ಪ್ರೈಡ್ ಇಂಡಿಯಾ ಅವಾರ್ಡ್ ಇವೆಂಟ್ ಗೆ ಶ್ರೀಯಾ ಶರಣ್ ಸಾಕ್ಷಿ

ಭಾರತೀಯ ಉದ್ಯಮ ಕ್ಷೇತ್ರದಲ್ಲಿನ ಸಾಧಕರನ್ನು ಗುರುತಿಸಿ, ಪ್ರಶಸ್ತಿ ಕೊಡಮಾಡಿ ಪ್ರೋತ್ಸಾಹಿಸುವಲ್ಲಿ `ಪ್ರೈಡ್ ಇಂಡಿಯಾ ಅವಾರ್ಡ್’ ಮಹತ್ವದ್ದೆನ್ನಿಸಿಕೊಂಡಿದೆ. ಇತ್ತೀಚೆಗೆ ಬೆಂಗಳೂರಿನ ಯಶವಂತಪುರ ತಾಜ್‍ನಲ್ಲಿ ಈ ಪ್ರಶಸ್ತಿ ಪ್ರಧಾನ ಸಮಾರಂಭ ಅಚ್ಚುಕಟ್ಟಾಗಿ ನೆರವೇರಿದೆ. ಉದ್ಯಮ ರಂಗದ ದಿಗ್ಗಜರು, ಸಾಧಕರು ನೆರೆದಿದ್ದ ಈ ಕಾರ್ಯಕ್ರಮಕ್ಕೆ ಭಾರತೀಯ ಚಿತ್ರರಂಗದ ಖ್ಯಾತ ನಟಿ ಶ್ರೀಯಾ ಶರಣ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಉದ್ಯಮ ಜಗತ್ತೆಂಬುದು ಸಾಗರವಿದ್ದಂತೆ. ಅದರಲ್ಲಿನ ನಾನಾ ವಿಭಾಗಗಳಲ್ಲಿ ಗೇಮ್ ಚೇಂಜರ್ ಅನ್ನಿಸಿಕೊಂಡು, ಹೊಸತನಗಳ ಮೂಲಕ ಸಾಧನೆ ತೋರಿದ ತೊರೆಗಳೆಲ್ಲ ಯಶವಂತಪುರ ತಾಜ್ ಪ್ರಾಂಗಣದಲ್ಲಿ ಸಂಗಮಿಸಿದಂತಿತ್ತು. ಈ ಸ್ಫೂರ್ತಿದಾಯಕ ಕಾರ್ಯಕ್ರಮದಲ್ಲಿ ಲವಲವಿಕೆಯಿಂದ ಪಾಲ್ಗೊಂಡಿದ್ದ ಶ್ರೀಯಾ ಶರಣ್, ಇದೊಂದು ಅದ್ಭುತ ಕಾರ್ಯಕ್ರಮ ಎಂಬಂಥಾ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.


ಎಲ್ಲ ಸವಾಲುಗಳನ್ನು ಮೀರಿಕೊಂಡು ಉದ್ಯಮ ರಂಗದಲ್ಲಿ ಸಾಧನೆಗೈದವರನ್ನು ಸನ್ಮಾನಿಸುವ ಕಾರ್ಯಕ್ರಮವದು. ಇದರಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದ ಕಬ್ಜಾ ಖ್ಯಾತಿಯ ಶ್ರೀಯಾ ಶರಣ್ ಪ್ರಶಸ್ತಿಗಳನ್ನು ಸಾಧಕರಿಗೆ ಕೊಟ್ಟು ಸಂತಸಪಟ್ಟಿದ್ದಾರೆ. ಇಂಡಿಯಾ ಪ್ರೈಡ್ ಅವಾರ್ಡ್ ಇವೆಂಟ್ ಬೆಂಗಳೂರಿನಲ್ಲಿ ನಡೆಯುತ್ತಿರೋದೇ ಖುಷಿ ಎಂಬುದಾಗಿ ಮಾತು ಶುರು ಮಾಡಿದ ಶ್ರೀಯಾ, ಈ ಪ್ರಶಸ್ತಿಗಳನ್ನು ತಾನೇ ಕೊಟ್ಟಿದ್ದನ್ನು ಕಂಡು ತಮ್ಮ ಪೋಶಕರೂ ಹೆಮ್ಮೆ ಪಡುತ್ತಾರೆಂದಿದ್ದಾರೆ. ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ಕೊಡುವ ಈ ಕಾರ್ಯಕ್ರಮ ಅರ್ಥವತ್ತಾಗಿದೆ. ಸಣ್ಣದು ದೊಡ್ಡದೆಂಬುದರಾಚೆಗೆ ಇಂಥಾ ಪ್ರಶಸ್ತಿಗಳು ಘನತೆಯ ಕಾರಣದಿಂದ ಮುಖ್ಯವಾಗುತ್ತವೆ. ಮುಂದೊಂದು ದಿನ ಪ್ರೈಡ್ ಇಂಡಿಯಾ ಅವಾರ್ಡ್ ಕಾರ್ಯಕ್ರಮ ಗ್ರೇಟ್ ಶೋ ಅನ್ನಿಸಿಕೊಳ್ಳಲಿದೆ ಅಂತ ಭವಿಷ್ಯ ನುಡಿದಿದ್ದಾರೆ.

ಪ್ರೈಡ್ ಇಂಡಿಯಾ ಅವಾರ್ಡ್ ಎಂಬ ಪರಿಕಲ್ಪನೆ ವಿನಯ್ ಕುಮಾರ್ ನಾರಾಯಣಸ್ವಾಮಿ ಅವರ ಕನಸಿನ ಕೂಸು. ಉದ್ಯಮ ವಲಯದಲ್ಲಿ ಹೊಸಾ ಸಾಹಸಗಳನ್ನು ಮಾಡಿ ಗೆದ್ದವರು, ನಾನಾ ವಿಭಾಗದಲ್ಲಿದ್ದಾರೆ. ಅಂಥವರನ್ನೆಲ್ಲ ಗುರುತಿಸಿ, ಪ್ರೋತ್ಸಾಹಿಸುತ್ತಾ, ಭಾರತೀಯ ಉದ್ಯಮ ರಂಗ ಹೊಸಾ ಸಾಧ್ಯತೆಗಳಿಗೆ ಒಡ್ಡಿಕೊಳ್ಳಲು ಪ್ರೇರೇಪಣೆ ನೀಡುವುದು ಈ ಇವೆಂಟಿನ ಅಸಲಿ ಆಶಯ. ಇದೀಗ ಬೆಂಗಳೂರಿನಲ್ಲಿ ಜರುಗಿರುವ ಈ ಕಾರ್ಯಕ್ರಮದಲ್ಲಿ ಉದ್ಯಮ ರಂಗದ ಮುನ್ನೂರಕ್ಕೂ ಹೆಚ್ಚು ಮಂದಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಭಾರತದ ಆರ್ಥಿಕ ಪಥವನ್ನು ಪ್ರಜ್ವಲಿಸುವಂತೆ ಮಾಡುವಲ್ಲಿ ತಮ್ಮದೇ ಸೇವೆ ಸಲ್ಲಿಸುತ್ತಿರುವ ಅನೇಕರನ್ನು ಈ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗುತ್ತದೆ. ಆ ಆಯ್ಕೆ ಪ್ರಕ್ರಿಯೆ ಕೂಡಾ ಅತ್ಯಂತ ಅಚ್ಚುಕಟ್ಟಾಗಿ ನಡೆಯುತ್ತದೆ.

ಯಶವಂತಪುರ ತಾಜ್ ನಲ್ಲಿ ನಡೆದಿರುವ ಪ್ರೈಡ್ ಇಂಡಿಯಾ ಅವಾರ್ಡ್ ವಿಶೇಷ ಆವೃತ್ತಿಯಲ್ಲಿ ಡಾ. ಸಿದ್ದೇಶ್ವರ್ ಮನೋಜ್, ಡಾ. ಮೀರ್ ಅನ್ವರ್, ಮೊಹಿಯುದ್ದೀನ್, ಸುಧಾಂಶು ಶ್ರೀವಾತ್ಸವ್, ಡಾ. ಭಾಸ್ಕರನ್ ರಾಜು ಅವರಂಥಾ ತೀರ್ಪುಗಾರರ ವಿಶೇಷ ಸಮಿತಿಯನ್ನು ಒಳಗೊಂಡಿತ್ತು. ಯಾವುದೇ ಉದ್ಯಮದಲ್ಲಿನ ಹೊಸತನ, ಪ್ರಯೋಗಶೀಲತೆ, ಸಾಹಸ ಪ್ರವೃತ್ತಿಯನ್ನು ಪರಿಗಣಿಸುತ್ತಲೇ, ಗಹನವಾದ ಚರ್ಚೆ, ಹಲವಾರು ಮಾನದಂಡಗಳ ಆಧಾರದಲ್ಲಿ ಈ ಸಮಿತಿ ಪ್ರೈಡ್ ಇಂಡಿಯಾ ಅವಾರ್ಡ್ ಗೆ ಅರ್ಹರನ್ನು ಆಯ್ಕೆ ಮಾಡಿದೆ.
ಇದೇ ಸಂದರ್ಭದಲ್ಲಿ ಈ ಅವಾರ್ಡ್ ಈವೆಂಟಿನ ಸ್ಥಾಪಕರಾದ ವಿನಯ್ ಕುಮಾರ್ ನಾರಾಯಣಸ್ವಾಮಿ ಮನದುಂಬಿ ಮಾತಾಡಿದ್ದಾರೆ.

ಭಾರತೀಯ ಉದ್ಯಮ ರಂಗದಲ್ಲಿ ನಡೆಯುತ್ತಿರುವ ನಾವೀನ್ಯತೆ ಬೆರೆತ ಪ್ರಯತ್ನಗಳಾಗುತ್ತಿರುವುದು ಖುಷಿ ಕೊಡುತ್ತಿದೆ. ಪ್ರೈಡ್ ಇಂಡಿಯಾ ಅವಾರ್ಡ್ ಸಂಸ್ಥೆ ಸದಾ ಕಾಲವೂ ಉದ್ಯಮ ರಂಗದಲ್ಲಿನ ವೈಶಿಷ್ಟ್ಯ ಮತ್ತು ಅಮೋಘ ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಧ್ಯೇಯ ಹೊಂದಿದೆ. ಈ ಕಾರ್ಯಕ್ರಮದಿಂದ ಅದಕ್ಕೆ ಮತ್ತಷ್ಟು ಅರ್ಥ ಸಿಕ್ಕಂತಾಗಿದೆ ಎಂದಿದ್ದಾರೆ. ಈ ಇವೆಂಟ್ ಉದ್ಯಮ ರಂಗದ ಎಲ್ಲ ಸಾಧಕರಿಗೂ ಸ್ಫೂರ್ತಿಯಾಗಿ, ಅದಾಗಲೇ ಮಹತ್ವದ್ದನ್ನು ಸಾಧಿಸಿದವರ ಸಮಾಗಮವಾಗಿ ಮುಖ್ಯವೆನಿಸುತ್ತದೆ. ಈ ಬಾರಿಯ ಸದರಿ ಅವಾರ್ಡ್ ಇವೆಂಟಿನಲ್ಲಿ ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ತಾರೆ ಶ್ರೀಯಾ ಶರಣ್ ಪ್ರಧಾನ ಆಕರ್ಷಣೆಯಾಗಿದ್ದರು. ಅವರ ಇರುವಿಕೆಯಿಂದ ಈ ಈವೆಂಟ್ ಕಳೆಗಟ್ಟಿಕೊಂಡು ನೆರವೇರಿದೆ.

Related Posts

error: Content is protected !!