ಪವರ್ ಬರ್ತ್ ಡೇಗೆ ಕಬ್ಜ ರಿಲೀಸ್: ಅಪ್ಪು ಹುಟ್ದಬ್ಬಕ್ಕೆ ಚಂದ್ರು ಚಿತ್ರ ಪ್ರದರ್ಶನ…

ಕರ್ನಾಟಕ ಮಾತ್ರವಲ್ಲದೆ, ಇಡೀ ಭಾರತಾದ್ಯಂತ ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಕನ್ನಡಿಗರ ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ”, 2023 ರ ಮಾರ್ಚ್ 17 ಅಂದರೆ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ನಾಡಿನ ದೊಡ್ಡ ಹಬ್ಬವಾದ ಯುಗಾದಿ ಕೂಡ ಸಮೀಪದಲ್ಲಿರುವುದು ವಿಶೇಷ.

ಇಂಡಿಯನ್ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಮುಖ ಪಾತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಿಸಿರುವ ಹಾಗೂ ಆರ್ ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ” ಚಿತ್ರಕ್ಕೆ ಪುನೀತ್ ರಾಜಕುಮಾರ್ ಅವರು ನೀಡುತ್ತಿದ್ದ ಪ್ರೋತ್ಸಾಹ ಅಪಾರ. ಚಿತ್ರದ ಕೆಲವು ತುಣುಕುಗಳನ್ನು ಅವರಿಗೆ ತೋರಿಸಿದ್ದಾಗ ಹಾಲಿವುಡ್ ಚಿತ್ರ ಇದ್ದ ಹಾಗೆ ಇದೆ ಎಂದು ಹೇಳಿ ಮೆಚ್ಚುಗೆ ಸೂಚಿಸಿದ್ದರು. ಸಹೃದಯಿ, ಅಭಿಮಾನಿಗಳ ಪಾಲಿಗಂತೂ ದೇವರೆ ಆಗಿರುವ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ನಮ್ಮ “ಕಬ್ಬ” ಚಿತ್ರವನ್ನು ಪ್ರೇಕ್ಷಕರ ಮಡಿಲಿಗೆ ಹಾಕುತ್ತಿದ್ದೇವೆ.

ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ ಹಾಗೂ ಹೊಸವರ್ಷದ ಮೊದಲ ದಿನವಾದ ಯುಗಾದಿ ಹಬ್ಬದ ಸಮೀಪದಲ್ಲೇ ನಮ್ಮ ಚಿತ್ರ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ ಎಂದು ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಸಂಸ್ಥೆ ತಿಳಿಸಿದೆ‌.

ಕಳೆದವರ್ಷ ಕನ್ನಡದ ಸಾಕಷ್ಟು ಚಿತ್ರಗಳು ಭರ್ಜರಿ ಯಶಸ್ವಿಯಾಗಿ ಇಡೀ ವಿಶ್ವವೇ ಕನ್ನಡ ಚಿತ್ರರಂಗದ ಕಡೆ ನೋಡುವಂತಾಗಿತ್ತು. ಈಗ ಎಲ್ಲೆಡೆ ಅಷ್ಟೇ ಕುತೂಹಲದಿಂದ ಕಾಯತ್ತಿರುವ ಹಾಗೂ ಐಎಂಡಿಬಿ 2023ರ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡಿದಿರುವ ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಚಿತ್ರ “ಕಬ್ಜ”ದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಆಭಿಮಾನಿಗಳ ಕಾತುರಕ್ಕೆ ಚಿತ್ರತಂಡದಿಂದ ಉತ್ತರ ಸಿಕ್ಕಿದೆ.

ಈಗಾಗಲೇ ಫಸ್ಟ್ ಲುಕ್, ಟೀಸರ್ ಮೂಲಕ ಅಭಿಮಾನಿಗಳ ಮನ ಗೆದ್ದಿರುವ “ಕಬ್ಜ” ಚಿತ್ರ ಅತೀ ದೊಡ್ಡ ಯಶಸ್ಸು ಕಾಣಲಿ ಎಂಬುದೇ ಪ್ರತಿಯೊಬ್ಬ ಕನ್ನಡಾಭಿಮಾನಿಯ ಹಾರೈಕೆ.

Related Posts

error: Content is protected !!