ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಆಗಸ್ಟ್. 24ರಂದು ಕೊಡಗಿನ ಅಮ್ಮತ್ತಿ ಕೊಡವ ಸಮಾಜದಲ್ಲಿ ಇವರಿಬ್ಬರೂ ಸಪ್ತಪದಿ ತುಳಿಯಲಿದ್ದಾರೆ. ಸುಮಾರು 5 ವರ್ಷಗಳಿಂದ ತಮ್ಮ ಪ್ರೀತಿಯನ್ನು ಗುಟ್ಟಾಗಿಟ್ಟಿದ್ದ ಈ ಜೋಡಿ, ಇದೀಗ ಮದ್ವೆಯಾಗುತ್ತಿದೆ. ಆಗಸ್ಟ್ 23 ಮತ್ತು 24ರಂದು ಕೂರ್ಗಿ ಸಂಪ್ರದಾಯದಂತೆ ಇವರ ಮದುವೆ ಕಾರ್ಯಕ್ರಮ ನಡೆಯಲಿದೆ, ಈ ವಿಷಯವನ್ನು ಮಾಧ್ಯಮ ಮುಂದೆ ಹಂಚಿಕೊಂಡ ಜೋಡಿ, ತಮ್ಮ ನೂತನ ಬ್ಯಾನರ್ ಹಾಗೂ ಹೊಸ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು.
ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಜೋಡಿ ಭುವನಂ ಎಂಟರ್‌ಟೈನ್‌ಮೆಂಟ್ ಎಂಬ ಹೊಸ ಪ್ರೊಡಕ್ಷನ್ ಹೌಸ್ ಶುರು ಮಾಡಿದ್ದು, ಅದರ ಪ್ರಥಮ ಕಾಣಿಕೆಯಾಗಿ ಭುವನಂ ಶ್ರೇಷ್ಠಮ್ ಗಚ್ಚಾಮಿ ಚಿತ್ರವನ್ನು ನಿರ್ಮಿಸಲಿದ್ದಾರೆ. ಈ ಚಿತ್ರದ ಮೂಲಕ ನಟಿ ಹರ್ಷಿಕಾ ಪೂಣಚ್ಚ ಅವರು ನಿರ್ಮಾಪಕಿಯಾದರೆ, ಭುವನ್ ನಿರ್ದೇಶಕ.
ಭುವನಂ ಶ್ರೇಷ್ಠಮ್ ಗಚ್ಚಾಮಿ ಚಿತ್ರದ ನೂತನ ಪೋಸ್ಟರ್ ಬಿಡುಗಡೆ ಮಾಡುವುದರೊಂದಿಗೆ ಚಿತ್ರದ ಕುರಿತಂತೆ ನಾಯಕ, ನಿರ್ದೇಶಕ ಭವನ್ ಪೊನ್ನಣ್ಣ ಮಾಹಿತಿ ಹಂಚಿಕೊಂಡರು. ಬಾಕ್ಸಿಂಗ್ ಕುರಿತಾದ ಕತೆ ಹೊಂದಿರುವ ಈ ಚಿತ್ರದಲ್ಲಿ ಕನಸಿನ ಬೆನ್ನೇರಿ ಹೊರಟ ಹುಡುಗನಾಗಿ ಭುವನ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಚಿತ್ರದಲ್ಲಿ ಇಬ್ಬರು ನಾಯಕಿಯರು.
ಈಗಾಗಲೇ ಚಿತ್ರದ ಸ್ಕ್ರಿಪ್ಟ್ ಕೆಲಸ ಮುಗಿದಿದ್ದು, ಸೆಟ್ಟೇರುವುದಷ್ಟೇ ಬಾಕಿಯಿದೆ.