ನೂತನ ಪ್ರತಿಭೆ ಶ್ರೇಯಸ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ” ಡೇವಿಡ್ ” ಚಿತ್ರ ಜುಲೈ 21ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತದೆ.
ಬಿ.ವೈ.ವಿಜಯೇಂದ್ರ ಅವರ ಪ್ರೋತ್ಸಾಹದಿಂದ ಧನರಾಜ ಬಾಬು ಜಿ ಅರ್ಪಿಸಿರುವ ಈ ಚಿತ್ರವನ್ನು ಪ್ರಸಾದ್ ರುದ್ರಮುನಿ ನಿರಘಂಟಿ ನಿರ್ಮಿಸಿದ್ದಾರೆ. ಧನರಾಜ ಬಾಬು ಅವರು ಸಾಮಾಜಿಕ ಹಾಗೂ ಧಾರ್ಮಿಕ ಕೆಲಸಗಳಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಕುರುತು ನಾಯಕ ಶ್ರೇಯಸ್ ಚಿಂಗಾ ಅವರು, ಧನರಾಜ ಬಾಬು ಅವರ ಬಳಿ ಹೇಳಿದಾಗ, ಹೊಸತಂಡದ ಹೊಸಪ್ರಯತ್ನಕ್ಕೆ ಧನರಾಜ ಬಾಬು ಅವರು ಪ್ರೋತ್ಸಾಹ ನೀಡಲು ಮುಂದಾದರು.
ಈ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಸಾಕಷ್ಟು ಮಾತನಾಡಿದರು.
“ಡೇವಿಡ್” ಒಂದು ರೊಮ್ಯಾಂಟಿಕ್ ಮಾರ್ಡರ್ ಮಿಸ್ಟರಿ ಎಂದು ಮಾತು ಆರಂಭಿಸಿದ ನಾಯಕ, ನಿರ್ದೇಶಕ ಶ್ರೇಯಸ್ ಚಿಂಗಾ ಇದೊಂದು ಅದ್ಭುತ ಚಿತ್ರ. ಈವರೆಗೂ ನಾವು ನೋಡಿರದ ಬೆಂಗಳೂರನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ.
ಒಟ್ಟಿನಲ್ಲಿ ಹೇಳಬೇಕೆಂದರೆ, ಇದೊಂದು ತಂತ್ರಜ್ಞರ ಸಿನಿಮಾ. ಕಲಾವಿದರ ಅಭಿನಯ ಕೂಡ ಚೆನ್ನಾಗಿದೆ. ನಾನು ಹಾಗೂ ಭಾರ್ಗವ ಸೇರಿ ಈ ಚಿತ್ರವನ್ನು ನಿರ್ದೇಶಿಸಿದ್ದೇವೆ. ಚಿತ್ರ ಜುಲೈ 21 ರಂದು ತೆರೆಗೆ ಬರುತ್ತಿದೆ. ನೋಡಿ ಪ್ರೋತ್ಸಾಹಿಸಿ ಎಂದರು.
ನಾನು ಈ ಹಿಂದೆ “ಭರತ – ಬಾಹುಬಲಿ” ಚಿತ್ರದಲ್ಲಿ ನಟಿಸಿದ್ದೆ. “ಡೇವಿಡ್” ನನ್ನ ಎರಡನೇ ಚಿತ್ರ. ಈ ಹಿಂದೆ ಪ್ರಸಿದ್ದ ಜಾಹೀರಾತುಗಳಲ್ಲೂ ಅಭಿನಯಿಸಿದ್ದೇನೆ. ಈ ಚಿತ್ರದ ಪಾತ್ರ ಚೆನ್ನಾಗಿದೆ ಎಂದು ನಾಯಕಿ ಸಾರಾ ಹರೀಶ್ ತಿಳಿಸಿದರು.
ನಾನು ಈ ಚಿತ್ರದಲ್ಲಿ ಶ್ರೀಮಂತರ ಮನೆಯ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ನಟ ಪ್ರತಾಪ್ ನಾರಾಯಣ್ ಹೇಳಿದರು.
ಕರ್ನಾಟಕದ ಪ್ರಸಿದ್ದ ರಾಪರ್ ಗಳಾದ ಎಂ.ಸಿ.ಬಿಜು, ಸಿದ್ ಈ ಚಿತ್ರದಲ್ಲೂ ರಾಪರ್ ಪಾತ್ರದಲ್ಲೇ ಅಭಿನಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಭಿನಯದ ಬಗ್ಗೆ ಹೇಳಿಕೊಂಡ ರಾಪರ್ ದ್ವಯರು ಸುಂದರವಾದ ರಾಪ್ ಹಾಡೊಂದನ್ನು ಹಾಡಿದರು.
ನಿರ್ಮಾಪಕ ಪ್ರಸಾದ್ ರುದ್ರಮುನಿ ನಿರಘಂಟಿ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದರು. ನಟ ಮೋಹಿತ್ ವಾಸ್ವನಿ ಸೇರಿದಂತೆ ಅನೇಕ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಈ ಚಿತ್ರವನ್ನು ಚಂದನ್ ಫಿಲಂಸ್ ವಿತರಣೆ ಮಾಡುತ್ತಿದೆ. ಮಾರ್ಕೆಟಿಂಗ್ ಹಾಗೂ ಪ್ರಮೋಷನ್ ರೋಶನಿ ರಾಮಪುರಂ ಅವರದು.
ಶ್ರೇಯಸ್ ಚಿಂಗಾ, ರಾಕೇಶ್ ಅಡಿಗ, ಪ್ರತಾಪ್ ನಾರಾಯಣ್, ಸಾರಾ ಹರೀಶ್, ಅವಿನಾಶ್ ಯಳಂದೂರು,ಬುಲೆಟ್ ಪ್ರಕಾಶ್, ಕಾವ್ಯಾ ಶಾ, ನಂದೀಶ್, ಮುಂತಾದವರು ತಾರಾಬಳಗದಲ್ಲಿದ್ದಾರೆ. “ಡೇವಿಡ್” ಬುಲೆಟ್ ಪ್ರಕಾಶ್ ಅವರ ನಟಸಿರುವ ಕೊನೆಯ ಚಿತ್ರ.