ವೀರಪ್ಪನ್ ಮಗಳು ಈಗ ನಾಯಕಿ! ಮಾವೀರನ್ ಪಿಳ್ಳೈ ಸಿನಿಮಾದಲ್ಲಿ ನಟನೆ


ದಂತಚೋರ ವೀರಪ್ಪನ್​ ಅವರ ಮಗಳು ಹಾಗೂ ತಮಿಳುನಾಡಿನ ಭಾರತೀಯ ಜನತಾ ಪಕ್ಷದ ಯುವ ಘಟಕದ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಇದೀಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ‘ಮಾವೀರನ್​ ಪಿಳ್ಳೈ’ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿದ್ದು, ಇತ್ತೀಚೆಗೆ ಹಾಡುಗಳ ಬಿಡುಗಡೆಯಾಗಿದೆ.


ಚೆನ್ನೈನ ಪ್ರಸಾದ್​ ಲ್ಯಾಬ್​ನಲ್ಲಿ ನಡೆದ ಈ ಸಮಾರಂಭದಲ್ಲಿ ವೀರಪ್ಪನ್​ ಪತ್ನಿ ಮುತ್ತು ಲಕ್ಷ್ಮೀ, ಆಲ್​ ಪೀಪಲ್ಸ್​ ಪೊಲಿಟಿಕಲ್​ ಪಾರ್ಟಿ ಅಧ್ಯಕ್ಷೆ ರಾಜೇಶ್ವರಿ ಪ್ರಿಯಾ, ನಟ ಕೂಲ್​ ಸುರೇಶ್​, ನಿರ್ದೇಶಕ ಪೇರರಸು, ನಿರ್ಮಾಪಕ ಕೆ.ಎನ್.​ಆರ್.​ ರಾಜ ಮುಂತಾದವರು ಹಾಜರಿದ್ದರು.


ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ರಾಜ, ‘ಪ್ರತಿ ಸಂಸಾರದಲ್ಲೂ ಕುಡಿತದಿಂದ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತವೆ. ಕುಡಿತದಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದೇವೆ’ ಎಂದು ಹೇಳಿದರು.
ವಿಜಯಲಕ್ಷ್ಮೀ ಅವರಿಗೆ ಬಾಲ್ಯದಿಂದಲೂ ನಟಿಸುವ ಆಸಕ್ತಿ ಇತ್ತಂತೆ. ‘ಮೊದಲಿನಿಂದಲೂ ನಟಿಸುವ ತುಡಿತ ಇತ್ತು. ಈಗ ಅವಕಾಶ ಸಿಕ್ಕಿದೆ. ಕುಡಿತದಿಂದಾಗಿ ಪ್ರತೀ ಮನೆಯಲ್ಲೂ ಸಾಕಷ್ಟು ಮಹಿಳೆಯರು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಅಂಥ ಮಹಿಳೆಯರ ಕುರಿತು ಈ ಚಿತ್ರದಲ್ಲಿ ಬೆಳಕು ಚೆಲ್ಲಲಾಗಿದೆ. ಅದೇ ಕಾರಣಕ್ಕೆ ಈ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡೆ’ ಎಂದು ಹೇಳಿದರು.


ಒಂದು ಚಿತ್ರದಲ್ಲಿ ಯಾರು ನಟಿಸಿದ್ದಾರೆ ಅಥವಾ ಚಿತ್ರವನ್ನು ಯಾರು ನಿರ್ದೇಶಿಸಿದ್ದಾರೆ ಎಂಬುದು ಮುಖ್ಯವಲ್ಲ, ಚಿತ್ರದ ಕಥಾವಸ್ತು ಮುಖ್ಯ ಎಂದ ನಿರ್ದೇಶಕ ಪೇರರಸು, ‘ನಮ್ಮ ಚಿತ್ರರಂಗದಲ್ಲಿ ಮುಖ್ಯಮಂತ್ರಿಗಳ ಮಗನೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಹಾಗೆಯೇ, ವೀರಪ್ಪನ್​ ಮಗಳು ಸಹ ಇದೀಗ ಚಿತ್ರರಂಗಕ್ಕೆ ಬಂದಿದ್ದಾರೆ. ಚಿತ್ರರಂಗ ಎಲ್ಲರನ್ನೂ ಕೈಬೀಡಿ ಕರೆಯುತ್ತದೆ. ನಾವು ಸಹ ವಿಜಯಲಕ್ಷ್ಮೀ ಅವರನ್ನು ಬಹಳ ಪ್ರೀತಿಯಿಂದ ಚಿತ್ರರಂಗಕ್ಕೆ ಬರಮಾಡಿಕೊಳ್ಳುತ್ತಿದ್ದೇವೆ’ ಎಂದು ವಿಜಯಲಕ್ಷ್ಮೀ ಅವರಿಗೆ ಚಿತ್ರರಂಗಕ್ಕೆ ಸ್ವಾಗತ ಕೋರಿದರು.


‘ಇಂದು ದೊಡ್ಡವರಷ್ಟೇ ಅಲ್ಲ, ಸಣ್ಣ ಮಕ್ಕಳು ಸಹ ಕುಡಿಯುವ ವೀಡಿಯೋಗಳು ಬಿಡುಗಡೆಯಾಗಿ ಎಲ್ಲರಿಗೂ ಆಘಾತ ತಂದಿದೆ. ಈ ಚಿತ್ರದಲ್ಲಿ ‘ಸಾರಾಯಂ ಅಭಯಂ’ ಎಂಬ ಹಾಡಿದ್ದು, ಕುಡಿತದ ವಿರುದ್ಧದ ಅಭಿಯಾನದಲ್ಲಿ ಬಳಸಿಕೊಳ್ಳಬಹುದು. ಜನ ಮತ ಚಲಾಯಿಸುತ್ತಾರೋ, ಇಲ್ಲವೋ ಎಂಬ ಭಯದಿಂದ ಯಾವ ರಾಜಕಾರಿಣಿಯೂ ಕುಡಿತವನ್ನು ನಿಷೇಧಿಸುವ ಮಾತಾಡುವುದಿಲ್ಲ. ಅವರ ಭಾಷಣಗಳಲ್ಲಿ, ಮಾತುಗಳಲ್ಲಿ ಕುಡಿತ ಕುರಿತು ಪ್ರಸ್ತಾಪವೇ ಇರುವುದಿಲ್ಲ.

ಮುಂದಿನ ದಿನಗಳಲ್ಲಿ ಸಾರಾಯಿ ತರಹ ಗಾಂಜ ಅಂಗಡಿಗಳು ಪ್ರಾರಂಭವಾದರೂ ಆಶ್ಚರ್ಯವಿಲ್ಲ. ಆಗಾಗ ಆನ್​ಲೈನ್​ ರಮ್ಮಿಯಿಂದ ಜನ ಸಾಯುವ ಬಗ್ಗೆ ಕೇಳುತ್ತಿರುತ್ತೇವೆ. ಆದರೆ, ಕುಡಿತದಿಂದ ಪ್ರತೀ ದಿನ ನೂರಾರು ಜನ ಸಾಯುತ್ತಿದ್ದಾರೆ. ಆನ್​ಲೈನ್​ ರಮ್ಮಿಯನ್ನು ನಿಷೇಧಿಸಬೇಕು ಎನ್ನುವವರು ಕುಡಿತವನ್ನು ನಿಷೇಧಿಸಬೇಕು ಎಂದು ಆಗ್ರಹಿಸುವುದಿಲ್ಲ.

ಮಹಿಳೆಯರಿಗೆ ಸಾವಿರಾರು ರೂಪಾಯಿ ಬೇಕಿಲ್ಲ. ಅವರಿಗೆ ಎಸಿ ಬಸ್​ ಬೇಕಿಲ್ಲ. ನೀಟ್​ ಪರೀಕ್ಷೆಗಳು ಮುಖ್ಯವಲ್ಲ. ಜನಸಾಮಾನ್ಯರಿಗೆ ಸಮಸ್ಯೆ ಆಗಿರುವ ಸಾರಾಯಿಯನ್ನು ಮೊದಲು ನಿಷೇಧಿಸಿ’ ಎಂದು ಆಗ್ರಹಿಸಿ.
ಈ ಚಿತ್ರಕ್ಕೆ ಮಂಜುನಾಥ ಅವರ ಛಾಯಾಗ್ರಹಣ ಮತ್ತು ರವಿವರ್ಮ ಸಂಗೀತವಿದೆ. ಪ್ರೇಮ್​ ಹಿನ್ನೆಲೆ ಸಂಗೀತ ಸಂಯೋಜಿಸಿದರೆ, ಜೂಲಿಯನ್​ ಸಂಕಲನಕಾರರಾಗಿ ದುಡಿದಿದ್ದಾರೆ.

Related Posts

error: Content is protected !!