ಮೊದಲ ಬಾಲ್ ನಲ್ಲಿ ಸಿಕ್ಸರ್ ಬಾರಿಸೋದು ಅಂದರೆ ಅದೊಂಥರಾ ಪರ್ಫೆಕ್ಟ್ ಬ್ಯಾಟಿಂಗ್ ನಿಂದ ಮಾತ್ರ ಸಾಧ್ಯ. ಅದರಲ್ಲೂ ಎಲ್ಲವೂ ಸರಿಯಾಗಿ ಕನೆಕ್ಟ್ ಆಗಬೇಕು. ಬೌಲರ್ ಎಸೆಯೋ ಬಾಲನ್ನು ಸರಿಯಾಗಿ ತನ್ನ ಬ್ಯಾಟ್ ಗೆ ಕನೆಕ್ಟ್ ಮಾಡಿಕೊಂಡಾಗ ಮಾತ್ರ ಆ ಬಾಲನ್ನು ಮುಲಾಜಿಲ್ಲದೆ ಬೌಂಡರಿ ದಾಟಿಸಬಹುದು. ಈಗ ಕ್ರಿಕೆಟ್ ಉದಾಹರಣೆ ಹೇಳೋಕೂ ಕಾರಣವಿದೆ.
‘ತಾಜ್ ಮಹಲ್’ ಎಂಬ ಮೊದಲ ಸಿನಿಮಾ ನಿರ್ದೇಶನದಲ್ಲೇ ಭರ್ಜರಿ ಸಕ್ಸಸ್ ಕಂಡ ಆರ್. ಚಂದ್ರು ಅವರ ಸಿನಿ ಪಯಣಕ್ಕೆ ಭರ್ತಿ ಹದಿನೈದು ವಸಂತಗಳು ಮುಗಿದು, ಹದಿನಾರನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.
ಹೌದು, ಆರ್.ಚಂದ್ರು ಅವರ ಚೊಚ್ಚಲ ಸಿನಿಮಾ ತಾಜ್ ಮಹಲ್ ಸಿನಿಮಾ ಬಿಡುಗಡೆಯಾಗಿ ಹದಿನೈದು ವರ್ಷಗಳಾಗಿವೆ. ಆ ಸಿನಿಮಾ ರಿಲೀಸ್ ಆಗಿ ಭರ್ಜರಿ ಯಶಸ್ಸು ಕಂಡಿತ್ತು. ನಾಯಕ ಅಜೇಯ್ ರಾವ್ ಅವರಿಗೂ ದೊಡ್ಡ ಗೆಲುವು ಕೊಟ್ಟ ಈ ಸಿನಿಮಾ, ಸಂಗೀತ ನಿರ್ದೇಶಕ ಭಿಮನ್ ರಾಯ್ ಅವರಿಗೂ ಖುಷಿಯ ಅಲೆಯಲ್ಲಿ ತೇಲಿಸಿತ್ತು. ಈ ಮೂಲಕ ನಿರ್ದೇಶಕ ಆರ್. ಚಂದ್ರು ಅವರನ್ನು ಭರವಸೆ ನಿರ್ದೇಶಕರನ್ನಾಗಿಸಿದ್ದು ಸುಳ್ಳಲ್ಲ.
ಆ ಸಿನಿಮಾ ಕೊಟ್ಟ ಗೆಲುವು ಇಂದು ಆರ್. ಚಂದ್ರು ಅವರನ್ನು ಬಹು ಬೇಡಿಕೆ ನಿರ್ದೇಶಕರನ್ನಾಗಿಸಿದೆ. ಕೇವಲ ನಿರ್ದೇಶಕ ಮಾತ್ರವಲ್ಲ, ನಿರ್ಮಾಪಕರಾಗಿಯೂ ಸಕ್ಸಸ್ ಕಂಡವರು. ಕನ್ನಡದಬಹುತೇಕ ಸ್ಟಾರ್ ನಟರನ್ನು ನಿರ್ದೇಶಿಸಿದ ಹೆಗ್ಗಳಿಕೆ ಅವರದು. ದೇಶಾದ್ಯಂತ ಸದ್ದು ಮಾಡಿದ ‘ಕಬ್ಜ’ ಕೂಡ ಆರ್. ಚಂದ್ರು ಅವರನ್ನು ಒಂದೊಳ್ಳೆಯ ನಿರ್ದೇಶಕ ಮತ್ತು ನಿರ್ಮಾಪಕ ಅಂತ ಹೇಳಿತು. ಸಿನಿಮಾನೇ ಉಸಿರಾಗಿಸಿಕೊಂಡಿರುವ ನಿರ್ದೇಶಕ ಆರ್.ಚಂದ್ರು ಕನ್ನಡಕ್ಕೆ ಸದಭಿರುಚಿಯ ಸಿನಿಮಾ ಕೊಡುತ್ತಲೇ ಬಂದಿದ್ದಾರೆ. ತಮ್ಮ ಮೊದಲ ಸಿನಿಮಾದ ಸಕ್ಸಸ್ ಹಾಗು ಹದಿನೈದು ವರ್ಷಗಳನ್ನು ಪೂರೈಸಿರುವ ಕುರಿತು ಹೇಳುವುದಿಷ್ಟು…
‘ತೃಪ್ತಿ ಎನ್ನುವುದು ಪ್ರಯತ್ನದಲ್ಲಿರುತ್ತದೆಯೇ ಹೊರತು ಪ್ರಾಪ್ತಿಯಲ್ಲಿಲ್ಲ. ಪೂರ್ಣ ಪ್ರಯತ್ನವೇ ಪರಿಪೂರ್ಣ ಗೆಲುವು. ಆ ಗೆಲುವಿಗೆ ಇಂದು ಸಾರ್ಥಕ ಹದಿನೈದು ವರ್ಷಗಳು. ಕನ್ನಡ ಚಿತ್ರರಂಗಕ್ಕೆ ಅಂಬೆಗಾಲಿಟ್ಟು ಇಂದು ನಾನು ಹದಿನೈದು ವಸಂತಗಳನ್ನು ಪೂರೈಸಿ 16 ರ ಹರೆಯಕ್ಕೆ ಕಾಲಿಡುತ್ತಿದ್ದೇನೆ. ನನ್ನನ್ನು ಈ ದಾರಿಯಲ್ಲಿ ಕೈ ಹಿಡಿದು ನಡೆಸಿದ ಪ್ರತಿಯೊಬ್ಬರಿಗೂ ನಾನು ಆಭಾರಿಯಾಗಿದ್ದೇನೆ’
ಅದೇನೆ ಇರಲಿ, ಆರ್.ಚಂದ್ರು ದೊಡ್ಡ ಕನಸುಗಾರ. ಎಷ್ಟೇ ಕಷ್ಟವಾದರೂ ತಾನು ಅಂದುಕೊಂಡಂತೆ ಸಿನಿಮಾ ಮಾಡುವ ಅದ್ಭುತ ಫಿಲ್ಮ್ ಮೇಕರ್. ಕನ್ನಡಕ್ಕೆ ಇನ್ನಷ್ಟು ಅದ್ಭುತ ಹಾಗು ಯಶಸ್ಸಿನ ಸಿನಿಮಾಗಳನ್ನು ಕೊಡಲಿ ಎಂಬುದು ಸಿನಿ ಲಹರಿ ಆಶಯ.