ಅರಣ್ಯ ಸಮಸ್ಯೆ ಪರಿಹಾರಕ್ಕೆ ಸಿಎಂಗೆ ಮನವಿ ಸಲ್ಲಿಸಿದ ರಿಷಬ್ ಶೆಟ್ಟಿ : ಕಾಡ್ಗಿಚ್ಚು ನಿವಾರಣೆ, ಕಾಡಾನೆ ತೊಂದರೆ ಪರಿಹಾರಕ್ಕೆ ಮುಂದಾದ ಕಾಂತಾರ ಹೀರೋ…

ಕಾಡಂಚಿನ ಜನರು ಮತ್ತು ಅರಣ್ಯ ರಕ್ಷಣೆಯಲ್ಲಿ ಅರಣ್ಯ ಇಲಾಖೆಯ ಮಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ರಿಷಬ್ ಶೆಟ್ಟಿ ಮನವಿ ಸಲ್ಲಿಸಿದ್ದಾರೆ. ಈ ಮನವಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿ ಶೀಘ್ರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಆದೇಶಿಸುವ ಭರಸೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ, ಕಾಂತಾರ ಸಿನಿಮಾದ ಬಳಿಕ ನಾನು ಹೆಚ್ಚೆಚ್ಚು ಕಾಡು ಮತ್ತು ಕಾಡಂಚಿನ ಪ್ರದೇಶಗಳಲ್ಲಿ ಸುತ್ತಾಡಿದೆ. ಅರಣ್ಯ ಇಲಾಖೆಯ ಜೊತೆ ಕೆಲಸ ಮಾಡುತ್ತಾ ಅರಣ್ಯ ರಕ್ಷಣೆಯ ವೇಳೆ ಇಲಾಖೆಯ ಮಂದಿ ಮತ್ತು ಕಾಡಂಚಿನ ಪ್ರದೇಶಗಳ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅರಿತುಕೊಂಡೆ. ಉದಾಹರಣೆಗೆ ಕೃಷಿಕರು ಎದುರಿಸುತ್ತಿರುವ ಕಾಡಾನೆ ತೊಂದರೆ ಸಮಸ್ಯೆ ಇರಬಹುದು, ಕಾಡ್ಗಿಚ್ಚು ಸಂದರ್ಭದಲ್ಲಿ ಅರಣ್ಯ ಇಲಾಖೆಯ ವಾಚರ್ ಗಳು ಎದುರಿಸುವ ಕಷ್ಟಗಳಿರಬಹುದು ಹೀಗೆ ಸುಮಾರು 20 ಅಂಶಗಳ ವಿವರವಾದ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದು, ಅವರು ಶೀಘ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ಸಮಸ್ಯೆಗೆ ತಕ್ಷಣ ಸ್ಪಂದಿಸುವ ಮುಖ್ಯಮಂತ್ರಿಗಳು ಇರುವುದಕ್ಕೆ ನಾವು ಧನ್ಯರು ಎಂದೂ ತಿಳಿಸಿದ್ದಾರೆ.

ಕಾಂತಾರ ಸಿನಿಮಾ ಮೂಲಕ ಅರಣ್ಯ ರಕ್ಷಣೆಯ ಸಂದೇಶ ನೀಡಿದ ರಿಷಬ್ ಶೆಟ್ಟಿಯವರು ಇದೀಗ ಅರಣ್ಯ ರಕ್ಷಣೆ ಮತ್ತು ಕಾಡಂಚಿನಲ್ಲಿರುವ ಜನರ ಹಿತ ಕಾಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಕೆಲಸವೇ ಸರಿ.


ಕಾಂತಾರ ಚಿತ್ರದ ನಂತರದ ದಿನಗಳಲ್ಲಿ ಕಾಡು ಸುತ್ತಿ, ಅಡವಿ ಅಂಚಿನ ಜನರ ಜತೆ ಮಾತಾಡಿ, ಅರಣ್ಯ ಇಲಾಖೆ ಸಿಬ್ಬಂದಿಗಳ ಜತೆ ಚರ್ಚಿಸಿ ಕಲೆಹಾಕಿದ ಅಂಶಗಳನ್ನು ಮಾನ್ಯ ಮುಖ್ಯಮಂತ್ರಿಗಳ ಮುಂದಿಟ್ಟಾಗ ಅವರು ತಕ್ಷಣವೇ ಪರಿಹರಿಸುವುದಾಗಿ ಹೇಳಿದ್ದಾರೆ. ಸಮಸ್ಯೆಗೆ ಸ್ಪಂದಿಸಿದ ಬಸವರಾಜ ಬೊಮ್ಮಾಯಿಯವರಿಗೆ ಧನ್ಯವಾದಗಳು.

Related Posts

error: Content is protected !!