ಈ ವರ್ಷದ ಅತೀ ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ಸಲಾರ್’. ಪ್ರಭಾಸ್ ನಾಯಕರಾಗಿ ನಟಿಸಿರುವ ಈ ಚಿತ್ರದ ಟೀಸರ್ ಜುಲೈ 6 ರಂದು ಬಿಡುಗಡೆಯಾಗುತ್ತಿದೆ.
ಚಿತ್ರ ಸೆಪ್ಟೆಂಬರ್ 28ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಚಿತ್ರ ಹೇಗೆ ಮೂಡಿಬಂದಿರಬಹುದು ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದು, ಆ ಎಲ್ಲಾ ಕುತೂಹಲಗಳಿಗೆ ಜುಲೈ 6 ರ ಗುರುವಾರ ತೆರೆಬೀಳಲಿದೆ.
ಜುಲೈ 06ರಂದು ಬೆಳಿಗ್ಗೆ 5.12ಕ್ಕೆ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.
ಕಳೆದ ವರ್ಷ ಭಾರತೀಯ ಚಿತ್ರರಂಗಕ್ಕೆ ‘ಕೆಜಿಎಫ್ 2’ ಮತ್ತು ‘ಕಾಂತಾರ’ ಎಂಬ ಎರಡು ಬ್ಲಾಕ್ಬಸ್ಟರ್ ಚಿತ್ರಗಳನ್ನು ನೀಡಿದಂತಹ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್, ‘ಸಲಾರ್’ ಚಿತ್ರವನ್ನು ನಿರ್ಮಿಸುತ್ತಿದೆ.
ಕಳೆದ ಎರಡು ವರ್ಷಗಳಿಂದ ಚಿತ್ರತಂಡದವರು ಚಿತ್ರೀಕರಣ ಮಾಡುತ್ತಿದ್ದರೂ, ಚಿತ್ರದ ಬಗ್ಗೆ ಸಣ್ಣ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಹಾಗಾಗಿ, ಚಿತ್ರದ ಬಗ್ಗೆ ಕುತೂಹಲ ಮತ್ತು ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.
‘ಸಲಾರ್’ ಚಿತ್ರದಲ್ಲಿ ಪ್ರಭಾಸ್ ಅವರಿಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದು, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಪ್ರಮೋದ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಕನ್ನಡದ ಭುವನ್ ಗೌಡ ಅವರ ಛಾಯಾಗ್ರಹಣ ಮತ್ತು ರವಿ ಬಸ್ರೂರು ಅವರ ಸಂಗೀತವಿದೆ.