ರಮೇಶ್ ಅರವಿಂದ್ ನಾಯಕರಾಗಿ ನಟಿಸಿರುವ “ಶಿವಾಜಿ ಸುರತ್ಕಲ್ 2” ಚಿತ್ರದ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಆಕಾಶ್ ಶ್ರೀವತ್ಸ ನಿರ್ದೇಶಿಸಿರುವ ಈ ಚಿತ್ರವನ್ನು ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಿಸಿದ್ದಾರೆ.
“ಶಿವಾಜಿ ಸುರತ್ಕಲ್ 2” ಲಾಕ್ ಡೌನ್ ಸಮಯದಲ್ಲಿ ಹುಟ್ಟಿದ ಕಥೆ. ನಾನು ಹಾಗೂ ರಮೇಶ್ ಸರ್ ವಾಟ್ಸಪ್ ಮೂಲಕ ಎರಡನೇ ಭಾಗದ ಕಥೆಯನ್ನು ಚರ್ಚಿಸಿದೆವು. ಎಲ್ಲರಿಗೂ ಲಾಕ್ ಡೌನ್ ನಿಂದ ತೊಂದರೆ ಆದರೆ, ನಮಗೆ ಮಾತ್ರ ಈ ಚಿತ್ರದ ಕಥೆ ಬರೆಯಲು ಅನುಕೂಲವಾಯಿತು. ನಮ್ಮ ತಂಡದ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಈಗ ಟ್ರೇಲರ್ ಬಿಡುಗಡೆಯಾಗಿದೆ. ಇದೇ ಏಪ್ರಿಲ್ 14 ರಂದು ನಮ್ಮ ಶಿವಾಜಿ ಮತ್ತೆ ಹೊಸ ಕೇಸ್ ಹೊತ್ತು ಬರಲಿದ್ದಾನೆ. ಎಲ್ಲರಲ್ಲೂ ಮನೆ ಮಾಡಿರುವ “ಮಾಯಾವಿ” ಯಾರು? ಎಂಬ ಪ್ರಶ್ನೆಗೆ ಅಂದೆ ಉತ್ತರ ಸಿಗಲಿದೆ ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ತಿಳಿಸಿದರು.
ಒಂದೊಳ್ಳೆ ತಂಡದ ಜೊತೆಗೆ ಕೆಲಸ ಮಾಡಿದ ಖುಷಿಯಿದೆ. “ಶಿವಾಜಿ ಸುರತ್ಕಲ್ 2” ಚಿತ್ರದ ಟ್ರೇಲರ್ ಚೆನ್ನಾಗಿದೆ. ಇದೇ ಏಪ್ರಿಲ್ 14 ನಮ್ಮ ಚಿತ್ರ ಬಿಡುಗಡೆಯಾಗಲಿದೆ. ನಾನು ಪ್ರತಿ ವೀಕೆಂಡ್ ನಿಮ್ಮ ಮನೆಗೆ ಬರುತ್ತೇನೆ. ನೀವು ಕುಟುಂಬ ಸಮೇತ ನಮ್ಮ ಚಿತ್ರ ನೋಡಲು ಚಿತ್ರಮಂದಿರಕ್ಕೆ ಬನ್ನಿ ಎಂದರು ನಟ ರಮೇಶ್ ಅರವಿಂದ್.
ನನ್ನ ಮಿತ್ರರ ಸಹಕಾರದಿಂದ ಈ ಚಿತ್ರವನ್ನು ನಿರ್ಮಿಸಿದ್ದೇನೆ. ಸದಭಿರುಚಿಯ ಚಿತ್ರ ನಿರ್ಮಿಸಿರುವ ಹೆಮ್ಮೆಯಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಅನೂಪ್ ಗೌಡ.
ಚಿತ್ರದಲ್ಲಿ ನಟಿಸಿರುವ ರಾಧಿಕಾ ಚೇತನ್, ಮೇಘನಾ ಗಾಂವ್ಕರ್, ಸಂಗೀತ ಶೃಂಗೇರಿ, ರಘು ರಮಣಕೊಪ್ಪ, ವಿನಾಯಕ ಜೋಶಿ, ವಿದ್ಯಾಮೂರ್ತಿ ಮುಂತಾದವರು ತಮ್ಮ ಪಾತ್ರ ಹಾಗೂ ಚಿತ್ರದ ಬಗ್ಗೆ ಮಾತನಾಡಿದರು.