ರವಿ ಸುಬ್ಬರಾವ್, ತಮ್ಮ ಸ್ನೇಹಿತ ರಿತೇಶ್ ಜೋಶಿ ಅವರೊಂದಿಗೆ; ಸೇರಿ ನಿರ್ಮಿಸಿರುವ ಹಾಗೂ ರವಿ ಸುಬ್ಬರಾವ್ ಅವರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿ ನಾಯಕನಾಗಿ ನಟಿಸಿರುವ “ಈ ಪಟ್ಟಣಕ್ಕೆ ಏನಾಗಿದೆ” (ಭಾಗ ೧) ಚಿತ್ರ ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ.
ನನ್ನ ಜೀವನದಲ್ಲಿ ನಡೆದಿರುವ ಕೆಲವು ಘಟನೆಗಳು ಹಾಗೂ ನಾನು ನೈಜವಾಗಿ ಕಂಡಿರುವ ಕೆಲವು ಸನ್ನಿವೇಶಗಳು ಈ ಚಿತ್ರ ನಿರ್ಮಾಣಕ್ಕೆ ಸ್ಪೂರ್ತಿ ಎಂದು ಮಾತು ಪ್ರಾರಂಭಿಸಿದ ರವಿ ಸುಬ್ಬರಾವ್, ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ.
ಜೂಜು ಮತ್ತು ಬೆಟ್ಟಿಂಗ್ ಮಾಫಿಯಾದ ಸುತ್ತ ಹೆಣೆಯಲಾಗಿರುವ ಕಥೆ. ನಾಯಕ ಈ ಮಾಫಿಯ ಮೂಲಕ ಯುವಜನತೆಯನ್ನು ಮೋಸದ ಜಾಲಕ್ಕೆ ಬೀಳಿಸುತ್ತಾನೆ. ಈಗಿನ ಕಾಲದ ಯುವಕರು ಮನೆಯಲ್ಲಿರುವ ರೀತಿಯೆ ಬೇರೆ. ಆಚೆಕಡೆಯಿರುವ ರೀತಿಯೇ ಬೇರೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ಚಿತ್ರದ ಕೊನೆಗೆ ಇವೆಲ್ಲಾ ಮಾಡುವುದು ತಪ್ಪು ಎಂಬ ಸಂದೇಶ ಕೂಡ ಇದೆ.
ಹಲವು ಸನ್ನಿವೇಶಗಳನ್ನು ನೈಜವಾಗಿ ಚಿತ್ರಿಸಿರುವುದರಿಂದ ಕರ್ನಾಟಕದಲ್ಲಿ ನಮ್ಮ ಚಿತ್ರ ಸೆನ್ಸಾರ್ ಆಗಲಿಲ್ಲ. ಕೊನೆಗೆ ಹೈದರಾಬಾದ್ ನಲ್ಲಿ ನಮ್ಮ ಚಿತ್ರದ ಸೆನ್ಸಾರ್ ಆಯಿತು. ಅಲ್ಲಿನ ಸೆನ್ಸಾರ್ ಮಂಡಳಿ ಕೆಲವು ಕಟ್ಸ್ ಗಳೊಂದಿಗೆ ಎ ಪ್ರಮಾಣಪ್ರತ್ರ ನೀಡಿದೆ. ಚಿತ್ರವನ್ನು ಆಗಸ್ಟ್ ನಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕ, ನಿರ್ದೇಶಕ ಹಾಗೂ ನಾಯಕ ರವಿ ಸುಬ್ಬರಾವ್ ತಿಳಿಸಿದರು.
ಈ ಚಿತ್ರದಲ್ಲಿ ನನ್ನದು ಬೋಲ್ಡ್ ಹುಡುಗಿ ಪಾತ್ರ ಎಂದರು ನಾಯಕಿ ರಾಧಿಕಾ ರಾಮ್.
ಚಿತ್ರದಲ್ಲಿ ನಾಲ್ಕು ಹಾಡುಗಳಿದೆ ಎಂದು ತಿಳಿಸಿದ ಸಂಗೀತ ನಿರ್ದೇಶಕ ಅನಿಲ್ ಸಿ.ಜೆ, ಹಾಡುಗಳನ್ನು ಬರೆದವರ ಹಾಗೂ ಹಾಡಿದವರ ಹೆಸರುಗಳನ್ನು ಪರಿಚಯಿಸಿದರು.
ಮತ್ತೊಬ್ಬ ನಿರ್ಮಾಪಕ ರಿತೇಶ್ ಜೋಶಿ, ನಟ ಸತೀಶ್ ಶೆಟ್ಟಿ ಹಾಗೂ ವಿತರಕ ರಮೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.