“ಕೆ.ಜಿ.ಎಫ್”, ” ಕಾಂತಾರ”ದಂತಹ ವಿಶ್ವಪ್ರಸಿದ್ಧ ಚಿತ್ರಗಳನ್ನು ನೀಡಿರುವ ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರ್ ಅವರ ನಿರ್ಮಾಣದ, “ರಾಜಕುಮಾರ” ದಂತಹ ಯಶಸ್ವಿ ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್ ನಿರ್ದೇಶನದ ಹಾಗೂ ತಮ್ಮ ಅಭಿನಯದ ಮೂಲಕ ಕನ್ನಡಿಗರ ಮನ ಗೆದ್ದಿರುವ ನವರಸ ನಾಯಕ ಜಗ್ಗೇಶ್ ನಾಯಕರಾಗಿ ನಟಿಸಿರುವ “ರಾಘವೇಂದ್ರ ಸ್ಟೋರ್ಸ್” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ಬಿಡುಗಡೆಯಾದ ತಕ್ಷಣದಿಂದಲೇ ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಚಿತ್ರ ಏಪ್ರಿಲ್ 28 ರಂದು ತೆರೆಗೆ ಬರಲಿದೆ.
ಸದಭಿರುಚಿಯ ಚಿತ್ರಗಳ ನಿರ್ದೇಶಕರೆಂದೆ ಖ್ಯಾತರಾಗಿರುವ ಸಂತೋಷ್ ಆನಂದರಾಮ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಕಥೆ, ಚಿತ್ರಕಥೆಯನ್ನು ಅವರೆ ಬರೆದಿದ್ದಾರೆ. ಕೌಟುಂಬಿಕ ಹಾಗೂ ಕಾಮಿಡಿ ಜಾನರ್ ನ “ರಾಘವೇಂದ್ರ ಸ್ಟೋರ್ಸ್” ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಈಗಾಗಲೇ ಟೀಸರ್ ಹಾಗೂ ಲಿರಿಕಲ್ ವಿಡಿಯೋ ಮೂಲಕ “ರಾಘವೇಂದ್ರ ಸ್ಟೋರ್ಸ್” ಸದ್ದು ಮಾಡಿದೆ.
ಅಜನೀಶ್ ಲೋಕನಾಥ್ ಸಂಗೀತದಲ್ಲಿ ಮೂಡಿಬಂದಿರುವ ಈ ಚಿತ್ರದ ಹಾಡುಗಳು ಸುಮಧುರವಾಗಿದೆ. ಶ್ರೀಶ ಕುದುವಳ್ಳಿ ಛಾಯಾಗ್ರಹಣ , ದೀಪು ಎಸ್ ಕುಮಾರ್ ಸಂಕಲನ ಹಾಗೂ ವುಶ್ವಾಸ್ ಕಶ್ಯಪ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿರುವ ಯೋಗಿ ಜಿ ರಾಜ್ ವಸ್ತ್ರ ವಿನ್ಯಾಸ ಕೂಡ ಮಾಡಿದ್ದಾರೆ.
ನಾಯಕ ಜಗ್ಗೇಶ್, ಶ್ವೇತ ಶ್ರೀವಾಸ್ತವ್, ಹೆಚ್ ಜಿ ದತ್ತಾತ್ರೇಯ, ರವಿಶಂಕರ್ ಗೌಡ ಮುಂತಾದವರು “ರಾಘವೇಂದ್ರ ಸ್ಟೋರ್ಸ್” ನಲ್ಲಿ ನಟಿಸಿದ್ದಾರೆ.