ತಮಿಳಿನ ಸ್ಟಾರ್ ನಟ ವಿಜಯ್ ಹುಟ್ಟು ಹಬ್ಬದ ಸಂಭ್ರಮವನ್ನು ದ್ವಿಗುಣಗೊಳಿಸುವುದಕ್ಕೆ ‘ಲಿಯೋ’ ಚಿತ್ರತಂಡವು “ನಾ ರೆಡಿ” ಎಂಬ ಹಾಡಿನ ಪ್ರೋಮೋ ಜೊತೆಗೆ ಚಿತ್ರದಲ್ಲಿನ ವಿಜಯ್ ಅವರ ಫಸ್ಟ್ ಲುಕ್ ಪೋಸ್ಟರ್ ಸಹ ಬಿಡುಗಡೆ ಮಾಡಿದೆ.
‘ಮಾಸ್ಟರ್’ ನಂತರ ನಿರ್ದೇಶಕ ಲೋಕೇಶ್ ಕನಕರಾಜ್ ಮತ್ತು ವಿಜಯ್, ‘ಲಿಯೋ’ ಎಂಬ ಇನ್ನೊಂದು ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರವು ಕೆಲವ ತಿಂಗಳ ಹಿಂದೆ ಚೆನ್ನೈನಲ್ಲಿ ಶುರುವಾಗಿತ್ತು. ಆದರೆ, ಇದುವರೆಗೂ ಚಿತ್ರತಂಡದವರು ಚಿತ್ರದಲ್ಲಿ ವಿಜಯ್ ಅವರ ಪಾತ್ರವೇನು? ಅಥವಾ ಅವರು ಹೇಗೆ ಕಾಣುತ್ತಾರೆ ಎಂಬ ವಿಷಯವನ್ನು ಬಹಿರಂಗಗೊಳಿಸಿರಲಿಲ್ಲ. ಈಗ ಪೋಸ್ಟರ್ ಮತ್ತು ಪ್ರೋಮೋ ಮೂಲಕ ವಿಜಯ್ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.
‘ನಾ ರೆಡಿದಾ ವರವಾ’ ಎಂಬ ಹಾಡನ್ನು ಸ್ವತಃ ವಿಜಯ್ ಹಾಡಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ವಿಷ್ಣು ಎಡವನ್ ಬರೆದಿರುವ ಈ ಹಾಡಿನ ಪ್ರೋಮೊ ಸೋನಿ ಮ್ಯೂಸಿಕ್ ಸೌಥ್ ಚಾನಲ್ ನಲ್ಲಿ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಪೂರ್ತಿ ಹಾಡು ಕೂಡ ಬಿಡುಗಡೆಯಾಗಲಿದೆ.
ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಬ್ಯಾನರ್ ನಲ್ಲಿ ಲಲಿತ್ ಕುಮಾರ್ ನಿರ್ಮಿಸುತ್ತಿರುವ ‘ಲಿಯೋ’ ಚಿತ್ರವನ್ನು ಲೋಕೇಶ್ ಕನಕರಾಜ್ ನಿರ್ದೇಶಿಸುವುದರ ಜೊತೆಗೆ ಕಥೆ ಮತ್ತು ಚಿತ್ರಕಥೆಯನ್ನು ಸಹ ರಚಿಸಿದ್ದಾರೆ.
ಈ ಚಿತ್ರದಲ್ಲಿ ವಿಜಯ್ ಅವರಿಗೆ ನಾಯಕಿಯಾಗಿ ತ್ರಿಷಾ ಕೃಷ್ಣನ್ ಅಭಿನಯಿಸುತ್ತಿದ್ದು, ಬಾಲಿವುಡ್ ನಟ ಸಂಜಯ್ ದತ್, ಅರ್ಜುನ್ ಸರ್ಜಾ, ಪ್ರಿಯಾ ಆನಂದ್, ಮನ್ಸೂರ್ ಅಲಿ ಖಾನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನ ಮತ್ತು ಮನೋಜ್ ಪರಮಹಂಸ ಅವರ ಛಾಯಾಗ್ರಹಣವಿದೆ.
‘ಲಿಯೋ’ ಚಿತ್ರವು ಅಕ್ಟೋಬರ್ 19ರಂದು ಐದು ಭಾಷೆಗಳಲ್ಲಿ ಏಕಕಾಲಕ್ಕೆ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುತ್ತಿದೆ.