ಶಾರುಖ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರವಾದ ‘ಜವಾನ್’ನ ಪ್ರಿವ್ಯೂ ಇಂದು ಬಿಡುಗಡೆಯಾಗಿದ್ದು, ಅಂತರ್ಜಾಲದಲ್ಲಿ ಸಖತ್ ವೈರಲ್ ಆಗಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಸಮಾಜದಲ್ಲಾಗುತ್ತಿರುವ ತಪ್ಪುಗಳನ್ನು ತಿದ್ದುವ ಒಬ್ಬ ಜವಾಬ್ದಾರಿಯುತ ಮತ್ತು ಪ್ರಾಮಾಣಿಕ ವ್ಯಕ್ತಿಯ ಕಥೆ.
‘ಜವಾನ್’ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಆರಂಭದಿಂದಲೂ ಬಹಳ ಕುತೂಹಲವಿತ್ತು. ಇಂದು ಬಿಡುಗಡೆಯಾದ ಟೀಸರ್, ಆ ನಿರೀಕ್ಷೆ ಮತ್ತು ಕುತೂಹಲಗಳನ್ನು ಇನ್ನೊಂದು ಹಂತಕ್ಕೆ ತಲುಪಿಸಿದೆ. ದೊಡ್ಡ ಬಜೆಟ್ ನಲ್ಲಿ ಅದ್ದೂರಿಯಾಗಿ ಮೂಡಿ ಬಂದಿರುವ ಈ ಚಿತ್ರ ಆಕ್ಷನ್ ಮತ್ತು
ಎಮೋಷನ್ ಗಳನ್ನು ಹದವಾಗಿ ಹಿಡಿದಿಟ್ಟಿದೆ. ಚಿತ್ರದ ಕೆಲವು ಅದ್ಭುತ ಕ್ಷಣಗಳನ್ನು ಹಿಡಿದಿಡುವುದರ ಜೊತೆಗೆ, ‘ಜವಾನ್ ಪ್ರಪಂಚವನ್ನು ಪ್ರೇಕ್ಷಕರಿಗೆ ಪರಿಚಯಿಸಿದೆ.
‘ಕಿಂಗ್ ಖಾನ್’ ಅವರ ಧ್ವನಿಯಲ್ಲಿ ಪ್ರಾರಂಭವಾಗುವ ಈ ಪ್ರಿವ್ಯೂ, ನಂತರ ಚಿತ್ರ ಏನಿರಬಹುದು ಎಂದು ಪರಿಚಯಿಸಿಕೊಡುತ್ತದೆ. ಈ ಪ್ರಿವ್ಯೂನ ಒಂದು ವಿಶೇಷತೆಯೆಂದರೆ, ಇದುವರೆಗೂ ನೀವು ನೋಡದೆ ಇರುವ ಶಾರುಖ್ ಅವರನ್ನು ಇಲ್ಲಿ ಹಲವು ಅವತಾರಗಳಲ್ಲಿ ನೋಡಬಹುದು.
ಶಾರುಖ್ ಖಾನ್ ಅಲ್ಲದೆ, ಚಿತ್ರದಲ್ಲಿ ನಟಿಸಿರುವ ಹಲವು ಪ್ರತಿಭಾವಂತರ ತುಣುಕುಗಳು ಸಹ ಈ ಪ್ರಿವ್ಯೂನಲ್ಲಿ ಪರಿಚಯಿಸಲಾಗಿದೆ. ರೋಮಾಂಚನಗೊಳಿಸುವ ಆಕ್ಷನ್ ದೃಶ್ಯಗಳು, ಅದ್ದೂರಿ ಹಾಡುಗಳು, ‘ಬೇಕರಾರ್ ಕರಕೇ ಹಮೇ’ ಹಾಡಿಗೆ ಶಾರುಖ್ ಖಾನ್ ಅಭಿನಯ … ಇವೆಲ್ಲವೂ ಈ ಪ್ರಿವ್ಯೂ ಚಿತ್ರದ ಹೈಲೈಟ್ ಗಳಾಗಿದ್ದು, ಚಿತ್ರ ಬಿಡುಗಡೆಗೆ ಕಾಯುವಂತಾಗಿದೆ.
ದಕ್ಷಿಣ ಭಾರತದ ಜನಪ್ರಿಯ ಮತ್ತು ಯಶಸ್ವಿ ನಿರ್ದೇಶಕರ ಅಟ್ಲಿ ಈ ಚಿತ್ರವನ್ನು ನಿರ್ದೇಶಿಸಿದ್ದು, ಅನಿರುದ್ಧ್ ರವಿಚಂದರ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತವಿದೆ. ಇತ್ತೀಚಿನ ದಿನಗಳಲ್ಲಿ ಬಹುಬೇಡಿಕೆಯ ಸಂಗೀತ ನಿರ್ದೇಶಕರಾಗಿರುವ ಅನಿರುದ್ಧ್ ಅವರ ಹಿನ್ನೆಲೆ ಸಂಗೀತ ಈ ಪ್ರಿವ್ಯೂನ ಇನ್ನೊಂದು ಹೈಲೈಟ್. ಈ ಪ್ರಿವ್ಯೂನಲ್ಲಿ ಗಮನಸೆಳೆಯುವ ಇನ್ನೊಂದು ಅಂಶವೆಂದರೆ ಅದು ಗ್ರ್ಯಾಮಿ ಪ್ರಶಸ್ತಿಗೆ ನಾಮಿನೇಟ್ ಆಗಿರುವ ರಾಜಕುಮಾರಿ ಅವರು ಹಾಡಿರುವ ‘ದಿ ಕಿಂಗ್ ಖಾನ್ ರಾಪ್’ ಎಂಬ ಹಾಡು.
‘ಜವಾನ್’, ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಚಿತ್ರವಾಗಿದ್ದು, ಅತ್ಯಂತ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗಿದೆ. ಈ ಚಿತ್ರದ ಶಾರುಖ್ ಜೊತೆಗೆ ಭಾರತೀಯ ಚಿತ್ರರಂಗದ ಜನಪ್ರಿಯ ಹಾಗೂ ವಿವಿಧ ಭಾಷೆಯ ನಟ-ನಟಿಯರು ಕಾಣಿಸಿಕೊಂಡಿದ್ದಾರೆ. ನಯನತಾರಾ, ವಿಜಯ ಸೇತುಪತಿ, ಸಾನ್ಯಾ ಮಲ್ಹೋತ್ರಾ, ಗಿರಿಜಾ ಓಕ್, ಸಂಗೀತಾ ಭಟ್ಟಾಚಾರ್ಯ, ಲೆಹರ್ ಖಾನ್, ಆಲಿಯಾ ಖುರೇಷಿ, ರಿಧಿ ದೋಗ್ರಾ, ಸುನಿಲ್ ಗ್ರೋವರ್ ಮತ್ತು ಮುಖೇಶ್ ಛಾಬ್ರಿಯಾ ನಟಿಸಿರುವ ಈ ಚಿತ್ರವು ಎಲ್ಲ ಭಾಷೆಗಳ ಜನರಿಗೂ ತಲುಪವಂತೆ ಚಿತ್ರಿಸಲಾಗಿದೆ.
ಇದಕ್ಕೂ ಮುನ್ನ ಪೋಸ್ಟರ್ ಮತ್ತು ಸಣ್ಣ ಟೀಸರ್ ಮೂಲಕ ಜನರ ಗಮನ ಸೆಳೆದ ಟೀಸರ್, ಈಗ ಪ್ರಿವ್ಯೂ ಮೂಲಕ ಪ್ರೇಕ್ಷಕರಲ್ಲಿ ಇನ್ನಷ್ಟು ನಿರೀಕ್ಷೆಗಳನ್ನು ಹೆಚ್ಚಿಸಿದೆ. ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ನಡಿ ಗೌರಿ ಖಾನ್ ನಿರ್ಮಾಣ ಮಾಡಿದರೆ, ಗೌರವ್ ವರ್ಮ ಸಹ-ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಸೆಪ್ಟೆಂಬರ್ 7ರಂದು ಜಗತ್ತಿನಾದ್ಯಂತ ‘ಜವಾನ್’ ಚಿತ್ರವು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.