ಅಥಿ ಐ ಲವ್ ಯು! ಇದು ಲೋಕೇಂದ್ರ ಲವ್ ಸ್ಟೋರಿ: ಹನ್ನೊಂದು ನಿಮಿಷದ ಸಿಂಗಲ್ ಶಾಟ್ ದೃಶ್ಯ

ರೆಡ್ ಅಂಡ್ ವೈಟ್ ಸೆವೆನ್ ರಾಜ್ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಎರಡನೇ ಚಿತ್ರ ಅಥಿ ಐ ಲವ್ ಯು. ಸದ್ಯ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ಒಂದೇ ದಿನದಲ್ಲಿ, ಒಂದು ಮನೆಯಲ್ಲಿ ನಡೆಯುವ ಕತೆ ಈ ಚಿತ್ರದಲ್ಲಿದೆ. ಗಂಡ-ಹೆಂಡತಿಯ ನಡುವಿನ ಆಪ್ತ ದೃಶ್ಯಗಳು ಇಲ್ಲಿ ಪ್ರಮುಖವಾಗಿರಲಿದೆ. ಅದು ಬೆಂಗಳೂರಿನ ಮನೆಯಲ್ಲಿ ನಡೆದ ಚಿತ್ರೀಕರಣ. ಬರೋಬ್ಬರಿ ಹನ್ನೊಂದು ನಿಮಿಷದ ದೊಡ್ಡ ದೃಶ್ಯವದು. ಅದೂ ಸಿಂಗಲ್‌ ಶಾಟ್‌ನಲ್ಲಿ ಕಂಪೋಸ್‌ ಮಾಡಲಾಗಿತ್ತು. ಮಲಗಿದ್ದ ಗಂಡ ಹೆಂಡತಿ ಎದ್ದ ನಂತರದ ದೀರ್ಘವಾದ ಈ ದೃಶ್ಯಕ್ಕಾಗಿ ಸಾಕಷ್ಟು ತಯಾರಿಯನ್ನೂ ಮಾಡಿಕೊಳ್ಳಲಾಗಿತ್ತು. ಮನೆಯಲ್ಲೇ ವಿವಿಧ ಕೋನಗಳಲ್ಲಿ ಲೈಟಿಂಗ್‌ ವ್ಯವಸ್ಥೆ ರೂಪಿಸಿ, ಕ್ಯಾಮೆರಾ ಚಲನೆಗೆ ಪ್ಲಾನ್‌ ಮಾಡಲಾಗಿತ್ತು.

ಅಂದುಕೊಂಡಂತೇ ಈ ದೃಶ್ಯ ಮೂಡಿ ಬಂದಿದ್ದು ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ. ಈ ರೀತಿಯ ದೀರ್ಘಾವಧಿಯ ದೃಶ್ಯಗಳು ಚಿತ್ರದುದ್ದಕ್ಕೂ ಮೂಡಿಬರಲಿದೆಯಂತೆ. ಒಂದು ನಿಮಿಷದ ದೃಶ್ಯವನ್ನು ಕಂಪೋಸ್‌ ಮಾಡುವುದು ಕಷ್ಟದ ಕೆಲಸ. ಹತ್ತು ನಿಮಿಷಕ್ಕೂ ಅಧಿಕ ಸಮಯದ ದೃಶ್ಯವನ್ನು ಕಟ್ಟುವುದು ನಿಜಕ್ಕೂ ಸವಾಲಿನ ಕೆಲಸ. ಅದನ್ನು ಸ್ವತಃ ನಾಯಕನಾಗಿ ನಟಿಸಿ, ನಿರ್ದೇಶನವನ್ನೂ ಮಾಡಿರುವ ಲೋಕೇಂದ್ರ ಸೂರ್ಯ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ನಾಯಕಿ ಶ್ರಾವ್ಯಾ ರಾವ್‌ ಕೂಡಾ ಈ ಚಿತ್ರಕ್ಕಾಗಿ ವಿಶೇಷ ತಯಾರಿ ಮಾಡಿಕೊಂಡು ಕ್ಯಾಮೆರಾ ಮುಂದೆ ನಿಂತಿದ್ದಾರೆ.


ʻʻಲೆಂತಿ ಶಾಟ್ ಗಳು ಚಿತ್ರದುದ್ದಕ್ಕೂ ಸಹಜವಾಗಿಯೇ ಕಾಣಸಿಗುತ್ತವೆ, ಕತ್ತರಿಸಿ ಜೋಡಿಸಿದರೂ ಸಿಗದ ಅನುಭವವನ್ನು ಶಾಟ್ ಕಟ್ ಮಾಡದೇಯೇ ಪರದೆಯ ಮೇಲೆ ತರಬೇಕಾದರೆ, ಕಲಾವಿದರು ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಬೇಕಾಗುತ್ತದೆ. ಅಂತಹ ಪ್ರಯತ್ನದಲ್ಲಿ ಶ್ರಾವ್ಯ ಅವರು ನನಗೆ ಉತ್ತಮವಾದ ಸಾಥ್ ನೀಡಿದ್ದಾರೆ. ಭಾವನಾತ್ಮಕ ದೃಶ್ಯಗಳನ್ನು ಅಲ್ಲಲ್ಲಿ ಸಣ್ಣ ಶಾಟ್‌ಗಳಾಗಿ ವಿಭಾಗಿಸಿದರೆ, ಭಾವನೆಗಳನ್ನು ಹಿಡಿದಿಡುವುದು ಕಷ್ಟ. ಆದ ಕಾರಣ ಕೆಲವು ದೃಶ್ಯಗಳನ್ನು ಒಂದೊಂದೇ ಶಾಟ್‌ಗಳಲ್ಲಿ ಚಿತ್ರಿಸುತಿದ್ದೇವೆ. ಅದು ಪ್ರೇಕ್ಷಕರಿಗೆ ಮತ್ತಷ್ಟು ಹಿತವೆನಿಸುತ್ತದೆʼʼ ಎನ್ನುವುದು ನಿರ್ದೇಶಕ ಲೋಕೇಂದ್ರ ಸೂರ್ಯ ಅವರ ಮಾತು.


ʻʻಸಾಕಷ್ಟು ಸಿನಿಮಾಗಳಲ್ಲಿ ನಾನು ಅಭಿನಯಿಸಿದ್ದೇನೆ. ಎಲ್ಲವೂ ನನಗೆ ಇಷ್ಟವಾದವುಗಳೇ, ಆದರೆ, ಅಥಿ ಐ ಲವ್ ಯು ಚಿತ್ರದಲ್ಲಿ ನಾನು ಬೇರೊಂದು ಬಗೆಯಲ್ಲಿ ಅನುಭವ ಪಡೆದುಕೊಳ್ಳುತಿದ್ದೇನೆ. ಈ ಚಿತ್ರದ ಚಿತ್ರೀಕರಣ ನನಗೊಂದು ವಿಷೇಶವಾದ ಅನುಭವ ನೀಡುತ್ತಿದೆ. ನಿರ್ದೇಶಕ ಲೋಕೇಂದ್ರ ಸೂರ್ಯ ಅವರ ಜೊತೆ ಅಭಿನಯಿಸುವುದರ ಜೊತೆಗೆ, ಅವರ ನಿರ್ದೇಶನದ ರೀತಿಯೂ ಹೊಸತನದಿಂದ ಕೂಡಿದೆ. ಅಥಿ ಐ ಲವ್ ಯು ನನ್ನ ಚಿತ್ರ ಗುಚ್ಚದಲ್ಲಿ ಒಂದೊಳ್ಳೆ ಚಿತ್ರವಾಗುತ್ತದೆ.“ ಎಂದು ನಟಿ ಶ್ರಾವ್ಯ ರಾವ್ ಹೇಳಿದರು.


ನಾನು ಈ ಬಾರಿ ಚಿತ್ರದ ನಿರ್ಮಾಣದಲ್ಲಿ ತುಂಭಾ ಸಂತಸವನ್ನು ಹೊಂದಿದ್ದೇನೆ, ಒಂದೊಳ್ಳೆ ಚಿತ್ರದ ನಿರ್ಮಾಣ ನನ್ನ ಬ್ಯಾನರ್ ನಲ್ಲಿ ನಡೆಯುತ್ತಿರುವುದು ನನಗೆ ಮತ್ತಷ್ಟು ಸಂತಸವನ್ನು ತಂದುಕೊಟ್ಟಿದೆ. ಚಿತ್ರೀಕರಣದ ವೇಳೆಯಲ್ಲಿ ಕೆಲವು ದೃಷ್ಯಗಳು ನನಗೆ ತುಂಬ ಮಜಾ ಎನಿಸಿದೆ. ನಾನು ಅದೆಷ್ಟು ಅನುಭವಿಸಿದ್ದೇನೆ ಅನ್ನೋದನ್ನು ಪರದೆಯ ಮೇಲೆ ಚಿತ್ರ ವೀಕ್ಷಣೆ ಮಾಡಿದರೆ ಗೊತ್ತಾಗುತ್ತದೆ. ಎಲ್ಲಾ ಅಂದುಕೊಂಡತೆ ಚಿತ್ರದ ಫಸ್ಟ್ ಕಾಪಿ ರೆಡಿಯಾದ ಕೂಡಲೇ ಬಿಡುಗಡೆಗೆ ತಡ ಮಾಡುವುದಿಲ್ಲ. ಮೇ ಮೊದಲ ವಾರದಲ್ಲೇ ಬಿಡುಗಡೆ ಮಾಡುತ್ತೇವೆ. ಆದಷ್ಟು ಬೇಗ ಈ ಚಿತ್ರವನ್ನು ಪ್ರೇಕ್ಷಕರ ಮಡಿಲಿಗೆ ಹಾಕಬೇಕು ಎನ್ನುವ ತವಕ ನನ್ನದಾಗಿದೆʼʼ ಎಂದು ನಿರ್ಮಾಪಕ ರೆಡ್ ಅಂಡ್ ವೈಟ್ ಸೆವೆನ್ ರಾಜ್ ಅವರು ತಮ್ಮ ಸಂತೋಷವನ್ನು ಹೇಳಿಕೊಂಡರು.

ಇನ್ನು ಕುಗ್ರಾಮ ಚಿತ್ರದ ನಟಿ ಋತು ಚೈತ್ರಾ ಅವರೇ ವಸ್ತ್ರ ವಿನ್ಯಾಸ ಮಾಡಿದ್ದು, ಜೋಡಿಗಳಿಗೆ ಮತ್ತಷ್ಟು ಅಂದವನ್ನು ಹೆಚ್ಚಿಸಿದ್ದಾರೆ. ಇದೇ ತಿಂಗಳಲ್ಲಿ ಚಿತ್ರದ ಕುಂಬಳ ಕಾಯಿ ಹೊಡೆಯುವ ಯೋಚನೆ ಚಿತ್ರ ತಂಡಕ್ಕಿದೆ.
ಸೆವೆನ್ ರಾಜ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ, ರೆಡ್ ಅಂಡ್ ವೈಟ್ ಸೆವೆನ್ ರಾಜ್ ʻಅಥಿ ಐ ಲವ್ ಯೂʼ ಚಿತ್ರದಲ್ಲಿ ಲೋಕೇಂದ್ರ ಸೂರ್ಯ ಕಥೆ, ಚಿತ್ರಕತೆ, ಸಂಭಾಷಣೆಯ ಜೊತೆಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಅನಂತ್ ಆರ್ಯನ್ ಸಂಗೀತ ಚಿತ್ರಕ್ಕಿದೆ. ನಟಿ ಋತು ಚೈತ್ರ ಈ ಚಿತ್ರಕ್ಕೆ ವಸ್ತ್ರ ವಿನ್ಯಾಸ ಮಾಡಿರುವುದು ವಿಶೇಷ. ಎನ್. ಓಂ ಪ್ರಕಾಶ್ ರಾವ್ ಅವರ ಪುತ್ರಿ ಶ್ರಾವ್ಯಾ ರಾವ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

Related Posts

error: Content is protected !!