ಮಲೆನಾಡ ಹುಡುಗನ ಕಥೆ ದೆವ್ವದ ಜೊತೆ!! ನಮಸ್ತೆ ಗೋಸ್ಟ್ ಸಿನಿಮಾದಲ್ಲಿ ಶಿವಮೊಗ್ಗ ಹರೀಶ್

ಮಲೆನಾಡಿನ ಹೊಸ ಪ್ರತಿಭೆ ಹರೀಶ್ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದಾನೆ. ಕನ್ನಡದಲ್ಲಿ ಈಗಾಗಲೇ ಸಾಕಷ್ಟು ದೆವ್ವದ ಕಥೆಗಳು ಬಂದಿವೆ. ಆ ಸಾಲಿಗೆ ನಮಸ್ತೆ ಗೋಸ್ಟ್ ಸಿನಿಮಾ ಕೂಡ ಸೇರಿದೆ. ಹೆಸರೇ ಹೇಳುವಂತೆ ಇದೊಂದು ಹಾರರ್ ಕಥೆ. ಇಲ್ಕಿ ದೆವ್ವವುಂಟು. ಆ ದೆವ್ವದ ಜೊತೆ ಶಿವಮೊಗ್ಗದ ಪ್ರತಿಭೆ ಹರೀಶ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಜುಲೈ 14ರಂದು ಬಿಡುಗಡೆಯಾಗುತ್ತಿದೆ

ಯುವ ನಟ ಶಿವಮೊಗ್ಗ ಹರೀಶ್‌ ಈಗ ಮತ್ತೊಂದು ಅವತಾರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ರೆಡಿ ಆಗಿದ್ದಾರೆ. ಇಷ್ಟು ದಿನ ರಂಗಭೂಮಿ ಮತ್ತು ಕಿರುತೆರೆ ಎರಡರಲ್ಲೂ ಅಭಿನಯಿಸಿ, ಪ್ರೇಕ್ಷಕರ ಪ್ರೀತಿಗೆ ಪಾತ್ರರಾಗಿದ್ದ ಹರೀಶ್‌, ಈಗ ಮೊಟ್ಟ ಮೊದಲ ಬಾರಿಗೆ ಬೆಳ್ಳಿ ಪರದೆ ಮೇಲೆ ಕಾಣಿಸುತ್ತಿದ್ದಾರೆ. ಅಂದರೆ ಸಿನಿಮಾ ನಟನಾಗಿ ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿರುವ ʼನಮಸ್ತೆ ಗೋಸ್ಟ್‌ʼ ಹೆಸರಿನ ಚಿತ್ರ ಜುಲೈ 14 ರಂದು ರಾಜ್ಯಾಧ್ಯಂತ ತೆರೆ ಕಾಣುತ್ತಿದೆ. ಈ ಚಿತ್ರ ಅಂದು ಶಿವಮೊಗ್ಗದ ಸಿಟಿ ಸೆಂಟರ್‌ ನಲ್ಲಿರುವ ಭಾರತ್‌ ಸಿನಿಮಾಸ್‌ ನಲ್ಲಿ ಬಿಡುಗಡೆ ಆಗುತ್ತಿದೆ ಎಂಬುದು ವಿಶೇಷ.

ಮೂಲತಃ ಶಿವಮೊಗ್ಗದವರೇ ಆದ ಶಿವಮೊಗ್ಗ ಹರೀಶ್‌ , ಈಗಾಗಲೇ ರಂಗಭೂಮಿ ಮೂಲಕ ಒಂದಷ್ಟು ಹೆಸರು ಮಾಡಿದವರು. ಅದೇ ಅನುಭವದೊಂದಿಗೆ ಈಗ ಕಿರುತೆರೆಯಲ್ಲೂ ಸಾಕಷ್ಟು ಅವಕಾಶ ಗಿಟ್ಟಿಸಿಕೊಂಡು , ಪ್ರೇಕ್ಷಕರ ಮನ ಗೆದ್ದಿದ್ದಾರೆ. ಅಲ್ಲಿಂದಲೇ ಈಗ ಬಡ್ತಿ ಪಡೆದು ಹಿರಿ ತೆರೆಯಲ್ಲೂ ತಮ್ಮ ನಟನಾ ಪ್ರತಿಭೆ ಯನ್ನು ಅಗ್ನಿ ಪರೀಕ್ಷಗೆ ಒಡ್ಡುತ್ತಿದ್ದಾರೆ.

ನಾಟಕ, ಸೀರಿಯಲ್‌ ನಲ್ಲಿ ತಮ್ಮ ನಟನೆಯನ್ನು ನೋಡಿ ಮೆಚ್ಚಿಕೊಂಡ ಪ್ರೇಕ್ಷಕರು, ಸಿನಿಮಾದಲ್ಲಿನ ಅಭಿನಯಕ್ಕೂ ಮೆಚ್ಚುಗೆ ಹೇಳಬಹುದು ಎನ್ನುವ ನಿರೀಕ್ಷೆ ಅವರದು. ಅದರಲ್ಲೂ ತಾವು ಅಭಿನಯಿಸಿದ ಮೊದಲ ಸಿನಿಮಾ ಸಿಟಿ ಸೆಂಟರ್‌ ನ ಭಾರತ್‌ ಸಿನಿಮಾಸ್‌ ನಲ್ಲಿ ತೆರೆ ಕಾಣುತ್ತಿರುವುದಕ್ಕೆ ಶಿವಮೊಗ್ಗ ಹರೀಶ್‌ ಫುಲ್‌ ಎಕ್ಸೈಟ್‌ ಆಗಿದ್ದಾರೆ.

ʼ ಕಳೆದ ಒಂದು ವಾರದಿಂದ ನಿದ್ದೆ ಇಲ್ಲದೆ ಪ್ರಚಾರದಲ್ಲಿ ತೊಡಗಿದ್ದೇನೆ. ನನಗಿದು ಎರಡನೇ ಸಿನಿಮಾ. ಆದ್ರೆ ಫಸ್ಟ್‌ ಟೈಮ್‌ ಒಂದು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುವ ಅವಕಾಶ ಈ ಸಿನಿಮಾದ ಮೂಲಕ ಸಿಕ್ಕಿದೆ. ಕಲಾವಿದರು ಅಂತೆನಿಸಿಕೊಂಡ ಪ್ರತಿಯೊಬ್ಬರಿಗೂ ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಬೇಕು, ಪ್ರೇಕ್ಷಕರಿಂದ ಒಂದಷ್ಟು ಒಳ್ಳೆಯ ಮಾತುಗಳನ್ನು ಕೇಳಬೇಕೆನ್ನುವ ತುಡಿತ ಇದ್ದೇ ಇರುತ್ತದೆ.

ಅಂತಹ ತುಡಿತ ನನ್ನಲ್ಲೂ ಇದೆ. ಅದೇ ಕಾರಣದಿಂದ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಲಿ ಎನ್ನುವ ತವಕದಲ್ಲಿದ್ದೇನೆ. ನನ್ನಿಂದ ಆದಷ್ಟು ಪ್ರಚಾರ ನಡೆಸಿದ್ದೇನೆ. ಗೆಳೆಯರು, ಹಿತೈಷಿಗಳು, ಪರಿಚಯಸ್ಥರಿಗೆಲ್ಲ ನಾನೇ ಭೇಟಿ ಮಾಡಿ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ಕೇಳುತ್ತಿದ್ದೇನೆ. ಅಂದ್ರೆ ಹೊಸಬರನ್ನು ಪ್ರೋತ್ಸಾಹಿಸಿ ಎನ್ನುವುದಷ್ಟೇ ಇಲ್ಲಿ ನನ್ನ ವಿನಂತಿʼ ಎನ್ನುವ ಮೂಲಕ ತಮ್ಮ ಸಿನಿಮಾದ ಬಿಡುಗಡೆಯ ತವಕ, ತುಡಿತವನ್ನು ಬಿಚ್ಚಿಡುತ್ತಾರೆ ಯುವ ನಟ ಶಿವಮೊಗ್ಗ ಹರೀಶ್.‌

ಈ ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದೊಂದು ಹಾರರ್‌ ಕಥಾ ಹಂದರದ ಚಿತ್ರ. ಸಸ್ಪೆನ್ಸ್‌, ಹಾರರ್‌ ಜತೆಗೆ ಒಂದಷ್ಟು ನೈಜ ಘಟನೆಯ ಅಂಶಗಳು ಈ ಚಿತ್ರದಲ್ಲಿ ಇವೆಯಂತೆ. ಚಿತ್ರದ ಕಥಾ ಹಂದರ ಬಗ್ಗೆ ಸಣ್ಣ ಸುಳಿವು ನೀಡುವ ಶಿವಮೊಗ್ಗ ಹರೀಶ್‌, ಏನೋ ಅತ್ಯದ್ಬುತ ಕಥೆ ಅಂತ ಹೇಳಲಾರೆ, ಆದರೂ ಪ್ರೇಕ್ಷಕರನ್ನು ಹಿಡಿದಿಡಬಲ್ಲ ಒಂದಷ್ಟು ಅಂಶಗಳು ಚಿತ್ರದಲ್ಲಿವೆ. ಚಿತ್ರದ ಕಥಾ ನಾಯಕನಿಗೆ ಪ್ರತಿ ನಿತ್ಯವೂ ಒಂದು ಕನಸು ಬಿಳುತ್ತೆ. ಆ ಕನಸಿನಲ್ಲಿ ದ್ವೆವ ಬರುತ್ತದೆ. ಅದು ಯಾಕಾಗಿ ಹಾಗೆಲ್ಲ ಆಗುತ್ತೆ, ಕೊನೆಗೆ ಅದು ಹೇಗೆ ಪರಿಹಾರ ಕಾಣುತ್ತೆ ಎನ್ನುವುದು ಚಿತ್ರದ ಒನ್‌ ಲೈನ್‌ ಸ್ಟೋರಿ. ಈ ಕತೆಯಲ್ಲಿ ನಾಲ್ಕು ಪಾತ್ರಗಳಿವೆ. ಆ ಪಾತ್ರಗಳಲ್ಲಿ ಹೀರೋ ಗೆಳೆಯನಾಗಿ ನಾನುಕಾಣಿಸಿಕೊಂಡಿದ್ದೇನೆ. ಕಥೆ ಶುರುವಾಗೋದೆ ನನ್ನ ಪಾತ್ರ ಮೂಲಕ. ಕೊನೆಗೆ ಕಥೆ ಮುಗಿಯುವುದು ಕೂಡ ನನ್ನದೇ ಪಾತ್ರದ ಮೂಲಕ . ಹಾಗಾಗಿ ಚಿತ್ರದಲ್ಲಿ ನನ್ನ ಪಾತ್ರಕ್ಕೂ ಪ್ರಮುಖ ಸ್ಥಾನ ಇದೆ ಎನ್ನುತ್ತಾರೆ ಶಿವಮೊಗ್ಗ ಹರೀಶ್.‌

ರಂಗಭೂಮಿ, ಆನಂತರ ಕಿರುತೆರೆ, ಈಗ ಸಿನಿಮಾ ನಟನಾಗಿಯೂ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ಶಿವಮೊಗ್ಗ ಹರೀಶ್‌, ಸಿನಿಮಾದ ಅನುಭವವೇ ತುಂಬಾನೆ ಭಿನ್ನ ಎನ್ನುವ ಅನಿಸಿಕೆ ಹಂಚಿಕೊಳ್ಳುತ್ತಾರೆ. ʼ ನಾನು ಸೀರಿಯಲ್‌ ಗೆ ಹೋಗಬೇಕು ಅಂತ ಇಲ್ಲಿಂದ ಹೋದಾಗ ನಾಟಕದಂತೆ ಅಲ್ಲ ಸಿರೀಯಲ್‌ ಅಂತಿದ್ರು. ಅಲ್ಲಿ ಕೆಲಸ ಮಾಡಿ ಸಿನಿಮಾಕ್ಕೆ ಬಂದಾಗ, ಸೀರಿಯಲ್‌ ಇದ್ದಂತೆ ಅಲ್ಲ ಅಂತಿದ್ರು. ಹಾಗೆಲ್ಲ ನಾಟಕ, ಸೀರಿಯಲ್‌ ಹಾಗೂ ಸಿನಿಮಾದ ನಡುವೆ ಸಾಕಷ್ಟು ವ್ಯತ್ಯಾಸಗಳಿರುವ ಅನುಭವ ನನಗಾಗಿದೆ. ನಟನೆ ಒಂದು ಬಗೆಯದ್ದಾದರೂ, ಅಲ್ಲಿ ಇಷ್ಟು, ಇಲ್ಲಿ ಇಂತಿಷ್ಟು ಎನ್ನುವ ಗೆರೆಗಳು ಇದ್ದಿದ್ದು ನಾನು ಕಂಡೆ. ಆ ಇತಿ ಮಿತಿಗಳ ನಡುವೆಯೇ ಕಲಾವಿದನಾಗಿ ನಿಮ್ಮ ಮುಂದೆ ಕಾಣಿಸಿಕೊಂಡಿರುವ ನಾನು ಈ ಗ ಸಿನಿಮಾ ನಟನಾಗಿ ನಿಮ್ಮ ಮುಂದೆ ಬರುತ್ತಿದ್ದೇನೆ. ನೋಡಿ, ಪ್ರೋತ್ಸಾಹಿಸಿ, ಹಾರೈಸಿ ʼ ಎನ್ನುವ ಮಾತು ಹರೀಶ್‌ ಅವರದ್ದು.

ಚಿರಾಯು ಕ್ರಿಯೇಟಿವ್‌ ಸಿನಿಮಾಸ್‌ ಬ್ಯಾನರ್‌ ನಲ್ಲಿ ರಮೇಶ್‌ ಕುಮಾರ್‌ ನಿರ್ಮಾಣದ ಈ ಚಿತ್ರಕ್ಕೆ ಭರತ್‌ ನಂದ ಆಕ್ಷನ್‌ ಕಟ್‌ ಹೇಳಿದ್ದಾರೆ. ನಿರ್ದೇಶನದ ಜತೆಗೆ ಭರತ್‌ ನಂದ ಅವರು ಚಿತ್ರದ ನಾಯಕರಾಗಿಯೂ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ವಿದ್ಯಾರಾಜ್‌ ಅಭಿನಯಿಸಿದ್ದಾರೆ. ಉಳಿದಂತೆ ಚಿತ್ರದ ತಾರಾಗಣದಲ್ಲಿ ಬಾಲರಾಜ್‌ ವಾಡಿ, ಶಿವಮೊಗ್ಗ ಹರೀಶ್‌, ಶಿವಕುಮಾರ್‌ ಆರಾಧ್ಯ, ಅಖಿಲೇಶ್‌ ಮತ್ತಿತರರು ಇದ್ದಾರೆ. ವಿಶೇಷ ಅಂದ್ರೆ ಶಿವಮೊಗ್ಗದವರೇ ಆದ ಮಧುಸೂಧನ್‌ ಈಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಹಾಗೆಯೇ ರೂಪಾ ಹರೀಶ್‌ ಪ್ರಸಾದನವಿದೆ. ಉಳಿದಂತೆ ಶೇ. 80 ರಷ್ಟು ಚಿತ್ರದ ಸಿಬ್ಬಂದಿ ಶಿವಮೊಗ್ಗದವರೇ ಎನ್ನುವುದು ವಿಶೇಷ.

Related Posts

error: Content is protected !!