ಅನಸೂಯ ಕೋಮಲ್ ಕುಮಾರ್ ನಿರ್ಮಾಣದ ಮತಿವಣನ್ ನಿರ್ದೇಶನದ “ಕಾಲಾಯ ನಮಃ” ಚಿತ್ರದಲ್ಲಿ ಬಹಳ ದಿನಗಳ ನಂತರ ಸಹೋದರರಾದ ಜಗ್ಗೇಶ್ ಹಾಗೂ ಕೋಮಲ್ ಅಭಿನಯಿಸುತ್ತಿದ್ದಾರೆ. ಇವರಿಬ್ಬರು ಭಾಗವಹಿಸಿರುವ ಹಾಡೊಂದರ ಚಿತ್ರೀಕರಣ ಜಾಲಿವುಡ್ ಸ್ಟುಡಿಯೋದಲ್ಲಿ ಜೋರಾಗಿ ನಡೆಯುತ್ತಿದೆ
‘ನಾನು ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಕೋಮಲ್, ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ನಾನು ಅವತ್ತಿನಿಂದ ಹೇಳುತ್ತಿದ್ದೇನೆ. ಕೋಮಲ್ ಅದ್ಭುತ ಕಲಾವಿದ ಎಂದು. ಇದರಲ್ಲಿ ನಾನು, ಕೋಮಲ್ ಹಾಗೂ ನನ್ನ ಮಗ ಯತಿರಾಜ್ ಮೂರು ಜನ ನಟಿಸಿದ್ದೇವೆ. ಇತ್ತೀಚೆಗೆ ಬರುತ್ತಿರುವ ಅನೇಕ ಚಿತ್ರಗಳು ಯಶಸ್ವಿಯಾಗುತ್ತಿದೆ. “ಕಾಲಾಯ ನಮಃ” ಸಹ ಪ್ರಚಂಡ ಯಶಸ್ಸು ಕಾಣಲಿ ಎಂದು ಜಗ್ಗೇಶ್ ಹಾರೈಸಿದರು.
ಇದು ನಮ್ಮ ಸಂಸ್ಥೆಯ ಚಿತ್ರ. ನನ್ನ ಹೆಂಡತಿ ಅನಸೂಯ ಅವರು ನಿರ್ಮಾಪಕರು ಎಂದು ಮಾತು ಆರಂಭಿಸಿದ ಕೋಮಲ್ ಕುಮಾರ್, “ಕಾಲಾಯ ನಮಃ” ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಈಗ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಈ ಹಾಡಿನ ಚಿತ್ರೀಕರಣದಲ್ಲಿ ನಮ್ಮ ಅಣ್ಣ ಜಗ್ಗೇಶ್, ನಾನು ಹಾಗೂ ಮುಂಬೈ ನಟಿಯೊಬ್ಬರು ಪಾಲ್ಗೊಂಡಿದ್ದೇವೆ. ಯೋಗರಾಜ್ ಭಟ್ ಈ ಹಾಡನ್ನು ಬರೆದಿದ್ದಾರೆ. ಎಮಿಲ್ ಸಂಗೀತ ನೀಡಿದ್ದಾರೆ. ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ. ನಾಯಕಿಯಾಗಿ ಆಸಿಯಾ ಫಿರ್ದೋಸ್ ನಟಿಸಿದ್ದಾರೆ. ಪ್ರಕಾಶ್ ರೈ, ಸುಚೇಂದ್ರ ಪ್ರಸಾದ್, ಶೈನ್ ಶೆಟ್ಟಿ, ಯತಿರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಅಂದುಕೊಂಡ ಹಾಗೆ ಆದರೆ, ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ಚಿತ್ರವನ್ನು ನಿಮ್ಮ ಮುಂದೆ ತರುತ್ತೇವೆ ಎಂದರು.
ಇದೊಂದು ಸಮಯದ ಸುತ್ತ ನಡೆಯುವ ಕಥೆ. ಜಗ್ಗೇಶ್, ಕೋಮಲ್ ಅವರು ಸೇರಿದಂತೆ ಎಲ್ಲಾ ಕಲಾವಿದರು ಚೆನ್ನಾಗಿ ನಟಿಸಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಮತಿವಣನ್.
ಛಾಯಾಗ್ರಹಣದ ಬಗ್ಗೆ ಛಾಯಾಗ್ರಾಹಕ ರಾಕೇಶ್ ಸಿ ತಿಲಕ್ ಮಾತನಾಡಿದರು.