ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಮೂಲಕ ನಿರ್ಮಾಣವಾಗಿರುವ, ರಾಮ್ ದೀಪ್ ನಿರ್ದೇಶನದ ” ಡೈಮಂಡ್ ಕ್ರಾಸ್” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಹೊಸಪೇಟೆ ಉದ್ಯಮಿ ಮನೀಶ್ ಹಾಗೂ ನಟ ಮಿತ್ರ ಹಾಗೂ ಅವರ ಸ್ನೇಹಿತರ ಮನೀಶ್ & ಮಿತ್ರ ಎಂಟರ್ಟೈನ್ಮೆಂಟ್ ಮೂಲಕ ಈ ಚಿತ್ರ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಹಾಗೂ ಚಿತ್ರದ ಕೆಲವು ತುಣುಕುಗಳನ್ನು ಬಿಡುಗಡೆ ಮಾಡಲಾಗಿದೆ. ಜೇಡ್ರಳಿ ಕೃಷ್ಣಪ್ಪ ಹಾಗೂ ಜೈಕೃಷ್ಣ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಶುಭ ಕೋರಿದ್ದಾರೆ.

ಹೊಸಪೇಟೆ ಉದ್ಯಮಿ ಮನೀಶ್ ನನ್ನ ಮಿತ್ರರು ಎಂದು ಮಾತು ಶುರು ಮಾಡಿದ ನಟ ಮಿತ್ರ, ಮನೀಶ್ ಅವರಿಗೆ ಸಿನಿಮಾ ನಿರ್ಮಾಣ ಮಾಡುವ ಆಸಕ್ತಿಯಿತ್ತು. ಆದರೆ ನಾನು ಮೊದಲು ಸಿನಿಮಾ ನಿರ್ಮಾಣ ಮಾಡಬೇಡಿ. ಸಾಕಷ್ಟು ಒಳ್ಳೆಯ ಚಿತ್ರಗಳು ನಿರ್ಮಾಣವಾಗಿವೆ. ಅಂತಹ ಚಿತ್ರಗಳನ್ನು ವಿತರಣೆ ಮಾಡುವ ಮೂಲಕ ಚಿತ್ರಮಂದಿರಗಳಿಗೆ ತರುವ ಪ್ರಯತ್ನ ಮಾಡಿ. ಆನಂತರ ಸಿನಿಮಾ ಮಾಡಿ ಎಂದು ಸಲಹೆ ನೀಡಿದೆ. ಅದಕ್ಕೆ ಮನೀಶ್ ಒಪ್ಪಿದರು. ನನ್ನ ಕೆಲವು ಸ್ನೇಹಿತರು ಇದಕ್ಕೆ ಜೊತೆಯಾದರು ಈಗ ಮನೀಶ್ & ಮಿತ್ರ ಎಂಟರ್ಟೈನ್ಮೆಂಟ್ ಸಂಸ್ಥೆಯ ಮೂಲಕ ರಾಮ್ ದೀಪ್ ನಿರ್ದೇಶನದ “ಡೈಮಂಡ್ ಕ್ರಾಸ್” ಚಿತ್ರವನ್ನು ಸದ್ಯದಲ್ಲೇ ಬಿಡುಗಡೆ ಮಾಡುತ್ತಿದ್ದೇವೆ ಎಂದರು.

ಮಿತ್ರ ಅವರು ಕೊಟ್ಟ ಸಲಹೆ ಚೆನ್ನಾಗಿದೆ. ರಿವರ್ಸ್ ಪ್ಲೇ ಮೂಲಕ ನಾವು ಕೆಲಸ ಶುರು ಮಾಡಿದ್ದೇವೆ. ಮೊದಲು ಒಳ್ಳೆಯ ಚಿತ್ರಗಳನ್ನು ವಿತರಣೆ ಮಾಡಿ, ಆನಂತರ ನಿರ್ಮಾಣ ಮಾಡುತ್ತೇನೆ. ಈಗ ಮೊದಲ ಹೆಜ್ಜೆಯಾಗಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಚಿತ್ರ ಚೆನ್ನಾಗಿದೆ. ನಿಮ್ಮೆಲ್ಲರ ಸಹಕಾರವಿರಲಿ ಎಂದು ಮನೀಶ್ ತಿಳಿಸಿದರು.

ಇದೊಂದು ಸೈಬರ್ ಕ್ರೈಮ್ ಕಥಾಹಂದರ ಹೊಂದಿರುವ ಚಿತ್ರ ಎಂದು ಚಿತ್ರದ ಕುರಿತು ಮಾತು ಆರಂಭಿಸಿದ ನಿರ್ದೇಶಕ ರಾಮ್ ದೀಪ್, ಚಿತ್ರವನ್ನು ಸದ್ಯದಲ್ಲೇ ತೆರೆಗೆ ತರುವುದಾಗಿ ತಿಳಿಸಿ ತಮ್ಮ ತಂಡದ ಪರಿಚಯ ಮಾಡಿಕೊಟ್ಟರು.
ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ರಾಮಚಂದ್ರ ಬಾಬು, ಮುಖ್ಯಪಾತ್ರಗಳಲ್ಲಿ ನಟಿಸಿರುವ ನಟಿ ರೂಪಿಕಾ, ರಜತ್ ಅಣ್ಣಪ್ಪ, ಮನು ಕೆ.ಎಂ , ಛಾಯಾಗ್ರಹಣ – ಸಂಕಲನ ಮಾಡಿರುವ ಸಂತೋಷ್ ರಾಧಾಕೃಷ್ಣನ್, ಸಂಗೀತ ನಿರ್ದೇಶಕ ಲೇಖನ್ ಹಾಗೂ ಹಿನ್ನೆಲೆ ಸಂಗೀತ ನೀಡಿರುವ ಅನೀಶ್ ಚಿತ್ರದ ಕುರಿತು ಮಾತನಾಡಿದರು.