ಪ್ರಸಿದ್ದ ದೇಸಿ ಕಲೆ ವೀರಗಾಸೆ ಮತ್ತು ತಂದೆ-ಮಗನ ನಡುವಿನ ಭಾಂದವ್ಯದ ಬಗ್ಗೆಗಿನ ಕಥಾಹಂದರ ಹೊಂದಿರುವ ಚಿತ್ರ ‘ಪರಂವಃ’. ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಹಾಡು ಹಾಗೂ ಟ್ರೇಲರ್ ಮೂಲಕ ಜನರ ಮನ ಗೆದ್ದಿದೆ.
ಇತ್ತೀಚೆಗೆ “ಪರಂವಃ” ಚಿತ್ರಕ್ಕಾಗಿ ನಾಗೇಶ್ ಕುಂದಾಪುರ ಬರೆದಿರುವ “ನೂರಾರೂ ರಂಗಿರೊ” ಎಂಬ ಹಾಡನ್ನು ಜನಪ್ರಿಯ ನಟ ಲವ್ಲೀ ಸ್ಟಾರ್ ಪ್ರೇಮ್ ಬಿಡುಗಡೆ ಮಾಡಿದರು. ನಿರ್ದೇಶಕ ಜಡೇಶ್ ಕುಮಾರ್ ಸಹ ಅತಿಥಿಗಳಾಗಿ ಆಗಮಿಸಿದ್ದರು.
ಈ ಸಿನಿಮಾ ತಂಡದ ಬಗ್ಗೆ ತಿಳಿದು ಖುಷಿಯಾಯಿತು. ಸುಮಾರು 200 ಜನ ಬಂಡವಾಳ ಹಾಕಿ ನಿರ್ಮಾಣ ಮಾಡಿರುವ ಸಿನಿಮಾವಿದು. ಇದು ನಿಜಕ್ಕೂ ಖುಷಿಯ ವಿಚಾರ. ನನಗೆ ಸಿನಿಮಾ ಬಗ್ಗೆ ಆಸಕ್ತಿಯಿರುವ ಪ್ರೇಕ್ಷಕರೆ ನಿರ್ಮಾಣ ಮಾಡಿದ್ದಾರೆ ಅನಿಸುತ್ತದೆ. ಈಗ ಹೊಸತಂಡದ ಹೊಸಪ್ರಯತ್ನವನ್ನು ಜನ ಮೆಚ್ಚಿಕೊಳ್ಳುತ್ತಿದ್ದಾರೆ. ಆ ಸಾಲಿಗೆ “ಪರಂವಃ” ಚಿತ್ರ ಸಹ ಸೇರಲಿ ಎಂದು ನಟ ಪ್ರೇಮ್ ಹಾರೈಸಿದರು.
ಪ್ರೇಮ್ ಸಿಡ್ಗಲ್ ನಾಯಕನಾಗಿ ಮತ್ತು ಮೈತ್ರಿ ಜೆ. ಕಶ್ಯಪ್ ನಾಯಕಿಯಾಗಿ ಅಭಿನಯಿಸಿದ್ದಾರೆ. ‘ ಗಣೇಶ್ ಹೆಗ್ಗೋಡು, ನಾಜರ್, ಶ್ರುತಿ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಂತೋಷ್ ಕೈದಾಳ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
‘ಶಿವನ ಢಮರುಗದಿಂದ ಹೊಮ್ಮುವ ನಾದಕ್ಕೆ ‘ಪರಂವಃ’ ಎನ್ನುತ್ತಾರೆ. ನಮ್ಮ ಸಿನಿಮಾದ ಕಥೆಗೆ ಈ ಪದ ಸೂಕ್ತವೆಂಬ ಕಾರಣಕ್ಕೆ ಇದೇ ಹೆಸರಿಟ್ಟಿದ್ದೇವೆ. ಸಿನಿಮಾದಲ್ಲಿ ವೀರಗಾಸೆ ಕಲೆಯ ಬಗ್ಗೆ ಮತ್ತು ತಂದೆ-ಮಗನ ಸಂಬಂಧದ ಬಗ್ಗೆ ಪ್ರಧಾನವಾಗಿ ಹೇಳಲಾಗಿದೆ. ಅಷ್ಟೇ ಅಲ್ಲದೆ, ಪ್ರೀತಿ, ಸ್ನೇಹ, ಸೆಂಟಿಮೆಂಟ್, ಥ್ರಿಲ್ಲರ್, ಆ್ಯಕ್ಷನ್ ಹೀಗೆ ಎಲ್ಲ ಥರದ ವಿಷಯಗಳು “ಪರಂವಃ” ಚಿತ್ರದಲ್ಲಿದೆ.
ಪೀಪಲ್ಸ್ ವಲ್ಡ್ ಫಿಲಂಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ನಟ ಪ್ರೇಮ್, ನಿರ್ದೇಶಕ ಗುರು ದೇಶಪಾಂಡೆ ಅವರು ಸೇರಿದಂತೆ ಸ್ಯಾಂಡಲ್ ವಡ್ ನ ಗಣ್ಯರು ಹಾಗೂ ದಕ್ಷಿಣ ಭಾರತದ ಅನೇಕ ಸೆಲೆಬ್ರಿಟಿಗಳು ನಮ್ಮ ಚಿತ್ರಕ್ಕೆ ನೀಡುತ್ತಿರುವ ಪ್ರೋತ್ಸಾಹಕ್ಕೆ ಮನತುಂಬಿ ಬಂದಿದೆ. ಸದ್ಯದಲ್ಲೇ ನಮ್ಮ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ.ಎಂದರು ನಿರ್ದೇಶಕ ಸಂತೋಷ್ ಕೈದಾಳ.
ಚಿತ್ರದ ನಾಯಕ ಪ್ರೇಮ್ ಸಿಡ್ಗಲ್, ನಾಯಕಿ ಮೈತ್ರಿ ಸೇರಿದಂತೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಪತ್ರಿಕಾಗೋಷ್ಠಿಯಲ್ಲಿ ‘ಪರಂವಃ’ ಸಿನಿಮಾ ಕುರಿತು ಮಾತನಾಡಿದರು.