ಚಿತ್ರ ವಿಮರ್ಶೆ
ವಿಜಯ್ ಭರಮಸಾಗರ
ಚಿತ್ರ : ಪಿಂಕಿ ಎಲ್ಲಿ ?
ನಿರ್ಮಾಪಕ : ಕೃಷ್ಣೇಗೌಡ
ನಿರ್ದೇಶಕ : ಪೃಥ್ವಿ ಕೋಣನೂರು
ತಾರಾಗಣ : ಅಕ್ಷತಾ ಪಾಂಡವಪುರ, ದೀಪಕ್ ಸುಬ್ರಹ್ಮಣ್ಯ, ಪೃಥ್ವಿ ಕೋಣನೂರು ಇತರರು.
ಸಣ್ಣಮ್ಮ ಮನೇಲಿ ಇಲ್ಲ… ಆದರೆ, ಇಲ್ಲಿ ಬುರ್ಕಾ ಬಿದ್ದಿದೆ! ಪಿಂಕಿ ಎಲ್ಲಿ?
ಹೀಗೆ ಆತಂಕದಲ್ಲೇ ತನ್ನ ಹೆತ್ತ ಮಗು ಕಾಣದ್ದನ್ನುಬಕಂಡು ಗದ್ಗದಿತರಾಗುವ ತಾಯಿ ಹೃದಯ ಚಡಪಡಿಸೋ ಹೊತ್ತಿಗೆ, ಅಲ್ಲೊಂದು ಘಟನೆ ನಡೆದು ಹೋಗಿರುತ್ತೆ.
ಹೌದು, ವಾಸ್ತವಕ್ಕೆ ಹತ್ತಿರವಾದ, ಸಮಾಜದಲ್ಲಿ ಈಗಲೂ ಹಾಡಹಗಲೇ ನಡೆಯುವ ಘಟನೆಗಳಿಗೆ ಪಿಂಕಿ ಸಾಕ್ಷಿಯಾಗುತ್ತಾಳೆ. ಒಂದೊಳ್ಳೆಯ ಎಳೆ ಇಟ್ಟುಕೊಂಡು ನಿರ್ದೇಶಕ ಪೃಥ್ವಿ ಕೋಣನೂರು ಮನಸ್ಸಿಗೆ ಹಿಡಿಸುವ, ಕೊಂಚ ಎದೆ ಭಾರವಾಗಿಸುವ, ವಸ್ತುಸ್ಥಿತಿಯ ಚಿತ್ರ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಹೊಡಿ-ಬಡಿ- ಕಡಿ ಸಿನಿಮಾಗಳ ನಡುವೆ ಪಿಂಕಿ ವಿಭಿನ್ನ ಎನಿಸಿಕೊಳ್ಳುತ್ತಾಳೆ.
ಒಂದೇ ಮಾತಲ್ಲಿ ಹೇಳುವುದಾದರೆ, ಪಿಂಕಿ ಕಾಡುವ ಮತ್ತು ನೋಡುವ ಚಿತ್ರ. ಆಧುನಿಕ ಜಗತ್ತಲ್ಲಿ ಎಲ್ಲವೂ ಗೌಣ. ಇಲ್ಲಿ ಸಂಬಂಧಗಳ ಮೌಲ್ಯ ಲೆಕ್ಕಕ್ಕಿಲ್ಲ. ಹಣಕ್ಕಷ್ಟೇ ಬೆಲೆ ಎಂಬ ಸೂಕ್ಷ್ಮ ಅಂಶವನ್ನು ಅಷ್ಟೇ ಪರಿಣಾಮಕಾರಿಯಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ.
ಈಗಂತೂ ಇಲ್ಲಿ ಪ್ರೀ, ಸಂಬಂಧಗಳಿಗೆ ಅರ್ಥವೇ ಇಲ್ಲದಂತಾಗಿದೆ. ಜಂಜಾಟದ ಬದುಕಿನ ಮಧ್ಯೆ ಮನಸ್ಸುಗಳು ಕುಸಿಯುತ್ತಿವೆ. ಅರ್ಥ ಕಳೆದುಕೊಂಡ ಮನಸ್ಸುಗಳು ಅನಾಹುತಕ್ಕೆ ಕಾರಣವಾಗುತ್ತಿವೆ. ಅಂಥದ್ದೊಂದು ಅಂಶ ಮತ್ತು ಸಂದೇಶ ಪಿಂಕಿಯೊಳಗಿದೆ.
ಇಲ್ಲಿ ತಪ್ಪಿನ ಅರಿವಿದೆ, ಆತಂಕವಿದೆ, ಆಕ್ರಂದನವಿದೆ, ನೋವು, ತಳಮಳ, ಭಾವುಕತೆ, ಪಾಪಪ್ರಜ್ಞೆಯೂ ಇದೆ. ಇದರೊಂದಿಗೆ ಆಸೆ, ದುರಾಸೆಗಳ ಗುಚ್ಛವೂ ಇದೆ.
ಕಥೆಯಲ್ಲಿ ಒಂದಷ್ಟು ಆಶಯವಿದೆ. ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿ ಹಿಡಿತ ಇರಬಹುದಿತ್ತು. ಎಲ್ಲವೂ ಇಲ್ಲಿ ನೈಜ ಎನಿಸುವುದರಿಂದ ಅಲ್ಲಲ್ಲಿ ಕಾಣುವ ತಪ್ಪುಗಳನ್ನು ಬದಿಗೊತ್ತಲು ಅಡ್ಡಿ ಇಲ್ಲ.
ನಿರ್ದೇಶಕರ ಕಲ್ಪನೆ, ನಿರೂಪಣೆ, ಆಯ್ಕೆ ಮಾಡಿಕೊಂಡ ಪಾತ್ರಗಳು ಸಿನಿಮಾದ ವೇಗ ಹೆಚ್ಚಿಸಿವೆ. ಅದಕ್ಕೆ ತಕ್ಕಂತಹ ಸಂಭಾಷಣೆ, ಛಾಯಾಗ್ರಹಣ, ಹಿನ್ನೆಲೆ ಸಂಗೀತ ಕೂಡ ಪಿಂಕಿಗೆ ಬಲ ಕೊಟ್ಟಿದೆ. ಸಮಾಜದಲ್ಲಿ ನಡೆಯೋ ಘಟನೆಯೊಂದು ಹೇಗೆಲ್ಲಾ ತಿರುವು ಪಡೆದುಕೊಳ್ಳುತ್ತೆ ಅನ್ನೋದು ಹೈಲೆಟ್. ಆ ಕುತೂಹಲ ಇದ್ದರೆ, ಒಮ್ಮೆ ಪಿಂಕಿ ನೋಡಲ್ಲಡ್ಡಿಯಿಲ್ಲ.
ಕಥೆ ಏನು?
ಪಿಂಕಿ ಎಂಬ ಎಂಟು ತಿಂಗಳ ಹೆಣ್ಣು ಮಗು ಕಥೆಯ ಕೇಂದ್ರ ಬಿಂದು. ಬೆಂಗಳೂರು ಎಂಬ ದಟ್ಟ ಕಾಂಕ್ರೀಟ್ ನಗರದಲ್ಲಿ ಒಂದು ಕುಟುಂಬ. ಆ ಮನೆಯಲ್ಲಿ ಪಿಂಕಿ ಮತ್ತು ಆಕೆಯ ಅಪ್ಪ ಅಮ್ಮ ವಾಸ. ದುಡಿಯಲು ಹೊರ ಹೋಗುವ ಅಪ್ಪ ಅಮ್ಮ ಪಿಂಕಿ ನೋಡಿಕೊಳ್ಳಲೆಂದೆ ಕೆಲಸದಾಕೆಯನ್ನು ನೇಮಿಸುತ್ತಾರೆ. ಅತ್ತ ಪಿಂಕಿಯ ಪೋಷಕರು ಕೆಲಸಕ್ಕೆ ಹೊರಡುತ್ತಿದ್ದಂತೆ ಇತ್ತ ಕೆಲಸವಳ ಚಾಲಾಕಿ ಬುದ್ಧಿ ಅನಾವರಣಗೊಳ್ಳುತ್ತೆ. ಅದೇನು ಅನ್ನೋದು ಸಸ್ಪೆನ್ಸ್.
ಪಿಂಕಿ ಕೇವಲ 8 ತಿಂಗಳಲ್ಲೇ ದುಡಿಯೋ ಮಗುವಾಗುತ್ತಾಳೆ! ಅಲ್ಲೊಂದು ಜಾಲ ಪಿಂಕಿಯನ್ನು ದುರುಪಯೋಗ ಮಾಡಿಕೊಳ್ಳುತ್ತೆ. ಹೀಗಿರುವಾಗಲೇ ಪಿಂಕಿ ಕಳೆದುಹೋಗುತ್ತಾಳೆ. ಪಿಂಕಿ ಕಳೆದದ್ದು ಹೇಗೆ? ಅವಳನ್ನು ಹೊತ್ತು ಹೊಯ್ದವರಾರು? ಇಷ್ಕಕ್ಕೂ ಪಿಂಕಿ ಭಿಕ್ಷೆ ಬೇಡಿ ಬದುಕುವ ಮಹಿಳೆಯೊಬ್ಬಳ ಕೈ ಸೇರುತ್ತಾಳೆ ಹಾಲಲ್ಲಿ ಅಮಲು ಬರುವ ಆಲ್ಕೋಹಾಲ್ ಸೇರಿಸಿ ಅವಳನ್ನು ಮಲಗುವಂತೆ ಮಾಡುವ ಭಿಕ್ಷುಕಿಯೊಬ್ಬಳು, ತನ್ನ ಕುಡಿತದ ಚಟಕ್ಕೆ ಪಿಂಕಿಯನ್ನೇ ಬೀದಿ ಬದಿ ಬಿಟ್ಟುಬಿಡುತ್ತಾಳೆ!!
ಅಲ್ಲಿಂದ ಪಿಂಕಿಯ ಹುಡುಕಾಟ ಶುರುವಾಗುತ್ತೆ. ಅಲ್ಲಿಂದಲೇ ಸಂಬಂಧಗಳ ಒಂದೊಂದೇ ಕರಾಳ ಮುಖ ಬೆತ್ತಲಾಗುತ್ತವೆ. ಒಂದು ಕಡೆ ಮಕ್ಕಳಿಲ್ಲದ ಪರಿತಪಿಸುವ ಸ್ಲಂ ಬಳಿ ವಾಸಿಸುವ ದಂಪತಿ ಕೈಗೆ ಪಿಂಕಿ ಸಿಕ್ಕಾಗ ನಡೆಯೋ ಘಟನಾವಳಿ ಇಮ್ನೂ ವಿಶೇಷ ಎನಿಸುತ್ತವೆ. ಒಂದಮದೇ ಜಾಲಗಳ ದರ್ಶನವೂ ಆಗುತ್ತದೆ. ಇದೆಲ್ಲದರ ನಡುವೆ ಕಳಚಿ ಬಿದ್ದ ಸಂಬಂಧಗಳ ಪರಿಚಯವಾಗುತ್ತದೆ. ಭಾವನೆಗಳಿಲ್ಲದೆ ಬದುಕುವ ಮಂದಿಯ ವ್ಯಕ್ತಿತ್ವ ಬಯಲಾಗುತ್ತೆ. ಇದೆಲ್ಲದರ ನಡುವೆ ಪಿಂಕಿ ಎಲ್ಲಿ? ಆಕೆ ಸಿಕ್ತಾಳ ಇಲ್ಲವೋ ಅನ್ನೋದೇ ಇಲ್ಲಿರುವ ಚಿತ್ರಣ.
ಹಾಗೆ ನೋಡಿದರೆ, ಇಲ್ಲಿ ಪಿಂಕಿ ನೆಪಮಾತ್ರ. ಅವಳ ಹುಡುಕುವ ಜರ್ನಿಯಲ್ಲಿ ಬರುವ ದೃಶ್ಯಗಳು ಹುಬ್ಬೇರಿಸುತ್ತವೆ. ಗಂಡ ಹೆಂಡತಿ ಮತ್ತು ಸ್ನೇಹಿತರ ನಡುವಿನ ಭಾವನೆಗಳ ಬಣ್ಣ ಕಳಚುತ್ತದೆ. ಪಿಂಕಿಯ ಹುಡುಕಾಟದ ಜೊತೆಯಲ್ಲಿ ಸಮಾಜದ ಅವ್ಯವಸ್ಥೆ ರಾಚುತ್ತದೆ.
ಯಾರು ಹೇಗೆ?
ಇಂತಹ ಕಥೆಗೆ ನುರಿತ ಕಲಾವಿದರ ಅಗತ್ಯವಿಲ್ಲ. ಯಾಕೆಂದರೆಬಿಲ್ಲಿ ಗಟ್ಟಿ ಕಥೆ ಇದೆ. ಅಲ್ಲಿ ಯಾರೇ ಇದ್ದರೂ ಕಥೆಯೇ ಎದ್ದುಬಕಾಣುತ್ತೆ. ಅಕ್ಷತಾ ಅಮ್ಮನಾಗಿ ಇಷ್ಟವಾಗುತ್ತಾರೆ. ಮಗು ಕಳಕೊಂಡು ಚಡಪಡಿಸುವ ನೈಜ ಅಭಿನಯ ಮೂಲಕ ಮೆಚ್ಚುಗೆ ಆಗುತ್ತಾರೆ. ದೀಪಕ್ ಸುಬ್ರಹ್ಮಣ್ಯ, ಪೃಥ್ವಿ ಸೇರಿದಂತೆ ಕೊಳಗೇರಿ ವಾಸಿಗಳಾಗಿ ಕಾಣಿಕೊಂಡ ಸಣ್ಣಮ್ಮ, ಅನುಷ ಕಲಾವಿದರಿಗೆ ಇದು ಹೊಸತಾದರೂ ನೈಜವಾಗಿಯೇ ಕಾಣಿಸಿಕೊಂಡಿದ್ದಾರೆ. ಕಥೆಗೆ ಪೂರಕವಾಗಿ ಸಂಗೀತವೂ ಇದೆ.
ಅದೇನೆ ಇರಲಿ, ನಮ್ಮ ನಡುವೆ ನಡೆಯೋ ಇಂತಹ ಘಟನೆಗಳನ್ನು ದೃಶ್ಯರೂಪಕ್ಕೆ ಅಳವಡಿಸಿ ಮನಕಲಕುವಂತೆ ಮಾಡಿರುವ ತಂಡದ ಪ್ರಯತ್ನ ಸಾರ್ಥಕ.