆ. ಅಷ್ಟರ ಮಟ್ಟಿಗೆ ಯುವ ಪ್ರೇಮಿಗಳ ಲವ್ ಸ್ಟೋರಿ ಇಷ್ಟವಾಗುತ್ತೆ.
ಸಿನಿಮಾ ವೇಗಕ್ಕೆ ಹಿನ್ನೆಲೆ ಸಂಗೀತ ಹೆಗಲು ಕೊಟ್ಟಿದೆ. ಕತ್ತರಿ ಪ್ರಯೋಗ ಕೂಡ ಕಿರಿಕಿರಿ ಎನಿಸಲ್ಲ. ಇನ್ನು ಕ್ಯಾಮೆರಾ ಕೈಚಳಕವೂ ಇದಕ್ಕೆ ಹೊರತಲ್ಲ. ಇನ್ನು ನಿರ್ದೇಶಕರು ನೈಜತೆಗೆ ಹೆಚ್ಚು ಒತ್ತ ನೀಡಿದ್ದಾರೆ.
ಕಥೆ ಇಷ್ಟು…
‘ಅವನು ಕ್ಯಾಬ್ ಡ್ರೈವರ್. ಅವಳು ಸಿಂಗರ್. ಇಬ್ಬರದೂ ಗಾಢ ಪ್ರೀತಿ. ಅವಳಿಗೆ ಅವನೇ ಸಮುದ್ರ. ಆಕೆಗೆ ಕಡಲ ತೀರದಲ್ಲಿ ಪುಟ್ಟ ಮನೆ ಮಾಡಿ ಬದುಕು ಸವೆಸಬೇಕೆಂಬ ಆಸೆ. ಆದರೆ ಅವನು ಡ್ರೈವರ್ ಆಗಿದ್ದರಿಂದ ಪ್ರೀತಿಸಿದವಳ ಆಸೆ ಪೂರೈಸಲು ಹೆಣಗಾಡುತ್ತಾನೆ. ಹೀಗಿರುವಾಗಲೇ ಒಂದು ಘಟನೆ ಸಂಭವಿಸುತ್ತೆ. ಅಲ್ಲಿಂದ ಅವರಿಬ್ಬರ ಪ್ರೀತಿ ಮತ್ತಷ್ಟು ಗಟ್ಟಿಯಾಗುತ್ತಲೇ ಎಲ್ಲರ ಎದೆಭಾರವಾಗಿಸುತ್ತ ಹೋಗುತ್ತೆ.
ಪ್ರೀತಿಸಿದ ಹುಡುಗಿಯ ಆಸೆ ಈಡೇರಿಸಲು ಮಾಡದ ತಪ್ಪನ್ನು ಒಪ್ಪಿ ಜೈಲು ಸೇರುತ್ತಾನೆ. ಅತ್ತ, ಯಮ ಹಿಂಸೆ ಪಡುವ ಅವನಿಗೆ ನನ್ನಾಕೆಯ ಆಸೆ ಈಡೇರಿಸಬೇಕೆಂಬ ಹಠವೊಂದೇ. ಇದರ ನಡುವೆ ಒಂದಷ್ಟು ಡ್ರಾಮಾಗಳು. ಕೊನೆಗೆ ಇಬ್ಬರು ಒಂದಾಗುತ್ತಾರಾ, ಅವಳ ಆಸೆ ಈಡೇರಿಸುತ್ತಾನಾ ಇಲ್ಲವೋ ಅನ್ನೋದು ಸಸ್ಪೆನ್ಸ್ .
ಯಾರು ಹೇಗೆ?
ರಕ್ಷಿತ್ ಶೆಟ್ಟಿ ಅವರ ನಟನೆ ಬಗ್ಗೆ ಹೊಗಳುವಂಥದ್ದೇನೂ ಇಲ್ಲ. ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಸ್ವಲ್ಪ ಬೆಳವಣಿಗೆ ಕಾಣುತ್ತೆ. ಆದರೆ, ಅವರ ಮೌನ ಮತ್ತು ಭಾವುಕರಾಗುವ ಸನ್ನಿವೇಶದಲ್ಲಿ ಗಮನ ಸೆಳೆಯುತ್ತಾರೆ. ರುಕ್ಮಿಣಿ ವಸಂತ್ ನಟನೆಯಲ್ಲಿ ಲವಲವಿಕೆ ಇದೆ. ಒಂದರ್ಥದಲ್ಲಿ ಇಡೀ ಸಿನಿಮಾದ ಕೇಂದ್ರಬಿಂದು.
ಮಿಡಲ್ ಕ್ಲಾಸ್ ಹುಡುಗಿಯಾಗಿ ಇಷ್ಟವಾಗುತ್ತಾರೆ. ನೈಜವಾಗಿಯೇ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಉಳಿದಂತೆ ಶರತ್ ಲೋಹಿತಾಶ್ವ, ರಮೇಶ್ ಇಂದಿರಾ, ಅಚ್ಯುತ್ ಕುಮಾರ್ ಗಮನ ಸೆಳೆಯುತ್ತಾರೆ. ಗೋಪಾಲಕೃಷ್ಣ ದೇಶಪಾಂಡೆ ಇತರರು ಕೊಟ್ಟ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಚರಣ್ ರಾಜ್ ಅವರ ಹಿನ್ನೆಲೆ ಸಂಗೀತ ಪೂರಕವಾಗಿದೆ. ಅದ್ವೈತ ಗುರುಮೂರ್ತಿ ಅವರ ಕ್ಯಾಮೆರಾ ಕೆಲಸ ಚಿತ್ರದ ಪ್ಲಸ್ ಎನ್ನಬಹುದು.