ಸಾಧು ಬ್ರದರ್ ಈಗ ಡೈರೆಕ್ಟರ್: ತಾಯ್ತ ಎಂಬ ನಯಾ ಚಿತ್ರ ನಿರ್ದೇಶಿಸಿದ ಲಯ

ನಟನಾಗಿ, ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಲಯಕೋಕಿಲ ಚೊಚ್ಚಲ ನಿರ್ದೇಶನದ “ತಾಯ್ತ” ಚಿತ್ರಕ್ಕಾಗಿ ರಾಮ್ ನಾರಾಯಣ್ ಅವರು ಬರೆದಿರುವ “ಶಿವನೇ ಕಾಪಾಡು” ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದ ಮೂರು ದೇವರ ಕುರಿತಾದ ಈ ಹಾಡನ್ನು ಮೂರು ಧರ್ಮದ ಗುರುಗಳು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಸಾಧುಕೋಕಿಲ , ಉಷಾ ಕೋಕಿಲ, ಸಿರಿ ಮ್ಯೂಸಿಕ್ ಚಿಕ್ಕಣ್ಣ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಿರಿ ಮ್ಯೂಸಿಕ್ ಮೂಲಕ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ.

ನಮ್ಮದು ಸಂಗೀತದ ಕುಟುಂಬ. ಬಹುತೇಕ ಎಲ್ಲರೂ ಸಂಗೀತಕ್ಕೆ ಸಂಬಂಧಿಸಿದ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದೇವೆ‌. ನಮ್ಮ ಅಣ್ಣ ಲಯಕೋಕಿಲ ಈಗ ನಿರ್ದೇಶಕನಾಗಿದ್ದಾರೆ. ಅವರ ನಿರ್ದೇಶನದ “ತಾಯ್ತ” ಚಿತ್ರದ ಹಾಡೊಂದು ಇಂದು ಬಿಡುಗಡೆಯಾಗಿದೆ. ಅವರೇ ಸಂಗೀತ ನೀಡಿದ್ದಾರೆ. ನಾನು ಕೂಡ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಚಿತ್ರ ಯಶಸ್ವಿಯಾಗಲಿ ಎಂದು ಸಾಧುಕೋಕಿಲ ಹಾರೈಸಿದರು.

ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಹಾರರ್ ಜಾನರ್ ನ ಚಿತ್ರವಾಗಿದ್ದರೂ, ಕಾಮಿಡಿ ಹಾಗೂ ಥ್ರಿಲ್ಲರ್ ಕೂಡ ಇದೆ. ನಿರ್ಮಾಪಕ ಶಾಹಿದ್ ಅವರು ಕಥೆ ಬರದಿದ್ದಾರೆ. ಚಿತ್ರಕಥೆ, ಸಂಭಾಷಣೆ ಬರೆದು ಸಂಗೀತ ಸಂಯೋಜನೆ ಹಾಗೂ ನಿರ್ದೇಶನವನ್ನು ನಾನು ಮಾಡಿದ್ದೇನೆ. ರಿಯಾನ್ ಈ ಚಿತ್ರದ ನಾಯಕನಾಗಿ, ಹರ್ಷಿಕಾ ಪೂಣಚ್ಛ ನಾಯಕಿಯಾಗಿ ನಟಿಸಿದ್ದಾರೆ.

ನನ್ನ ಮಗಳು ಭಾನುಪ್ರಿಯ ಕೂಡ ಅಭಿನಯಿಸಿದ್ದಾರೆ. ಕೆಲವರನ್ನು ಬಿಟ್ಟು, ಈ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲರೂ ಹೊಸ ಕಲಾವಿದರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಇಂದು ಬಿಡುಗಡೆಯಾಗಿರುವ ಹಾಡನ್ನು ರಾಮ್ ನಾರಾಯಣ್ ಬರೆದಿದ್ದಾರೆ. ಅನುರಾಧ ಭಟ್ ಹಾಡಿದ್ದಾರೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ ಎಂದರು ಲಯಕೋಕಿಲ.

ನಾಯಕ ರಿಯಾನ್, ನಾಯಕಿ ಹರ್ಷಿಕಾ ಪೂಣಚ್ಛ, ನಟಿ ಭಾನುಪ್ರಿಯ, ಸೇರಿದಂತೆ ಅನೇಕ ಕಲಾವಿದರು ಹಾಗೂ ಹಾಡು ಬರೆದಿರುವ ರಾಮ್ ನಾರಾಯಣ್ ಮುಂತಾದವರು “ತಾಯ್ತ” ಚಿತ್ರದ ಕುರಿತು ಮಾತನಾಡಿದರು.

Related Posts

error: Content is protected !!