ಯುವ ಪ್ರತಿಭೆ ಅಭಿಲಾಷ್ ಹಾಗೂ ಸೋನಲ್ ಮೊಂಥೆರೋ ಜೋಡಿಯಾಗಿ ನಟಿಸಿರುತ್ತಿರುವ ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಮುಗಿಸಿದೆ. ಚಿತ್ರದುರ್ಗ ಸುತ್ತಮುತ್ತ ಕೋಟೆಯಲ್ಲಿ 21 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ. ಹೊಸತಂಡ ಎಂಬುದನ್ನು ಪರಿಗಣಿಸದೇ ನಿರ್ಮಾಪಕರಾದ ವನಿತಾ ಎಚ್.ಎನ್ ಸಾಕಷ್ಟು ಖರ್ಚು ಮಾಡಿದ್ದಾರೆ. ಚಿತ್ರೀಕರಣ ಸರಾಗವಾಗಿ ಸಾಗಲು, ಗ್ರಾಮಸ್ಥರೇ ಕಾರಣ. ಇಡೀ ಊರಿಗೆ ಊರೇ ಚಿತ್ರೀಕರಣಕ್ಕೆ ಸಹಕಾರ ನೀಡಿದೆ. ಬಹಳ ನೈಜ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.
ರಂಗಭೂಮಿ ಹಿನ್ನೆಲೆ ಹೊಂದಿರುವ ನಟ ಅಭಿಲಾಷ್, ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಸಿನಿಮಾ ಮೂಲಕ ಹೀರೋ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ‘ಕೆಜಿಎಫ್’, ‘ಲವ್ ಮಾಕ್ಟೇಲ್’, ‘ಬಡವ ರಾಸ್ಕಲ್’, ‘ಗುರುದೇವ್ ಹೊಯ್ಸಳ’ ಮುಂತಾದ ಸಿನಿಮಾಗಳಲ್ಲಿ ಅಭಿಲಾಶ್ ಗುರುತಿಸಿಕೊಂಡಿದ್ದಾರೆ. ನಾಗರಹಾವು ಸಿನಿಮಾದಲ್ಲಿ ಪಾತ್ರಗಳನ್ನು ಹೋಲುವ ರೀತಿಯ ಹೆಸರುಗಳನ್ನೇ ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಸಿನಿಮಾದಲ್ಲಿಯೂ ಇಡಲಾಗಿದೆ.
ಅಭಿಲಾಷ್ ರಾಮಾಚಾರಿ ಅಲಿಯಾಸ್ ರಾಮು ಎಂಬ ಪಾತ್ರ ಮಾಡಲಿದ್ದಾರೆ. ನಟಿ ಸೋನಲ್ ಮೊಂಥೆರೋ ಮೀರಾ ರಾಘವ್ ರಾಮ್ ಅಲಿಯಾಸ್ ಮ್ಯಾಗಿ ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಯಶ್ ಶೆಟ್ಟಿ ಜಯಂತ್ ಅಲಿಯಾಸ್ ಜಲೀಲಾಗಿ ಕಾಣಿಸಿಕೊಳ್ಳಲಿದ್ದಾರೆ. ಅನುಭವಿ ನಟರಾದ ಜಹಾಂಗೀರ್, ಸುಮನ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ವನಿತಾ ಎಚ್.ಎನ್. ಹಾಗೂ ಹರೀಶ್ ‘ನಿಹಾಂತ್ ಪ್ರೊಡಕ್ಷನ್ಸ್’ ಮೂಲಕ ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಎರಡನೆ ಹಂತದ ಚಿತ್ರೀಕರಣಕ್ಕೆ ತಯಾರಾಗುತ್ತಿದೆ.