ನಟ ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ನಿರ್ಮಿಸುತ್ತಿರುವ ಸಿನಿಮಾ ಟಗರು ಪಲ್ಯ..ಯೋಗರಾಜ್ ಭಟ್ಟರ ಗರಡಿಯಲ್ಲಿ ಮತ್ತು ಹಲವು ಖ್ಯಾತ ನಿರ್ದೇಶಕರ ಜೊತೆ ನಿರ್ದೇಶನದ ವಿಭಾಗದಲ್ಲಿ ದುಡಿರುವ ಉಮೇಶ್ ಕೆ ಕೃಪ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕಳೆದ ನವೆಂಬರ್ ನಲ್ಲಿ ಸೆಟ್ಟೇರಿದ ಟಗರು ಪಲ್ಯ ಸಿನಿಮಾಗೆ ಕುಂಬಳಕಾಯಿ ಪ್ರಾಪ್ತಿಯಾಗಿದೆ.
ಮಂಡ್ಯ, ಮಳವಳ್ಳಿ, ಮುತತ್ತಿ ಹಾಗೂ ಶಿಂಶ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲೆಂದು ಹಾಗೂ ಕಂಟೆಂಟ್ ಆಧಾರಿತ ಚಿತ್ರ ನಿರ್ಮಿಸಲು ಧನಂಜಯ್ ಪ್ರಾರಂಭಿಸುವ ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ ಮೂರನೇ ಕೊಡುಗೆ ಟಗರು ಪಲ್ಯ.
ಇಕ್ಕಟ್, ಬಡವ ರಾಸ್ಕಲ್ ಸಿನಿಮಾಗಳ ಖ್ಯಾತಿಯ ನಾಗಭೂಷಣ್ ನಾಯಕನಾಗಿ ನಟಿಸುತ್ತಿದ್ದು, ಇವರಿಗೆ ಜೋಡಿ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.
ಮಂಡ್ಯ ಹಳ್ಳಿಗಳಲ್ಲಿ ನಡೆಯುವ ಆಚರಣೆ ಸುತ್ತಾ ಇಡೀ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಸೇರಿದಂತೆ ದೊಡ್ಡತಾರಾಬಳಗವಿರುವ ಟಗರು ಪಲ್ಯ ಸಿನಿಮಾಗೆ ವಾಸುಕಿ ವೈಭವ್ ಟ್ಯೂನ್ ಹಾಕಿದ್ದು, ಎಸ್ ಕೆ ರಾವ್ ಕ್ಯಾಮೆರಾ ಹಿಡಿದಿದ್ದಾರೆ. ಸದ್ಯ ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.