ಮಂಗಳವಾರಂ ಸಿನಿಮಾ ಪೋಸ್ಟರ್​ ಬಿಡುಗಡೆ: ಇದು ಅಜಯ್​ ಭೂಪತಿ ಚಿತ್ರ


‘ಆರ್​.ಎಕ್ಸ್​.100’ ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದವರು ನಿರ್ದೇಶಕ ಅಜಯ್​ ಭೂಪತಿ. ಆ ಚಿತ್ರದ ನಂತರ ಅವರ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇತ್ತು. ಅದಕ್ಕೆ ಉತ್ತರವಾಗಿ, ‘ಮಂಗಳವಾರಂ’ ಎಂಬ ಹೊಸ ಚಿತ್ರವನ್ನು ಅವರು ಘೋಷಿಸಿದ್ದು, ಆ ಚಿತ್ರದ ಕಾನ್ಸಪ್ಟ್​ ಪೋಸ್ಟರ್​ ಇತ್ತೀಚೆಗೆ ಬಿಡುಗಡೆಯಾಗಿದೆ.


‘ಮಂಗಳವಾರಂ’ ಚಿತ್ರವನ್ನು ಸ್ವಾತಿ ಗುಣಪತಿ ಮತ್ತು ಸುರೇಶ್​ ವರ್ಮಾ ಒಡೆತನದ ಮುದ್ರಾ ಮೀಡಿಯಾ ವರ್ಕ್ಸ್​ ಹಾಗೂ ಅಜಯ್​ ಭೂಪತಿ ಅವರ ಎ ಕ್ರಿಯೇಟಿವ್​ ವರ್ಕ್ಸ್​ ಜಂಟಿಯಾಗಿ ನಿರ್ಮಿಸುತ್ತಿವೆ. ಇದುವರೆಗೂ ನಿರ್ದೇಶಕರಾಗಿದ್ದ ಅಜಯ್​ ಭೂಪತಿ, ಈ ಚಿತ್ರದ ಮೂಲಕ ನಿರ್ಮಾಪಕರಾಗುತ್ತಿದ್ದಾರೆ. ಅವರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರ ಬರೀ ತೆಲುಗುಗಷ್ಟೇ ಸೀಮಿತವಲ್ಲ, ತೆಲುಗಿನಲ್ಲಿ ನಿರ್ಮಾಣವಾಗಿ ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಿಗೂ ಡಬ್​ ಆಗಿ ಬಿಡುಗಡೆಯಾಗಲಿದೆ. ಈ ಮೂಲಕ ಇದೊಂದು ದಕ್ಷಿಣ ಭಾರತದ ಚಿತ್ರವಾಗಲಿದೆ.


ಇದೊಂದು ವಿಭಿನ್ನ ಚಿತ್ರ ಎಂದು ಬಣ್ಣಿಸುವ ಅಜಯ್​, ‘ಭಾರತೀಯ ಚಿತ್ರರಂಗದಲ್ಲೇ ಇದುವರೆಗೂ ಯಾರೂ ಪ್ರಯತ್ನಿಸದ ಒಂದು ವಿಭಿನ್ನ ಅಂಶವನ್ನಿಟ್ಟುಕೊಂಡು ಚಿತ್ರ ಮಾಡುತ್ತಿದ್ದೇವೆ. ಈ ಚಿತ್ರದಲ್ಲಿ ಒಟ್ಟು 30 ಪಾತ್ರಗಳಿದ್ದು, ಪ್ರತಿ ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ಪ್ರತಿಯೊಂದು ಪಾತ್ರವೂ ಕಥೆಯನ್ನು ಮುನ್ನಡೆಸುವುದಷ್ಟೇ ಅಲ್ಲ, ಒಟ್ಟಾರೆ ಕಥೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ’ ಎಂದು ಹೇಳಿದ್ದಾರೆ.
ಇದೊಂದು ಪಕ್ಕಾ ದಕ್ಷಿಣ ಭಾರತದ ಚಿತ್ರ ಎನ್ನುವ ನಿರ್ಮಾಪಕರಾದ ಸ್ವಾತಿ ಗುಣಪತಿ ಮತ್ತು ಸುರೇಶ್​ ವರ್ಮ, ”ಆರ್​.ಎಕ್ಸ್​.100′ ಚಿತ್ರದಂತೆಯೇ, ಈ ಚಿತ್ರದ ಮೂಲಕವೂ ಅಜಯ್​ ಪ್ರೇಕ್ಷಕರಿಗೊಂದು ಅನಿರೀಕ್ಷಿತ ಸರ್​ಪ್ರೈಸ್​ ಕೊಡುತ್ತಾರೆ ಎಂಬ ನಂಬಿಕೆ ಇದೆ.

ಕಥೆ ಅದ್ಭುತವಾಗಿ ರೂಪುಗೊಂಡಿದ್ದು, ಎಲ್ಲರಿಗೂ ಇಷ್ಟವಾಗುತ್ತದೆ. ಸದ್ಯ ಪ್ರೀ-ಪ್ರೊಡಕ್ಷನ್​ ಕೆಲಸಗಳು ಪ್ರಾರಂಭವಾಗಿದ್ದು, ಸದ್ಯದಲ್ಲೇ ಕಲಾವಿದರ ಆಯ್ಕೆ ಅಂತಿಮವಾಗಲಿದೆ’ ಎನ್ನುತ್ತಾರೆ
‘ಮಂಗಳವಾರಂ’ ಚಿತ್ರಕ್ಕೆ ಕನ್ನಡದ ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸುತ್ತಿದ್ದು, ದಾಶರಥಿ ಶಿವೇಂದ್ರ ಅವರ ಛಾಯಾಗ್ರಹಣವಿದೆ, ರಘು ಕುಲಕರ್ಣಿ ಅವರ ಕಲಾ ನಿರ್ದೇಶನವಿರಲಿದೆ. ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಸಾಯಿಕುಮಾರ್​ ಯಡವಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

Related Posts

error: Content is protected !!