ನಟಿ ರಾಗಿಣಿ ದ್ವಿವೇದಿ ಪ್ರಮುಖಪಾತ್ರದಲ್ಲಿ ನಟಿಸಿರುವ “ಶೀಲ” ಚಿತ್ರ ಜುಲೈ ತಿಂಗಳ ಕೊನೆಗೆ ತೆರೆ ಕಾಣಲಿದೆ. ಚಿತ್ರ ಕನ್ನಡ ಹಾಗೂ ಮಲೆಯಾಳಂನಲ್ಲಿ ನಿರ್ಮಾಣವಾಗಿದೆ
“ಶೀಲ” ಮಹಿಳಾ ಪ್ರಧಾನ ಚಿತ್ರ ಎಂದು ಮಾತು ಆರಂಭಿಸಿದ ರಾಗಿಣಿ ದ್ವಿವೇದಿ, ಪ್ರಸ್ತುತ ಹೆಣ್ಣು ಮಕ್ಕಳು ದಿನನಿತ್ಯ ಸಮಾಜದಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದೆ. ಹೆಣ್ಣು ಮನಸ್ಸು ಮಾಡಿದರೆ, ತನ್ನಗೆದುರಾಗುವ ಸಮಸ್ಯೆಯನ್ನು ತಾನೇ ಹೇಗೆ ಬಗೆಹರಿಸಿಕೊಳ್ಳಬಹುದು ಎಂಬುದನ್ನು ಕೂಡ ಈ ಚಿತ್ರದಲ್ಲಿ ತೋರಿಸಿದ್ದೇವೆ.
ಹೆಣ್ಣು ಲಕ್ಷ್ಮೀ ಸ್ವರೂಪಳು ಹೌದು. ಕಾಳಿ ಸ್ವರೂಪಳು ಹೌದು. ನಿರ್ದೇಶಕ ಬಾಲು ನಾರಾಯಣನ್ ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ.
ಕೇರಳ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಕನ್ನಡ ಹಾಗೂ ಮಲೆಯಾಳಂ ಎರಡೂ ಭಾಷೆಗಳಲ್ಲೂ ಚಿತ್ರೀಕರಣವಾಗಿದೆ. ಚಿತ್ರ ಮೊದಲು ಕನ್ನಡದಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ನಾನು ಮೂಲತಃ ಉದ್ಯಮಿ. ಕಳೆದ ಮೂವತ್ತೈದು ವರ್ಷಗಳಿಂದ ಬೆಂಗಳೂರಿನಲ್ಲೇ ವಾಸಿಸುತ್ತಿದ್ದೇವೆ. ಇದು ನನ್ನ ನಿರ್ಮಾಣದ ಮೊದಲ ಚಿತ್ರ. ಕಥೆ ಚೆನ್ನಾಗಿದೆ . ಜುಲೈ ತಿಂಗಳ ಕೊನೆಯವಾರದಲ್ಲಿ ಬಿಡುಗಡೆ ಮಾಡುತ್ತೇವೆ. ನೋಡಿ. ಪ್ರೋತ್ಸಾಹಿಸಿ ಎಂದರು ನಿರ್ಮಾಪಕ ಡಿ.ಎಂ.ಪಿಳ್ಳೈ.
ಬಾಲು ನಾರಾಯಣನ್ ನಿರ್ದೇಶಿಸಿರುವ ಈ ಚಿತ್ರದ ತಾರಾಬಳಗದಲ್ಲಿ
ರಾಗಿಣಿ ದ್ವಿವೇದಿ, ಅವಿನಾಶ್, ಶೋಭ್ ರಾಜ್, ಚಿತ್ರಾ ಶೆಣೈ, ಮಹೇಶ್ ನಾಯರ್, ಶ್ರೀಪತಿ, ರಿಯಾಜ್ ಖಾನ್, ಅಬೆ ಡೇವಿಡ್, ಆರತಿ ಗೋಪಾಲ್ ಮುಂತಾದವರಿದ್ದಾರೆ.