ಹಾಸ್ಯ ನಟ ನರಸಿಂಹರಾಜು ಜನ್ಮ ಶತಮಾನೋತ್ಸವ : ವರ್ಷವಿಡೀ ಶತಮಾನಕ್ಕೊಬ್ಬ ಹಾಸ್ಯ ಚಕ್ರವರ್ತಿಯ ಶತಮಾನೋತ್ಸವ ಆಚರಣೆ

ಜುಲೈ 24, ಕರುನಾಡ ಕಂಡ ಹೆಮ್ಮೆಯ ಹಾಸ್ಯನಟ ದಿ.ಟಿ.ಆರ್ ನರಸಿಂಹರಾಜು ಅವರ ಹುಟ್ಟುಹಬ್ಬ. ಈ ಬಾರಿ ವಿಶೇಷವೆಂದರೆ, ಇದು ನರಸಿಂಹರಾಜು ಅವರ ನೂರನೇ ಹುಟ್ಟುಹಬ್ಬ. ಈ ಸಂಭ್ರಮವನ್ನು “ಶತಮಾನಕೊಬ್ಬ ಹಾಸ್ಯಚಕ್ರವರ್ತಿಯ ಶತಮಾನೋತ್ಸವ” ಎಂಬ ಹೆಸರಿನಿಂದ ವಿವಿಧ ಕಾರ್ಯಕ್ರಮಗಳ ಜೊತೆಗೆ ವರ್ಷಪೂರ್ತಿ ಆಚರಿಸಲು ನರಸಿಂಹರಾಜು ಅವರ ಕುಟುಂಬದವರು ಹಾಗೂ ಅಭಿಮಾನಿಗಳು ನಿಶ್ಚಯಿಸಿದ್ದಾರೆ.
ನರಸಿಂಹರಾಜು ಅವರ ಹುಟ್ಟುಹಬ್ಬದಂದೇ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್ ಆರ್ ಕೆ ವಿಶ್ವನಾಥ್ ಹಾಗೂ ಹಿರಿಯನಟ ಬೆಂಗಳೂರು ನಾಗೇಶ್ ಸೇರಿದಂತೆ ವಿವಿಧ ಗಣ್ಯರು ಜನ್ಮ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ, ನರಸಿಂಹರಾಜು ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡರು.


ನರಸಿಂಹರಾಜು ಅವರ ಶತಮಾನೋತ್ಸವ ಸಮಾರಂಭ ಬರೀ ಕುಟುಂಬದವರಲ್ಲ. ಎಲ್ಲರೂ ಸೇರಿ ಮಾಡಬೇಕಾದ ಕಾರ್ಯಕ್ರಮ ಎಂದು ಆಗಮಿಸಿದ್ದ ಎಲ್ಲಾ ಗಣ್ಯರು ತಿಳಿಸಿದರು. ನರಸಿಂಹರಾಜು ಅವರ ಮೊಮ್ಮಕ್ಕಳಾದ ಅರವಿಂದ್ ಹಾಗೂ ಅವಿನಾಶ್ ಸಹ ಉಪಸ್ಥಿತರಿದ್ದರು.

ನರಸಿಂಹರಾಜು ಅವರ ನೂರನೇ ಹುಟ್ಟುಹಬ್ಬವನ್ನು “ಶತಮಾನಕ್ಕೊಬ್ಬ ಹಾಸ್ಯಚಕ್ರವರ್ತಿಯ ಶತಮಾನೋತ್ಸವ” ಎಂಬ ಹೆಸರಿನಿಂದ ವರ್ಷಪೂರ್ತಿ ಆಚರಿಸಲಾಗುವುದು. ನರಸಿಂಹರಾಜು ಅವರ ಹೆಸರಿನಲ್ಲಿ ಮೂರು ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಲಾಗಿದೆ. ದೊಡಮಟ್ಟದ ಸಮಾರಂಭ ಆಯೋಜಿಸಿ ಈ ಪ್ರಶಸ್ತಿಗಳನ್ನು ನೀಡಲಾಗುವುದು.

ಮೊದಲು ನರಸಿಂಹರಾಜು ಅವರನ್ನು ಯುವಜನತೆಗೆ ತಲುಪಿಸುವ ಪ್ರಯತ್ನ. ಹಾಗಾಗಿ ಹನ್ನೆರಡು ಜನರ ತಂಡ ಎರಡು ಟ್ರಕ್ ಗಳ ಮೂಲಕ ಕರ್ನಾಟಕದ ಮೂವತ್ತೆರಡು ಜಿಲ್ಲೆಗಳ ಆಯ್ದ ಕಾಲೇಜುಗಳಿಗೆ ಭೇಟಿ ನೀಡುತ್ತಾರೆ. ಆ ಟ್ರಕ್ ನಲ್ಲಿ ಎಲ್ ಇ ಡಿ ಅಳವಡಿಸಿ, ಆ ಮೂಲಕ ವಿದ್ಯಾರ್ಥಿಗಳಿಗೆ ನರಸಿಂಹರಾಜು ಅವರ ಬಗೆಗಿನ ತುಣುಕುಗಳನ್ನು ತೋರಿಸಲಾಗುತ್ತದೆ. ಆನಂತರ ನರಸಿಂಹರಾಜು ಅವರ ಕುರಿತು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸಹ ಕೇಳಲಾಗುತ್ತದೆ.

ಆನಂತರ ಪ್ಯಾನ್ ಇಂಡಿಯಾ ಕಿರುಚಿತ್ರೋತ್ಸವ(ಹಾಸ್ಯದ ಕುರಿತು) ಆಯೋಜಿಸಲಾಗುವುದು.

. ಕರ್ನಾಟಕದಾದ್ಯಂತ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹಾಸ್ಯನಾಟಕಗಳನ್ನು (ನರಸಿಂಹರಾಜು ಅವರ ಅಭಿನಯದ ನಾಟಕಗಳು ಮಾತ್ರ). ಆಯೋಜಿಸಲಾಗುವುದು.

ಕರ್ನಾಟಕದ ಸುಮಾರು ಎಂಟು ಜಲ್ಲೆಗಳಲ್ಲಿ ಸಕ್ರಿಯವಾಗಿರುವ ನಾಟಕ ಕಂಪನಿಗಳಿದೆ. ಆ ಪ್ರಸಿದ್ದ ನಾಟಕ ಕಂಪನಿಗಳ ಮೂಲಕ ನರಸಿಂಹರಾಜು ಅವರ ಜನಪ್ರಿಯ ನಾಟಕಗಳನ್ನು ಅಹೋರಾತ್ರಿ ಆಯೋಜಿಸುವ ಯೋಜನೆ ಇದೆ. ಆಗಸ್ಟ್ ನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬೃಹತ್ ಸಮಾರಂಭ ನಡೆಸುವ ಸಿದ್ದತೆ ಕೂಡ ನಡೆಯುತ್ತಿದೆ.
ಈ ಎಲ್ಲಾ ಕಾರ್ಯಕ್ರಮಗಳು ಮುಂದಿನ ಆರು ತಿಂಗಳಲ್ಲಿ ಮೊದಲನೇ ಭಾಗಿ ನಡೆಯಲಿದೆ. ಮುಂದಿನ ಆರು ತಿಂಗಳ ಕಾರ್ಯಕ್ರಮಗಳನ್ನು ಮುಂಬರುವ ದಿನಗಳಲ್ಲಿ ತಿಳಿಸುವುದಾಗಿ ನರಸಿಂಹರಾಜು ಅವರ ಮೊಮ್ಮಗ ಅವಿನಾಶ್ ತಿಳಿಸಿದರು.

Related Posts

error: Content is protected !!