ಶ್ರೀ ಫ್ರೆಂಡ್ಸ್ ಮೂವೀ ಮೇಕರ್ ಲಾಂಛನದಲ್ಲಿ ಎಂ.ಎನ್ ಭೈರೇಗೌಡ, ಧನಂಜಯ್, ಯುವರಾಜು, ಸು.ಕಾ.ರಾಮು ಮತ್ತು ವೆಂಕಟೇಶ್ ಅವರು ನಿರ್ಮಿಸಿರುವ, ಉಮೇಶ್ ಗೌಡ ನಿರ್ದೇಶನದ, ವಿಜಯ ರಾಘವೇಂದ್ರ, ಧರ್ಮ ಕೀರ್ತಿರಾಜ್, ಸಂಚಿತಾ ಪಡುಕೋಣೆ ಪ್ರಮುಖಪಾತ್ರದಲ್ಲಿ ನಟಿಸಿರುವ “ಓ ಮನಸೇ” ಚಿತ್ರ ಇದೇ ಜುಲೈ 14 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಕುರಿತು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನಾವು ಐದು ಜನ ಸ್ನೇಹಿತರು ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದೇವೆ. ನಿರ್ದೇಶಕ ಉಮೇಶ್ ಗೌಡ ಅವರು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ನಟಿಸಿರುವ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಚೆನ್ನಾಗಿದೆ. ಚಿತ್ರ ಪ್ರೇಕ್ಷಕರ ಮನ ಗೆಲ್ಲುವ ಭರವಸೆ ಇದೆ ಎಂದು ನಿರ್ಮಾಪಕರಲ್ಲೊಬ್ಬರಾದ ಯುವರಾಜ್ ತಿಳಿಸಿದರು.
ನನಗೆ ನಿರ್ದೇಶಕ ಉಮೇಶ್ ಗೌಡ ಹಾಗೂ ಸಂಭಾಷಣೆ ಬರೆದಿರುವ ಸಾಯಿಕೃಷ್ಣ ಅವರು ಬಂದು ಕಥೆ ಹೇಳಿದರು ಎಂದು ಮಾತು ಪ್ರಾರಂಭಿಸಿದ ವಿಜಯ ರಾಘವೇಂದ್ರ, ನಾನು ಚಿತ್ರ ಒಪ್ಪಿಕೊಳ್ಳಲು ಮುಖ್ಯಕಾರಣ ಇದು ಶಿಕ್ಷಣಕ್ಕೆ ಮಹತ್ವ ಕೊಡುವ ಕಥಾಹಂದರ ಹೊಂದಿದೆ. ಲವ್, ಸಸ್ಪೆನ್ಸ್ ಕೂಡ ಇದೆ. ನಾನು ಪೊಲೀಸ್ ಅಧಿಕಾರಿಪಾತ್ರದಲ್ಲಿ ಅಭಿನಯಿಸಿದ್ದೇನೆ. ಈ ಚಿತ್ರವನ್ನು ಎಲ್ಲರೂ ನೋಡಿ. ಪ್ರೋತ್ಸಾಹ ನೀಡಿ ಎಂದರು.
ನಾನು ವಿಜಯ್ ರಾಘವೇಂದ್ರ ಅವರ ಜೊತೆ ಅಭಿನಯಿಸುತ್ತಿರುವ ಮೊದಲ ಸಿನಿಮಾವಿದು ಎಂದು ತಿಳಿಸಿದ ಧರ್ಮ ಕೀರ್ತಿರಾಜ್, ಈ ಚಿತ್ರದ ನಿರ್ಮಾಪಕರು ಯಾವುದೇ ಕೊರತೆಯಿಲ್ಲದೆ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ನಾವು ದುಡುಕಿ ತೆಗೆದುಕೊಳ್ಳುವ ನಿರ್ಧಾರಗಳಿಂದ ಎನ್ನೆಲಾ ಅನುಭವಿಸಬೇಕಾಗುತ್ತದೆ ಎಂಬುದು ಈ ಚಿತ್ರದ ಕಥೆಯ ಒಂದೆಳೆ ಎಂದರು.
ಚಿತ್ರದ ಮಾರ್ಗದರ್ಶಕರಾದ ಹಿರಿಯ ನಿರ್ಮಾಪಕ ಅಣಜಿ ನಾಗರಾಜ್, ನಾಯಕಿ ಸಂಚಿತಾ ಪಡುಕೋಣೆ, ವಿತರಕ ರಮೇಶ್ ಗೌಡ ಹಾಗೂ ಸಂಭಾಷಣೆ ಬರೆದಿರುವ ಸಾಯಿಕೃಷ್ಣ “ಓ ಮನಸೇ” ಬಗ್ಗೆ ಮಾತನಾಡಿದರು.
ರಮೇಶ್ ಅದರಂಗಿ ಕಥೆ ಬರೆದಿರುವ ಈ ಚಿತ್ರಕ್ಕೆ ಎಂ.ಆರ್.ಸೀನು ಛಾಯಾಗ್ರಹಣ, ಶ್ರೀನಿವಾಸ್ ಪಿ ಬಾಬು ಸಂಕಲನ ಹಾಗೂ ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ, ಬಂಡೆ ಚಂದ್ರು ಅವರ ಸಾಹಸ ನಿರ್ದೇಶನವಿದೆ.
ವಿಜಯ ರಾಘವೇಂದ್ರ, ಧರ್ಮ ಕೀರ್ತಿರಾಜ್, ಸಂಚಿತಾ ಪಡುಕೋಣೆ, ಹರೀಶ್ ರಾಯ್, ಸಾಧುಕೋಕಿಲ, ಶೋಭ್ ರಾಜ್, ಕಿಲ್ಲರ್ ವೆಂಕಟೇಶ್, ವಾಣಿಶ್ರೀ, ಜಯರಾಮ್, ರುಶಿಕಾ(ಟಗರು ಸರೋಜ) ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.