ಖ್ಯಾತ ನಟ ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ನಾಯಕರಾಗಿ ನಟಿಸಿ, ನಿರ್ದೇಶಿಸುತ್ತಿರುವ ಚಿತ್ರ “ಜಿಮ್ಮಿ”. ಚಿತ್ರದ ಕ್ಯಾರೆಕ್ಟರ್ ಟೀಸರ್ ಬಿಡುಗಡೆಯಾಗಿದೆ.
ಸುದೀಪ್ ಅವರ ತಂದೆ ಸಂಜೀವ್ ಹಾಗೂ ತಾಯಿ ಸರೋಜ ಸಂಜೀವ್(ಸಂಚಿತ್ ಅಜ್ಜಿ-ತಾತಾ) ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.
ಕ್ರೇಜಿಸ್ಟಾರ್ ರವಿಚಂದ್ರನ್, ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಶಾಸಕ, ಮುನಿರತ್ನ, ಸಂಗೀತ ನಿರ್ದೇಶಕ ಗುರುಕಿರಣ್, ನಿರ್ದೇಶಕರ ಆದ ಆರ್ ಚಂದ್ರು, ಅನೂಪ್ ಭಂಡಾರಿ ಸೇರಿದಂತೆ ಸ್ಯಾಂಡಲ್ ವುಡ್ ನ ಅನೇಕ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಕ್ಯಾರೆಕ್ಟರ್ ಟೀಸರ್ ಗೆ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಸುದೀಪ್ ಪುತ್ರಿ ಸಾನ್ವಿ ಹಾಡಿದ್ದು ವಿಶೇಷ.
ವೆಲ್ಕಮ್ ಟು ಎಸ್ ಗ್ರೂಪ್ ಎಂದು ಮಾತು ಆರಂಭಿಸಿದ ಶಿವರಾಜಕುಮಾರ್, ಎಸ್ ಅಂದರೆ ಸುಪೀರಿಯರ್ ಮತ್ತು ಸೂಪರ್ಬ್ ಅಂತ. ನಿಮ್ಮಲ್ಲಿ ನಿಮ್ಮ ತಾಯಿ ಮುಖ ಇದೆ. ಸಂಜೀವ್ ಅವರ ಗಾಂಭೀರ್ಯ ಮತ್ತು ಸುದೀಪ್ ಅವರ ಧ್ವನಿ ಇದೆ. ತಾಯಿ ಮುಖ ಬಂದರೆ ಲಕ್ ಜಾಸ್ತಿ. ತುಂಬಾ ಚೆನ್ನಾಗಿ ಕಾಣುತ್ತೀರಾ. ಮೇಕಿಂಗ್ ಚೆನ್ನಾಗಿದೆ. ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದೀರಿ ಒಳ್ಳೆಯದಾಗಲಿ ಎಂದು ಶುಭ ಕೋರಿದರು
ಈ ಸಂದರ್ಭದಲ್ಲಿ ಮಾತನಾಡಿದ ಕ್ರೇಜಿಸ್ಟಾರ್ ರವಿಚಂದ್ರನ್, ಸಂಚಿತ್ ನಾಯಕನಾಗಿ ನಟಿಸುತ್ತಿದ್ದಾರೆ ಅಂದುಕೊಂಡಿದ್ದೆ. ನಿರ್ದೇಶನ ಮಾಡುತ್ತಿರುವುದು ಗೊತ್ತಿರಲಿಲ್ಲ. ಇಲ್ಲಿ ಬಂದ ಮೇಲೆ ಗೊತ್ತಾಯಿತು. ಮೊದಲು ಖುಷಿಯಾಗಿದ್ದು ಅವರ (ಸಂಚಿತ್) ಅಜ್ಜಿ ಮುಖದ ಮೇಲಿರುವ ನಗು. ಅವರಿಗಾಗುತ್ತಿರುವ ಸಂತೋಷ ನೋಡಿ ಖುಷಿ ಆಯ್ತು. ಸುದೀಪ್ ಎಲ್ಲದಕ್ಕೂ ಕರೆಯುತ್ತಾರೆ. ಬರುವುದಿಲ್ಲ ಅಂದರೂ ಬಿಡುವುದಿಲ್ಲ. ಅದು ಹೇಗೆ ಬರುವುದಿಲ್ಲ ಎನ್ನುತ್ತಾರೆ? ಆ ರೀತಿ ನನ್ನ ಅವರ ಸಂಬಂಧ. ಸುದೀಪ್ ಅವರ ತಂದೆಯವರದು ನಮ್ಮದು ಕೂಡ ಹಳೆಯ ಸಂಬಂಧ. ಟ್ರೇಲರ್ ನೋಡಿದ ತಕ್ಷಣ ವೈಬ್ರೇಷನ್ ಇದೆ. ನೀವು ತೆರೆಯ ಮೇಲೆ ಚೆನ್ನಾಗಿ ಕಾಣುತ್ತೀರಿ. ಸುದೀಪ್ ನೋಡಿದ ಹಾಗೆ ಅನಿಸುತ್ತದೆ. ವಾಸುಕಿ ವೈಭವ್ ತಮ್ಮ ಜಾನರ್ ಬದಲಾಯಿಸಿದ್ದಾರೆ. ಈ ಬಾರಿ ಬೇರೆ ತರಹ ಸಂಗೀತ ಮಾಡಿದ್ದಾರೆ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.
ನನಗೆ ಶಿವರಾಜಕುಮಾರ್ ಹಾಗೂ ರವಿಚಂದ್ರನ್ ಅವರು ಸ್ಪೂರ್ತಿ. ಅವರಿಂದಲೇ ನಮ್ಮ ಸಂಚಿತ್ ನನ್ನು ಚಿತ್ರರಂಗಕ್ಕೆ ಪರಿಚಯಿಸುವ ಆಸೆಯಿತ್ತು. ಅದು ಇಂದು ಈಡೇರಿದೆ. ಹಾಗಾಗಿ ಅವರಿಬ್ಬರಿಗೂ ವಿಶೇಷ ಧನ್ಯವಾದ. ಅನೇಕ ಹಿರಿಯರು ಕನ್ನಡ ಚಿತ್ರರಂಗದಲ್ಲಿ ಭದ್ರಕೋಟೆ ಕಟ್ಟಿದ್ದಾರೆ. ಅದನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಸಂಚಿತ್ ನಂತಹ ಯುವಕರದು ಎಂದು ಕಿಚ್ಚ ಸುದೀಪ್ ಹೇಳಿದರು.
ರವಿಚಂದ್ರನ್ ಹಾಗೂ ಶಿವರಾಜಕುಮಾರ್ ಅವರಿಗೆ ನನ್ನ ಧನ್ಯವಾದ. ಸುದೀಪ್ ಮಾವ ಹಾಗೂ ಪ್ರಿಯ ಅತ್ತೆ ಅವರ ಪ್ರೋತ್ಸಾಹಕ್ಕೆ ನಾನು ಚಿರ ಋಣಿ. ನಿರ್ಮಾಪಕರಾದ ಜಿ.ಮನೋಹರನ್, ಕೆ.ಪಿ.ಶ್ರೀಕಾಂತ್ ಹಾಗೂ ಪ್ರಿಯಾ ಸುದೀಪ್ ಅವರು ನನ್ನ ಮೇಲೆ ಭರವಸೆಯಿಟ್ಟು ನಿರ್ಮಾಣ ಮಾಡುತ್ತಿದ್ದಾರೆ. ಅವರಿಗೂ ವಿಶೇಷ ಧನ್ಯವಾದ. ಆಗಸ್ಟ್ ನಲ್ಲಿ ಚಿತ್ರೀಕರಣ ಆರಂಭಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಹೆಚ್ಚು ಮಾಹಿತಿ ನೀಡುವುದಾಗಿ ನಾಯಕ ಹಾಗೂ ನಿರ್ದೇಶಕ ಸಂಚಿತ್ ಸಂಜೀವ್ ತಿಳಿಸಿದರು.
ಲಹರಿ ವೇಲು, ಕೆ.ಪಿ.ಶ್ರೀಕಾಂತ್, ಪ್ರಿಯಾ ಸುದೀಪ್, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಚಿತ್ರದ ಕುರಿತು ಮಾತನಾಡಿದರು. ಸಾನ್ವಿ ಸುದೀಪ್ “ಜಿಮ್ಮಿ” ಚಿತ್ರದ ಹಾಡು ಹಾಡಿದರು.