ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿಯರ ಸಂಖ್ಯೆ ಹೆಚ್ಚುತ್ತಿದೆ. ಆ ಸಾಲಿಗೆ ಈಗ ಸಿಂಧು ಗೌಡ ಸೇರ್ಪಡೆಯಾಗಿದ್ದಾರೆ. ಸಿಂಧು ಗೌಡ “ಆಪಲ್ ಕಟ್” ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಿಂಧು ಗೌಡ ಖ್ಯಾತ ನಿರ್ದೇಶಕ ರಾಜ್ ಕಿಶೋರ್ ಅವರ ಪುತ್ರಿ.
ನಿರ್ದೇಶಕಿ ಸಿಂಧು ಗೌಡ ಮಾತನಾಡಿ, ನಾನೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದೇನೆ. ‘ನಾನು ಕಳೆದ 10ವರ್ಷದಲ್ಲಿ ಹಲವು ಜನಪ್ರಿಯ ಧಾರಾವಾಹಿಗಲ್ಲಿ ನಟನೆ ಮಾಡಿದ್ದೇನೆ. ಈ ಮೊದಲು ಒಂದು ಶಾರ್ಟ್ ಫಿಲ್ಮ್ ನಿರ್ದೇಶಿಸಿದ್ದು, ಹಿರಿತೆರೆಯಲ್ಲಿ ಈ ಸಿನಿಮಾ ನನ್ನ ಮೊದಲ ಪ್ರಯತ್ನ. ನಿರ್ಮಾಪಕಿ ಶಿಲ್ಪ ಪ್ರಸನ್ನ ಹಾಗೂ ನಾನು ಪಾರ್ಕ್ ನಲ್ಲಿ ಭೇಟಿಯಾದೆವು. ನಂತರ ಕಥೆ ಕೇಳಿ ಅವರು ನಿರ್ಮಾಣಕ್ಕೆ ಮುಂದಾದರು.
‘ಆಪಲ್ ಕಟ್’, ಐದು ಜನ ಗೆಳೆಯರ ಸುತ್ತ ನಡೆಯುವ ಕಥೆ. ಜೊತೆಗೆ ನಾನು ಮಾನವಶಾಸ್ತ್ರ ಓದಿದ್ದು, ಚಿತ್ರದಲ್ಲಿ ಮಾನವಶಾಸ್ತ್ರದ ಒಂದು ಅಂಶ ಸೇರಿಸಲಾಗಿದೆ. ಒಂದು ಆಸ್ಪತ್ರೆಯಲ್ಲಿ ಅನುಮತಿ ಪಡೆದು ಶವವೊಂದನ್ನು ಸಹ ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಅದು ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದೆ ಎನ್ನಬಹುದು.
ಮೊದಲಿನಿಂದಲೂ ನಾನು ತಂದೆ ಜೊತೆ ಶೂಟಿಂಗ್ಗೆ ಹೋಗುತ್ತಿದ್ದೆ. ಹಾಗಾಗಿ ಸಿನಿಮಾ ಆಸಕ್ತಿ ಬೆಳೆಯುತ್ತಾ ಬಂತು. ಸದ್ಯ ‘ಆಪಲ್ ಕಟ್’ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಇನ್ನೆರಡು ತಿಂಗಳಲ್ಲಿ ಸೆನ್ಸಾರ್ ಮುಗಿಸಿಕೊಂಡು ಸಿನಿಮಾ ರಿಲೀಸ್ ಮಾಡುವ ಯೋಜನೆ ಇದೆ. ಸಿನಿಮಾ ಚೆನ್ನಾಗಿ ಬರಲು ತಂಡದ ಸಹಕಾರ ತುಂಬಾ ಇದೆ’ ಎಂದು ಹೇಳಿದರು.
ಚಿತ್ರದ ನಾಯಕ ಸೂರ್ಯ ಗೌಡ, ‘ನಾನು ಈ ಚಿತ್ರದಲ್ಲಿ ಸತ್ಯ ಹೆಸರಿನ ಮಾನವಶಾಸ್ತ್ರ ಪ್ರೊಫೆಸರ್ ಪಾತ್ರ ಮಾಡಿದ್ದೇನೆ. ಹಲವಾರು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಾ ಬಂದಿದ್ದು ಇದೇ ಮೊದಲಬಾರಿ ಮುಖ್ಯ ಪಾತ್ರ ನಿರ್ವಹಿಸಿದ್ದೇನೆ. ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು ನಟಿಸಿದ್ದೇನೆ. ಇದರಲ್ಲಿ ಕಥೆಯಷ್ಟೇ ತಾಯಿ-ಮಗನ ಬಾಂಧವ್ಯವನ್ನು ಅದ್ಭುತವಾಗಿ ತೋರಿಸಲಾಗಿದೆ’ ಎಂದರು.
‘ನಾನು ಮೂಲತಃ ಬಾಗೆಪಲ್ಲಿ ಹುಡುಗಿ. ಒಳ್ಳೆ ಕಂಟೆಂಟ್ ಇರುವ ಮರ್ಡರ್ ಮಿಸ್ಟರಿ ಸಿನಿಮಾದಲ್ಲಿ ಸೈಕಾಲಜಿ ಸ್ಟೂಡೆಂಟ್ ಆಗಿ ನಟಿಸಿದ್ದೇನೆ” ಎಂದರು ನಾಯಕಿ ಅಶ್ವಿನಿ ಪೋಲೆಪಲ್ಲಿ.
ಹಾಸ್ಯ ನಟ ಅಪ್ಪಣ್ಣ, ಅಭಿಜಿತ್, ತಾಯಿ ಪಾತ್ರ ಮಾಡಿರುವ ಮೀನಾಕ್ಷಿ ತಮ್ಮ ಅನುಭವ ಹಂಚಿಕೊಂಡರು. ಬಾಲು ರಾಜವಾಡಿ ಸಹ ಈ ಚಿತ್ರದ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ.
ಸಿನಿಮಾವನ್ನು ಸಾನ್ವಿ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಮೊದಲಬಾರಿ ನಿರ್ಮಾಣ ಮಾಡಿರುವ ಶಿಲ್ಪ ಪ್ರಸನ್ನ ಮಾತನಾಡುತ್ತಾ, ಕಥೆ ಕೇಳಿದಾಗ ತುಂಬಾ ಇಷ್ಟವಾಗಿ ನಿರ್ಮಾಣ ಮಾಡಿರುವುದಾಗಿ ಹೇಳಿದರು.
ವೀರ್ ಸಮರ್ಥ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಯೋಗರಾಜ್ ಭಟ್, ಸತ್ಯಪ್ರಕಾಶ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ವಾಸುಕಿ ವೈಭವ್, ವಿಜಯಶ್ರೀ ಹಾಡಿದ್ದಾರೆ. ರಾಜೇಶ್ ಗೌಡ ಛಾಯಾಗ್ರಹಣ ಹಾಗೂ ಸುಚೇಂದ್ರ ಎನ್ ಮೂರ್ತಿ ಸಂಕಲನ “ಆಪಲ್ ಕಟ್” ಚಿತ್ರಕ್ಕಿದೆ.