ಡಾ.ಪುನೀತ್ ರಾಜಕುಮಾರ್ ಅವರ ಹೆಸರಲ್ಲಿ ಆಂಬುಲೆನ್ಸ್ ಕೊಡಬೇಕೆಂಬ ನಟ ಪ್ರಕಾಶ್ ರಾಜ್ ಮತ್ತು ಅವರ ಗೆಳೆಯರ ಬಯಕೆ ಈಡೇರಿದೆ. ಈ ಕುರಿತು ಸ್ವತಃ ಪ್ರಕಾಶ್ ರಾಜ್ ಪತ್ರವೊಂದನ್ನು ಬರೆದಿದ್ದಾರೆ…
ನಮಸ್ಕಾರ!
ತಮ್ಮ ಸಜ್ಜನಿಕೆಯಿಂದ, ಧಾರಾಳ ಮನಸ್ಸಿನಿಂದ ಹಾಗೂ ಉತ್ತಮ ವ್ಯಕ್ತಿತ್ವದಿಂದಾಗಿ ನಮ್ಮೆಲ್ಲರ ನಡುವೆ ಎಂದೆಂದೂ ಮಾಸದ ನೆನಪಾಗಿ ಉಳಿದಿರುವವರು ಡಾ ಪುನೀತ್ ರಾಜಕುಮಾರ್ — ನಮ್ಮೆಲ್ಲರ ಪ್ರೀತಿಯ ಅಪ್ಪು. ಅವರು ಯಾವಾಗಲೂ ನಮ್ಮ ಜೊತೆ ಇರಬೇಕು ಅಂದರೆ ಅವರು ಮಾಡುತ್ತಿದ್ದ ಒಳ್ಳೆಯ ಕೆಲಸಗಳನ್ನು ಮುಂದುವರೆಸಿದರೆ ಮಾತ್ರ ಸಾಧ್ಯ ಆಗುತ್ತದೆ.
ಈ ಒಂದು ಆಶಯದಿಂದ ಶುರುವಾಗಿದ್ದು ಅಪ್ಪು ಎಕ್ಸ್ ಪ್ರೆಸ್ ಆಂಬುಲೆನ್ಸ್. ಕರ್ನಾಟಕದ ಪ್ರತೀ ಜಿಲ್ಲೆಯಲ್ಲೂ ಅಪ್ಪು ಹೆಸರಿನ ಆಂಬುಲೆನ್ಸ್ ಇರಬೇಕು ಎನ್ನುವುದು ನನ್ನ ಹಾಗೂ ನಮ್ಮ ಪ್ರಕಾಶ್ ರಾಜ್ ಫೌಂಡೇಶನ್ನಿನ ಕನಸು.
ಮೊದಲನೇ ಆಂಬುಲೆನ್ಸ್ ಅನ್ನು ನಮ್ಮ ಹೆಮ್ಮೆಯ ಸಾಂಸ್ಕೃತಿಕ ನಗರವಾದ ಮೈಸೂರಿಗೆ ಕೊಡುಗೆ ನೀಡಿದೆವು. ಈಗ ಅದರ ಮುಂದುವರೆದ ಭಾಗವಾಗಿ ಇನ್ನೂ 5 ಆಂಬುಲೆನ್ಸ್ ನಮ್ಮ ರಾಜ್ಯದ ಐದು ಜಿಲ್ಲೆಗಳಿಗೆ ಜೀವ ಉಳಿಸುವಂಥ ಗುರುತರ ಹೊಣೆ ಹೊತ್ತು ಸಾಗುತ್ತಿವೆ.
ಈ ಬಾರಿ ಬೀದರಿನ ಗುರು ನಾನಕ್ ಆಸ್ಪತ್ರೆ, ಕಲಬುರ್ಗಿಯ ಡಾ ಓಮ್ ಇಂಡೋ ಜರ್ಮನ್ ಆಸ್ಪತ್ರೆ ಚಿತ್ತಾಪುರ, ಉಡುಪಿಯ ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ, ಕೊಳ್ಳೇಗಾಲದ ‘ಹೋಲಿ ಕ್ರಾಸ್ ಕಾನ್ವೆಂಟ್ ಆಸ್ಪತ್ರೆ’. ಮತ್ತು ಕೊಪ್ಪಳದ ಗವಿಸಿದ್ಧೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ – ಈ ಸಂಸ್ಥೆಗಳಿಗೆ ಆಂಬುಲೆನ್ಸ್ ಹಸ್ತಾಂತರಿಸಿದ್ದೇವೆ,
ಈ ಬಾರಿ ಈ ಕನಸು ನನಸಾಗುವಲ್ಲಿ ನನ್ನನ್ನು ಮೀರಿ ಇನ್ನೂ ಹಲವರ ಪಾತ್ರ ಇದೆ. ನಮ್ಮ ಪ್ರಕಾಶ್ ರಾಜ್ ಫೌಂಡೇಶನ್ ನ ಈ ಕನಸಿಗೆ ಜೊತೆಯಾಗಿ ನಿಂತಿರುವವರು ತಮ್ಮ ಚಿರಂಜೀವಿ ಚಾರಿಟೇಬಲ್ ಟ್ರಸ್ಟ್ ಮೂಲಕ ನಮ್ಮ ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಅವರಿದ್ದಾರೆ, ಜೊತೆಗೆ ತಮಿಳಿನ ಸೋದರ ನಟ ಸೂರ್ಯ ಅವರು ತಮ್ಮ 2 ಡಿ ಎಂಟರ್ಟೈನ್ಮೆಂಟ್ ಮೂಲಕ ನೀಡಿದರೆ, ನಮ್ಮ ಕನ್ನಡದ ಹೆಮ್ಮೆಯ ನಾಯಕ ನಟ ಯಶ್ ಅವರು ತಮ್ಮ ಸಂಸ್ಥೆ ‘ಯಶೋಮಾರ್ಗ’ ದ ಮೂಲಕ ಬಹಳ ದೊಡ್ಡ ಸಹಾಯವಾಗಿ ನಿಂತಿದ್ದಾರೆ.
ಜೊತೆಗೆ ಅವರ ಸ್ನೇಹಿತ ನಿರ್ಮಾಪಕರಾದ ವೆಂಕಟ್ ಅವರು ತಮ್ಮ ಕೆವಿಎನ್ ಫೌಂಡೇಶನ್ ಮೂಲಕ ಬೆಂಬಲ ನೀಡಿದ್ದಾರೆ.
“ಪ್ರಕಾಶ್ ಸಾರ್, ಇದು ಬರೀ ನಿಮ್ಮ ಕನಸಲ್ಲ ನಮ್ಮದೂ ಕೂಡ” ಅಂತ ಅವರ ಸಂಸ್ಥೆ ‘ಯಶೋಮಾರ್ಗ’ದ ಮೂಲಕ ಇದರಲ್ಲಿ ಧಾರಾಳ ಸಹಾಯ ಹಸ್ತ ಚಾಚಿರುವ ಯಶ್ ಅವರಿಗೆ ಮತ್ತೆ ನನ್ನ ಎಲ್ಲಾ ಸ್ನೇಹಿತರಿಗೂ ಧನ್ಯವಾದಗಳು.
ಈಗ ಈ ಆಂಬುಲೆನ್ಸ್ ಗಳು ಅವುಗಳು ಸೇರಬೇಕಾದ ಆಸ್ಪತ್ರೆಗಳತ್ತ ಹೊರಟು ಬಿಟ್ಟಿವೆ. ಇದನ್ನು ದೊಡ್ಡ ಕಾರ್ಯಕ್ರಮ ಮಾಡಿ ಹಸ್ತಾಂತರ ಮಾಡಬಹುದಿತ್ತು. ಆದರೆ ಆ ಕಾರ್ಯಕ್ರಮಕ್ಕೆ ಆಗುವ ಖರ್ಚಿನಲ್ಲೇ ಇನ್ನೊಂದು ಆಂಬುಲೆನ್ಸ್ ವ್ಯವಸ್ಥೆ ಮಾಡಿಬಿಡಬಹುದು ಎನ್ನುವುದು ನನ್ನ ಹಾಗೂ ಯಶ್ ಅವರ ಅನಿಸಿಕೆ. ಹಾಗಾಗಿ ಈ ಪತ್ರಿಕಾ ಪ್ರಕಟಣೆ ನೀಡುತ್ತಾ ನಿಮ್ಮೊಂದಿಗೆ ನಮ್ಮ ಈ ಕೈಂಕರ್ಯದ ಮಾಹಿತಿಯನ್ನ ಹಂಚಿಕೊಳ್ಳುತ್ತಾ ಇದೀವಿ.
ವಿಶ್ವಾಸದಿಂದ,
ನಿಮ್ಮ ಪ್ರಕಾಶ್ ರಾಜ್