ಮೇಘನರಾಜ್ ಸರ್ಜಾ ಹಲವು ವರ್ಷಗಳ ನಂತರ ನಟಿಸಿರುವ “ತತ್ಸಮ ತದ್ಭವ” ಚಿತ್ರದ ಟ್ರೇಲರ್ ಬಿಡುಗೆಡಯಾಗಿದೆ. ಧ್ರುವ ಸರ್ಜಾ ಹಾಗೂ ಡಾಲಿ ಧನಂಜಯ ಆಗಮಿಸಿ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
‘ನಾನು ಸಿನಿಮಾದಲ್ಲಿ ನಟಿಸಬಾರದು ಎಂದು ನಿರ್ಧರಿಸಿದಾಗ ಬಂದ ಸಿನಿಮಾವಿದು ಎಂದು ಮಾತು ಆರಂಭಿಸಿದ ಮೇಘನರಾಜ್ ಸರ್ಜಾ, ಈ ಚಿತ್ರ ಆರಂಭವಾಗಲು ಕಾರಣ ನನ್ನ ಪತಿ ಚಿರು. ಅವರಿಗೆ ಪ್ರಜ್ವಲ್ ಹಾಗೂ ಪನ್ನಗ ಅವರ ಜೊತೆ ಸೇರಿ ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡಬೇಕೆಂಬ ಆಸೆಯಿತ್ತು. ನಂತರ ಪನ್ನಗಾಭರಣ ಈ ಚಿತ್ರದ ಕಥೆಯನ್ನು ಹೇಳಲು ನಿರ್ದೇಶಕರನ್ನು ಮನೆಗೆ ಕಳುಹಿಸಿದರು. ಕಥೆ ಇಷ್ಟವಾಯಿತು. ಅಭಿನಯಿಸಿದ್ದೇನೆ.
ಪನ್ನಗಾಭರಣ, ಸ್ಪೂರ್ತಿ ಅನಿಲ್ ಹಾಗೂ ಚೇತನ್ ನಂಜುಂಡಯ್ಯ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಪ್ರಜ್ವಲ್ ಅಭಿನಯಿಸಿದ್ದಾರೆ. ಇಂದು ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರ ಸೆಪ್ಟೆಂಬರ್ 15 ತೆರೆಗೆ ಬರಲಿದೆ. ನಾನು ಈ ಚಿತ್ರ ಮಾಡಲು ಸಹಕಾರ ನೀಡಿದ ನನ್ನ ಎರಡು ಕುಟುಂಬಕ್ಕೆ ಧನ್ಯವಾದ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾ ಹಾಗೂ ಧನಂಜಯ ಅವರಿಗೆ ವಿಶೇಷ ಧನ್ಯವಾದ ಎಂದರು ಮೇಘನಾರಾಜ್.
ನಾನು ಈವರೆಗೂ ಮಾಡದ ಪಾತ್ರ ಈ ಚಿತ್ರದಲ್ಲಿ ಮಾಡಿದ್ದೇನೆ. ಬಹಳ ಇಷ್ಟಪಟ್ಟು ಮಾಡಿರುವ ಸಿನಿಮಾವಿದು. ಟ್ರೇಲರ್ ಗೆ ನಮ್ಮ ತಂದೆ ದೇವರಾಜ್ ಅವರು ಧ್ವನಿ ನೀಡಿದ್ದಾರೆ ಎಂದು ಪ್ರಜ್ವಲ್ ದೇವರಾಜ್ ತಿಳಿಸಿದರು.
“ತತ್ಸಮ ತದ್ಭವ” ಒಂದು ಕ್ರೈಮ್ ಥ್ರಿಲ್ಲರ್ ಚಿತ್ರ. ಆದರೆ ಮಾಮೂಲಿ ಕ್ರೈಮ್ ಥ್ರಿಲ್ಲರ್ ಗಳಿಗಿಂತ ವಿಭಿನ್ನ. ನನ್ನ ಕಥೆ ಮೆಚ್ಚಿ ನಿರ್ಮಾಣ ಮಾಡಿರುವ ನಿರ್ಮಾಪಕರಿಗೆ, ಚಿತ್ರದಲ್ಲಿ ನಟಿಸಿರುವ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ನಾನು ಆಭಾರಿ ಎನ್ನುತ್ತಾರೆ ನಿರ್ದೇಶಕ ವಿಶಾಲ್ ಆತ್ರೇಯ.
ನಾನು ಸಮಾನ್ಯವಾಗಿ ಭಾವುಕನಾಗುವುದಿಲ್ಲ. ಇಂದು ಏಕೋ ಗೊತ್ತಿಲ್ಲ ಸ್ವಲ್ಪ ಭಾವುಕನಾಗುತ್ತಿದ್ದೇನೆ ಎಂದು ಮಾತು ಪ್ರಾರಂಭಿಸಿದ ನಿರ್ಮಾಪಕ ಪನ್ನಗಾಭರಣ, ನಾನು ನಿರ್ಮಾಪಕನಾಗಬೇಕು ಅಂತ ಇರಲಿಲ್ಲ. ನಿರ್ಮಾಪಕನಾದೆ. ನನ್ನೊಟ್ಟಿಗೆ ಕೆಲವು ಸ್ನೇಹಿತರು ಕೈ ಜೋಡಿಸಿದರು. ಈಗ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸೆಪ್ಟೆಂಬರ್ 15 ಚಿತ್ರ ಬಿಡುಗಡೆಯಾಗಲಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾ ಹಾಗೂ ಧನಂಜಯ ಅವರಿಗೆ ಧನ್ಯವಾದ. ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಇನ್ನೊಂದು ವಿಶೇಷವೆಂದರೆ ನಮ್ಮ ಚಿತ್ರದ ಟಿಕೆಟ್ ಪಡೆದುಕೊಂಡವರು ಕೊನೆಯಲ್ಲಿ ಆ ಟಿಕೆಟ್ ನಲ್ಲಿರುವ ಕ್ಯೂ ಆರ್ ಕೋಡನ್ನು ಸ್ಕ್ಯಾನ್ ಮಾಡಬೇಕು. ಆಗ ಹಲವರಿಗೆ ಗಿಫ್ಟ್ ಕೂಪನ್ ಗಳು ದೊರೆಯಲಿದೆ ಎಂದರು.
ಸಂಗೀತ ನಿರ್ದೇಶಕ ವಾಸುಕಿ ವೈಭವ್, ಛಾಯಾಗ್ರಾಹಕ ಶ್ರೀನಿವಾಸ ರಾಮಯ್ಯ, ಕೆ.ಆರ್.ಜಿ ಸ್ಟುಡಿಯೋಸ್ ಯೋಗಿ ಜಿ ರಾಜ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.