ಏಕಾಂಗಿ ಸಂಚಾರಿಯ ಭಾವುಕ ಪಯಣ! ನಿರ್ದೇಶಕ ಕಿರಣ್ ಗೋವಿ ಹೃದಯಾಘಾತದಿಂದ ನಿಧನ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಕಿರಣ್ ಗೋವಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ನಾಗರಭಾವಿಯಲ್ಲಿದ್ದ ಸಿನಿಮಾ ಕಚೇರಿಯಲ್ಲಿ ಅವರು ಕೆಲಸ‌ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಆರಂಭದಲ್ಲಿ ಆರ್ಕೇಸ್ಟ್ರಾದಲ್ಲಿ ನಟ‌ ರವಿಶಂಕರ್ ಗೌಡ ಅವರು ಗಾಯಕರಾಗಿದ್ದ ಸಂದರ್ಭದಲ್ಲಿ ನಿರೂಪಕರಾಗಿದ್ದ ಕಿರಣ್ ಗೋವಿ, ಅವರು ತಮ್ಮ ಆತ್ಮೀಯ ಗೆಳೆಯ ರವಿಶಂಕರ್ ಗೌಡ ಅವರಿಗೆ ‘ಪಯಣ’ ಎಂಬ ಸದಭಿರುಚಿಯ ಸಿನಿಮಾ ನಿರ್ದೇಶಿಸುವ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಆ ಸಿನಿಮಾಗೆ ವಿ. ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಿದ್ದರು. ಅ ಚಿತ್ರದ ಹಾಡುಗಳು ಸುಪರ್ ಹಿಟ್ ಆಗುವುದರ ಜೊತೆಗೆ ಸಿನಿಮಾ ಕೂಡ ಸುದ್ದಿಯಾಗಿತ್ತು.

ಆ ಸಿನಿಮಾ‌ ಬಳಿಕ ಅವರು ‘ಸಂಚಾರಿ’ ಸಿನಿಮಾ ನಿರ್ದೇಶಿಸಿದ್ದರು. ಆ ಚಿತ್ರದ ಹಾಡುಗಳು ಸಹ ಎಲ್ಲೆಡೆ ಗಮನ ಸೆಳೆದಿದ್ದವು. ನಂತರದ ದಿನಗಳಲ್ಲಿ ಕಿರಣ್ ಗೋವಿ ಅವರು ಶ್ರೀನಗರ ಕಿಟ್ಟಿ ಅವರಿಗೆ ‘ಪಾರು ವೈಫ್ ಆಫ್ ದೇವದಾಸ್’ ಎಂಬ ಸಿನಿಮಾ ಮಾಡಿದ್ದರು. ಆಮೇಲೆ ‘ಯಾರಿಗುಂಟು ಯಾರಿಗಿಲ್ಲ’ ಸಿನಿಮಾ‌ ನಿರ್ದೇಶನ ಮಾಡಿದ್ದರು. ಸದ್ಯ ಹೊಸ ಸಿನಿಮಾ ನಿರ್ದೇಶನ ಮಾಡುವ ತಯಾರಿಯಲ್ಲಿದ್ದರು.

ಕಿರಣ್ ಗೋವಿ ಪ್ರತಿಭಾವಂತ ನಿರ್ದೇಶಕ. ಅವರಿಗೆ ಕಥೆ ಹಾಗು, ಸಂಗೀತ ಜ್ಞಾನವಿತ್ತು. ಕನ್ಮಡ‌ಸಿನಿಮಾ ರಂಗದಲ್ಲಿ ಒಳ್ಳೆಯ ಸಿನಿಮಾ ಕೊಡಬೇಕು ಎಂಬ ಉತ್ಸಾಹದಲ್ಲಿದ್ದರು. ಇಂದು ಹೃದಯಾಘಾತದಿಂದ ತನ್ನ ಬದುಕಿನ ಪಯಣ ಮುಗಿಸಿ ಬಾರದೂರಿಗೆ ತೆರಳಿದ್ದಾರೆ.

ಅವರ ಆತ್ಮಕ್ಕೆ ಕನ್ನಡ ನಿರ್ದೇಶಕರು, ನಟರು, ನಿರ್ಮಾಪಕರು ಶಾಂತಿ ಕೋರಿದ್ದಾರೆ.

Related Posts

error: Content is protected !!