ಇವಳು ಕೃಷ್ಣೇಗೌಡರ ಪ್ರೀತಿಯ ಕುಸುಮ! ಜೂನ್ 30ಕ್ಕೆ ನಾನು ಕುಸುಮ ರಿಲೀಸ್…

ನಟ, ನಿರ್ಮಾಪಕ ಕಮ್ ನಿರ್ದೇಶಕ ಕೃಷ್ಣೇಗೌಡ ಅವರು ಕನ್ನಡ ಸಿನಿರಂಗದಲ್ಲಿ ಒಂದಷ್ಟು ಸದ್ದು ಮಾಡಿದವರು. ಕನ್ನಡ ಸಿನಿಮಾರಂಗದ ಒಳಿತಿಗೆ ಹೋರಾಡುತ್ತಲೇ ತಮ್ಮ ನೇರ ಮಾತುಗಳ ಮೂಲಕ ಒಂದಷ್ಟು ಗೆಳೆಯರಿಗೆ ಹತ್ತಿರವಾದವರು.
ಸಿನಿಮಾರಂಗವನ್ನು ಆಳವಾಗಿ ಪ್ರೀತಿಸುವ, ಯೋಚಿಸುವ ಕೃಷ್ಣೇಗೌಡರು ಈಗಾಗಲೇ ಸದಭಿರುಚಿಯ ಮತ್ತು ಸೂಕ್ಷ್ಮತೆಯ ಅಂಶಗಳಿರುವ ಕಥೆ ಆಯ್ಕೆ ಮಾಡಿಕೊಂಡು ಸಿನಿಮಾ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಆ ಸಾಲಿಗೆ ನಾನು ಕುಸುಮ ಸಿನಿಮಾ ಕೂಡ ಸೇರಿದೆ ಎಂಬುದು ವಿಶೇಷ.

ಕನ್ನಡ ಮಾತ್ರವಲ್ಲ, ಸಾಗರದಾಚೆಗೂ ಅವರ ಸಿನೀಮಾಗಳು ಸುದ್ದಿ ಮಾಡಿವೆ. ಹಲವು ರಾಷ್ಟ್ರ ಪ್ರಶಸ್ತಿಗಳನ್ನೂ ಪಡೆದುಕೊಂಡಿವೆ. ಇತ್ತೀಚೆಗೆ ಅವರ ಪಿಂಕಿ ಎಲ್ಲಿ ? ಶಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿ, ನೋಡುಗರ ಗಮನ ಸೆಳೆದಿತ್ತು. ಈಗ ಮತ್ತೊಂದು ಕಾಡುವ ಹೊಸ ಕಥೆಯೊಂದಿಗೆ ಪ್ರೇಕ್ಷಕರ ಎದುರು ಬರಲು ತಯಾರಿ ನಡೆಸುತ್ತಿದ್ದಾರೆ.


ಹೌದು, ಅವರ ನಿರ್ಮಾಣ ನಿರ್ದೇಶನದ ‘ನಾನು ಕುಸುಮ’ ಸಿನಿಮಾ ಜೂನ್ 30 ರಂದು ತೆರೆ ಕಾಣುತ್ತಿದೆ. ಹಿರಿಯ ಲೇಖಕ ಬೆಸಗರಹಳ್ಳಿ ರಾಮಣ್ಣ ಅವರ ಕಥೆ ಆಧರಿಸಿ ತಯಾರಾಗಿರುವ ‘ನಾನು ಕುಸುಮ’ ಚಿತ್ರಕ್ಕೆ ಕೃಷ್ಣೇಗೌಡ ನಿರ್ಮಾಪಕರು. ಅಷ್ಟೇ ಅಲ್ಲ, ನಿರ್ದೇಶಕರೂ ಹೌದು.

ಕುಸುಮಳ ಕಥೆ ಏನು?

ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುವ ಹುಡುಗಿಯೊಬ್ಬಳು ಅಲ್ಲಿ ಏನೆಲ್ಲ ಸಮಸ್ಯೆಗಳಿಗೆ ಸಿಲುಕುತ್ತಾಳೆ, ಯಾವೆಲ್ಲ ಶೋಷಣೆ ಅನುಭವಿಸುತ್ತಾಳೆ ಎನ್ನುವುದರ ಸುತ್ತ ‘ನಾನು ಕುಸುಮ’ ಸಿನಿಮಾದ ಕಥೆ ಸಾಗುತ್ತದೆ. ಭಾವುಕ ಮತ್ತು ಭಾವನಾತ್ಮಕ ಅಂಶಗಳು ಇಲ್ಲಿ ಹೈಲೆಟ್. ಗ್ರೀಷ್ಮಾ ಶ್ರೀಧರ್, ಸನಾತನಿ ಜೋಶಿ, ಕಾವ್ಯಾ ಶ್ರೀಧರ್, ಕೃಷ್ಣೇಗೌಡ, ಸೌಮ್ಯ ಭಾಗವತ್, ಪ್ರತಿಭಾ ಸಂಶಿಮಠ್, ವಿಜಯ್ ಇತರರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇತ್ತೀಚೆಗೆ ನಡೆದ ‘14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ಪ್ರದರ್ಶನಗೊಂಡ ಈ ಸಿನಿಮಾ, ಪ್ರಥಮ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.

‘ನಾನು ಕುಸುಮ’ ಈಗಾಗಲೇ ‘ಇಂಡಿಯನ್ ಪನೋರಮಾ’, ‘ರಾಜಸ್ಥಾನ್ ಫಿಲಂ ಫೆಸ್ಟಿವಲ್’, ‘ತ್ರಿಶೂರ್ ಫಿಲಂ ಫೆಸ್ಟಿವಲ್’ ಸೇರಿದಂತೆ ಹಲವು ಪ್ರತಿಷ್ಠಿತ ಚಲನ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ನಾನು ಕುಸುಮ’ ಸಿನಿಮಾಗೆ ಅರ್ಜುನ್ ರಾಜಾ ಕ್ಯಾಮೆರಾ ಹಿಡಿದಿದ್ದಾರೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಆಸ್ಪತ್ರೆ, ವಾರ್ಡ್, ಗಲ್ಲಿ, ಮನೆ… ಹೀಗೆ ಸಿನಿಮಾದಲ್ಲಿ ಬರುವ ಎಲ್ಲ ಸ್ಥಳಗಳನ್ನು ನೈಜ ಲೊಕೇಶನ್ ಗಳಲ್ಲೇ ಚಿತ್ರೀಕರಿಸಲಾಗಿದೆ.

ಸಿಂಕ್ ಸೌಂಡ್ ನಲ್ಲಿ ಹಿನ್ನೆಲೆ ಧ್ವನಿಗ್ರಹಣ ಮಾಡಿರುವುದು ಸಿನಿಮಾದ ವಿಶೇಷ. ಈಗಾಗಲೇ ಚಿತ್ರೋತ್ಸವಗಳ ಮೂಲಕ ಚಿತ್ರರಂಗದಲ್ಲಿ ಅನೇಕ ಖ್ಯಾತನಾಮರ ಗಮನ ಸೆಳೆದಿರುವ ‘ನಾನು ಕುಸುಮ’ ಜೂನ್ 30 ರಂದು ರಾಜ್ಯಾದ್ಯಂತ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

Related Posts

error: Content is protected !!