ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಶಶಾಂಕ್ ನಿರ್ದೇಶನದ, ಡಾರ್ಲಿಂಗ್ ಕೃಷ್ಣ – ಮಿಲನ ನಾಗರಾಜ್ ಜೋಡಿಯ ” ಕೌಸಲ್ಯ ಸುಪ್ರಜಾ ರಾಮ” ಚಿತ್ರ ಕಳೆದವಾರ ಬಿಡುಗಡೆಯಾಗಿ, ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಈ ಯಶಸ್ಸಿನ ಖುಷಿಯನ್ನು ಚಿತ್ರತಂಡದ ಸದಸ್ಯರು ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾರೆ.
ನನಗೆ ಶಶಾಂಕ್, “ಕೌರವ” ಚಿತ್ರದ ಕಾಲದಿಂದಲೂ ಪರಿಚಯ. ಈ ಚಿತ್ರದ ಕಥೆ ಅವರು ಹೇಳಿದ ತಕ್ಷಣ ನನಗೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ. ಈಗ ಚಿತ್ರ ಬಿಡುಗಡೆಯಾಗಿ ಎಲ್ಲರ ಮನ ಗೆಲ್ಲುತ್ತಿದೆ. ಮುಂದಿನವಾರ ವಿದೇಶಗಳಲ್ಲೂ ಈ ಚಿತ್ರ ಬಿಡುಗಡೆಯಾಗಲಿದೆ. ಜೀ ವಾಹಿನಿಗೆ ಟಿವಿ ರೈಟ್ಸ್ ಹಾಗೂ ವೂಟ್ ಗೆ ಓಟಿಟಿ ಹಕ್ಕು ಮಾರಾಟವಾಗಿದೆ. ಚಿತ್ರದ ಯಶಸ್ಸಿಗೆ ಕಾರಾಣರಾದ ಪ್ರತಿಯೊಬ್ಬರಿಗೂ ಧನ್ಯವಾದವೆಂದರು ನಿರ್ಮಾಪಕ ಬಿ.ಸಿ.ಪಾಟೀಲ್. ಸೃಷ್ಟಿ ಪಾಟೀಲ್ ಅವರು ಚಿತ್ರತಂಡಕ್ಕೆ ಅಭಿನಂದನೆ ತಿಳಿಸಿದರು.
ಈ ಗೆಲವು ನನಗೆ ಬೇಕಿತ್ತು ಎಂದ ಮಾತು ಆರಂಭಿಸಿದ ನಿರ್ದೇಶಕ ಶಶಾಂಕ್, “ಕೌಸಲ್ಯ ಸುಪ್ರಜಾ ರಾಮ” ಚಿತ್ರದ ಕಥೆಯನ್ನು ಡಾರ್ಲಿಂಗ್ ಕೃಷ್ಣ ಅವರಿಗಾಗಿ ಮಾಡಿದ್ದು, ನಾನು ಸಾಮಾನ್ಯವಾಗಿ ಕಥೆ ಮಾಡಿಕೊಳ್ಳುತ್ತೇನೆ. ಆಮೇಲೆ ನಾಯಕರ ಬಳಿ ಚರ್ಚಿಸುತ್ತೇನೆ.
ಆದರೆ ಈ ಕಥೆ ಕೃಷ್ಣ ಅವರಿಗಾಗಿಯೇ ಮಾಡಿದ್ದೇನೆ. ಮಿಲನ ನಾಗರಾಜ್ ಅವರು ಮೊದಲು ಈ ಪಾತ್ರಕ್ಕೆ ಒಪ್ಪಲಿಲ್ಲ. ನಾನು ಹಾಗೂ ಕೃಷ್ಣ ಅವರನ್ನು ನಟಿಸಲು ಒಪ್ಪಿಸಲು ಬಹಳ ಶ್ರಮ ಪಟ್ಟೆವು.
ಈಗ ಅವರ ಪಾತ್ರವನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ. ಇನ್ನೂ ಈ ಚಿತ್ರ ಇಷ್ಟು ಅದ್ದೂರಿಯಾಗಿ ಮೂಡಿಬರಲು ಬಿ.ಸಿ.ಪಾಟೀಲ್ ಅವರು ಕಾರಣ. ನಮ್ಮ ಚಿತ್ರ ಕರ್ನಾಟಕ ಮಾತ್ರವಲ್ಲ. ಪಕ್ಕದ ಆಂದ್ರ ಪ್ರದೇಶ ಹಾಗೂ ತಮಿಳುನಾಡಿನಲ್ಲೂ ಬಿಡುಗಡೆಯಾಗಿತ್ತು. ಅಲ್ಲಿನ ಜನರು ನಮ್ಮ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಈ ಯಶಸ್ಸಿಗೆ ಕಾರಣರಾದ ನನ್ನ ಇಡೀ ತಂಡಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು.
ಶಶಾಂಕ್ ಸರ್ ನನ್ನ ಬಳಿ ಬಂದು, ಆಕ್ಷನ್ ಜಾನರ್ ಸಿನಿಮಾ ಮಾಡೋಣವಾ? ಎಂದರು. ನಾನು ಬೇಡ ಸರ್ . “ಕೃಷ್ಣ ಲೀಲಾ” ತರಹ ಕೌಟುಂಬಿಕ ಚಿತ್ರ ಮಾಡೋಣ ಎಂದೆ. ಒಂದು ತಿಂಗಳಲ್ಲಿ ಶಶಾಂಕ್ ಅವರು ಕಥೆ ಸಿದ್ದ ಮಾಡಿಕೊಂಡು ಬಂದರು. ಚಿತ್ರ ಆರಂಭವಾಯಿತು. ನನ್ನ ಹತ್ತು ವರ್ಷಗಳ ಸಿನಿ ಜರ್ನಿಯಲ್ಲೇ ನಾನು ಕೇಳಿರುವ ಉತ್ತಮ ಕಥೆಯಿದು. ಚಿತ್ರ ಬಿಡುಗಡೆಯಾದ ಮೇಲೆ ಪ್ರೇಕ್ಷಕರುವ ತೋರಿಸುತ್ತಿರುವ ಪ್ರೀತಿಗೆ ಮನಸ್ಸು ತುಂಬು ಬಂದಿದೆ. ನನ್ನೊಡನೆ ನಟಿಸಿರುವ ಎಲ್ಲಾ ಕಲಾವಿದರ ಅದ್ಭುತ ಅಭಿನಯ, ತಂತ್ರಜ್ಞರ ಕಾರ್ಯವೈಖರಿ ಈ ಚಿತ್ರದ ಯಶಸ್ಸಿಗೆ ಕಾರಣ. ಎಲ್ಲರಿಗೂ ನನ್ನ ಧನ್ಯವಾದ. ಬಿ.ಸಿ.ಪಾಟೀಲ್ ಅವರಿಗೆ ವಿಶೇಷ ಧನ್ಯವಾದ ಎಂದರು ನಾಯಕ ಡಾರ್ಲಿಂಗ್ ಕೃಷ್ಣ.
ನಾನು ಮೊದಲು ಈ ಪಾತ್ರ ಮಾಡಲು ಒಪ್ಪಿರಲಿಲ್ಲ. ಕೃಷ್ಣ ಹಾಗೂ ಶಶಾಂಕ್ ಅವರು ಒಪ್ಪಿಸಿದರು. ಈಗ ನನ್ನ ಪಾತ್ರಕ್ಕೆ ಸಿಗುತ್ತಿರುವ ಪ್ರಶಂಸೆ ಕಂಡು ಸಂತೋಷವಾಗಿದೆ ಎಂದರು ಮಿಲನ ನಾಗರಾಜ್.
ನಟ ನಾಗಭೂಷಣ್ ಹಾಗೂ ಚಿತ್ರದ ಮತ್ತೊಬ್ಬ ನಾಯಕಿ ಬೃಂದಾ ಆಚಾರ್ಯ ಚಿತ್ರದ ಕುರಿತು ಮಾತನಾಡಿದರು. ಬೃಂದಾ ಆಚಾರ್ಯ ಅವರೇ ನಿರೂಪಣೆ ಮಾಡಿದ್ದು ವಿಶೇಷವಾಗಿತ್ತು.